About the Author

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು.

ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ನಾಗೇಶ್ ಅವರು ಹಲವಾರು ಲೇಖಕರಿಗೆ ಪ್ರಜಾವಾಣಿ ಸುಧಾ ಪತ್ರಿಕೆಗಳಲ್ಲಿ ಅವಕಾಶ ನೀಡಿ ಪ್ರೋತ್ಸಾಹ ನೀಡಿದ್ದಾರೆ. ಅಕ್ಷರ ಪ್ರಕಾಶನ ಪ್ರಕಟಿಸಿದ ಇವರ ಇರುವುದೊಂದೇ ಭೂಮಿ ಪುಸ್ತಕ ಕನ್ನಡದಲ್ಲಿ ಪರಿಸರ, ವಿಜ್ಞಾನದ ಬಗ್ಗೆ ಮೂಡಿ ಬಂದ ಮಹತ್ವದ ಕೃತಿಗಳಲ್ಲೊಂದು. ಪ್ರಜಾವಾಣಿಯಲ್ಲಿ ಪ್ರತೀ ಬುಧವಾರ ಬರುವ ವಿಜ್ಞಾನ ವಿಶೇಷ ಅಂಕಣ ಎಲ್ಲ ವಯೋಮಾನದವರಿಗೆ ವಿಜ್ಞಾನವನ್ನು ಅದರ ಸಾಮಾಜಿಕ ಆಯಾಮಗಳೊಂದಿಗೆ ಸರಳವಾಗಿ ವಿವರಿಸುತ್ತದೆ. ಅವರ ಪ್ರಕಟಿತ ಕೃತಿಗಳು, ಗಗನ ಸಖಿಯರ ಸೆರಗ ಹಿಡಿದು, ನಮ್ಮೊಳಗಿನ ಬ್ರಹ್ಮಾಂಡ, ಕೆರೆಯಲಿ ಚಿನ್ನ ಕೆರೆಯೇ ಚಿನ್ನ, ಗುಳಿಗೆ ಗುಮ್ಮ(ಮಕ್ಕಳ ನಾಟಕ), ಗುರುಗ್ರಹದಲ್ಲಿ ದೀಪಾವಳಿ, ಕ್ಯಾಪ್ಸೋಲಗಿತ್ತಿ, ಮಿನುಗುವ ಮೀನು, ಕುಲಾಂತರಿ ಕೋತಿ, ಅಂತರಿಕ್ಷದಲ್ಲಿ ಮಹಾಸಾಗರ, ಮಂಗಳನಲ್ಲಿ ಜೀವಲೋಕ, ಅದು ವಿಸ್ಮಯ, ಇದು ವಿಷಮಯ, ಪ್ರತಿದಿನ ಪರಿಸರ ದಿನ, ಮುಷ್ಟಿಯಲ್ಲಿ ಮಿಲೆನಿಯಂ, ಸುರಿಹೊಂಡ, ಭರತ ಖಂಡ, ಅಕ್ಕರೆ ಅಕ್ಕಿ, ಸೇರಿದಂತೆ ಪರಿಸರ, ವಿಜ್ಞಾನಗಳಿಗೆ ಸಂಬಂಧಿಸಿದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅವರ ಸಾಧನೆಗೆ ಮಾಧ್ಯಮ ಅಕಾಡೆಮಿಯ ಜೀವಮಾನ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿಜ್ಞಾನ ಅಕಾಡೆಮಿ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಗೌರವಗಳು ಸಂದಿವೆ.

ನಾಗೇಶ ಹೆಗಡೆ

(14 Feb 1948)

Books by Author

Books about Author

BY THE AUTHOR