ರಹಮತ್ ತರೀಕೆರೆ ಅವರ ಸಾಹಿತ್ಯ ವಿಮರ್ಶೆ ಮತ್ತು ವಿಶ್ಲೇಷಣಾತ್ಮಕ ಬರಹಗಳನ್ನು ಹೊಂದಿರುವ ಕೃತಿಯಿದು. ಕುವೆಂಪು, ರಾಮಚಂದ್ರಶರ್ಮ, ನಿಸಾರ್, ತೇಜಸ್ವಿ, ಶಾಂತಿನಾಥ ದೇಸಾಯಿ, ಶಿವರಾಮ ಕಾರಂತ, ಕೆ.ವಿ. ಸುಬ್ಬಣ್ಣ, ಎಂ.ಎಚ್. ಚೆನ್ನಯ್ಯ, ಲಂಕೇಶ್, ಶಂಕರ ಮೊಕಾಶಿ ಪುಣೇಕರ ಹಾಗೂ ಡಿ.ಆರ್. ನಾಗರಾಜ್ ಅವರ ಸಾಹಿತ್ಯ ಕೃತಿಗಳನ್ನಾಧರಿಸಿದ ಬರಹಗಳಿವೆ. ಹಾಗೆಯೇ ಪ್ರಾಚೀನ ಮತ್ತು ಮಧ್ಯಕಾಲೀನಕ್ಕೆ ಸೇರಿದ ವಡ್ಡಾರಾಧನೆ, ರಾಘವಾಂಕ, ಬಸವಣ್ಣ, ಶೂನ್ಯಸಂಪಾದನೆ, ರಾಜಾವಳಿ ಕತೆ ಕುರಿತ ಲೇಖನಗಳಿವೆ. ಮುಸ್ಲಿಂ ತತ್ವಪದಕಾರರು: ಹೀಗೆನ್ನುವುದು ಯಾಕೆ ಕಷ್ಟ? ಸೇರಿದಂತೆ ಒಟ್ಟು 20 ಲೇಖನಗಳಿವೆ. ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
"ಇದೊಂದು ಬಿಕ್ಕಟ್ಟಿನ ಕಾಲ; ಚರಿತ್ರೆಯಲ್ಲಿ ಬಿಕ್ಕಟ್ಟಿಲ್ಲದ ಕಾಲವಾದರೂ ಯಾವುದು? ಆದರೆ ನಮ್ಮ ನಾಡಿನ ಚರಿತ್ರೆಯಲ್ಲಿ ಯಾವತ್ತೂ ಇಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ. ಜಗತ್ತಿನ ದೊಡ್ಡ ಮಿಲಿಟರಿ ಶಕ್ತಿಗಳು, ಕೋಮುವಾದ, ಪ್ರಭುತ್ವಗಳು ಹುಟ್ಟಿಸಿರುವ ಕ್ರೌರ್ಯ, ಅದಕ್ಕೆ ಎದುರಾಗಿ ಹುಟ್ಟಿಕೊಂಡ ಜನರ ಪ್ರತಿರೋಧಗಳು, ಮಧ್ಯಮವರ್ಗದ ಅವಕಾಶವಾದಿ ವರ್ತನೆ, ಜನರಿಗಾಗಿ ಕೆಲಸ ಮಾಡುವ ಚಳುವಳಿಗಾರರ ದಮನ – ಇವೆಲ್ಲವೂ ನಮ್ಮ ಓದು ಮತ್ತು ಬರೆಹದ ಮೇಲೆ ಹೇಗೋ ಆವರಿಸಿಕೊಂಡಿವೆ. ಇವನ್ನು ಮರೆತು ಬರೆಯುವಂತಿಲ್ಲ; ಮರೆಯದೆ ಬರೆದರೆ, ಬರೆದ ಬರೆಹವು ಆತ್ಮವಿಶ್ವಾಸ ಕೊಡುವುದಕ್ಕೆ ಬದಲಾಗಿ ಪ್ರಶ್ನೆಯಾಗಿ ಎದುರು ನಿಂತು ಕಾಡುತ್ತದೆ. ಇದನ್ನೆ ಕತ್ತಿಯಂಚಿನ ಹಾದಿಯಲ್ಲಿ ನಡೆವ ಕಷ್ಟ ಎಂದು ನಾನು ಭಾವಿಸಿದ್ದೇನೆ. ಕತ್ತಿಯಲುಗಿನ ಮೇಲೆ ನಡೆದರೆ ಕಾಲು ಕತ್ತರಿಸಿ ಹೋಗುತ್ತದೆ; ಬಾಗಿ ಎತ್ತಿಕೊಂಡರೆ ಕೈಯ ಆಯುಧವಾಗುತ್ತದೆ; ಸ್ವವಿಮರ್ಶೆಯನ್ನಾಗಿ ಮಾಡಿ ಚುಚ್ಚಿಕೊಂಡರೆ, ಒಡಲಲ್ಲಿ ಮುರಿದು ನೋವುಂಟು ಮಾಡುತ್ತದೆ’ ಎಂದು ರಹಮತ್ ತರೀಕೆರೆ ಮುನ್ನುಡಿಯಲ್ಲಿ ಹೇಳಿದ್ದಾರೆ.
©2025 Book Brahma Private Limited.