ಕಲಾವಿದ, ಲೇಖಕ ಅ.ಲ. ನರಸಿಂಹನ್ ಅವರು ಮೂಲತಃ ಬೆಂಗಳೂರಿನವರು. ತಂದೆ ಅಗ್ರಹಾರ ತಿರುಮಲಾಚಾರ್, ತಾಯಿ-ಅಲಮೇಲಮ್ಮ. `ಅಲನ' ಎಂದೇ ಚಿರಪರಿಚಿತರು. ‘ಕರ್ನಾಟಕ ಚಿತ್ರಕಲೆಯ ಸಾಂಸ್ಕೃತಿಕ ಅಧ್ಯಯನ’ ವಿಷಯದಡಿ ಮಹಾಪ್ರಬಂಧ ರಚಿಸಿ ಡಾಕ್ಟರೇಟ್ ಪದವೀಧರರು. ಚಿತ್ರಕಲೆ, ಶಿಲ್ಪಕಲೆಯ ಕ್ಷೇತ್ರಗಳಲ್ಲಿ ಅಗಾಧ ಪಾಂಡಿತ್ಯ ಪಡೆದಿದ್ದು. ಮುದ್ರಣ-ತಾಂತ್ರಿಕ ಕಲೆ, ಚಿತ್ರಕಲೆಯಲ್ಲಿ ಡಿಪ್ಲೊಮಾ, ಶಾಸನ ವ್ಯಾಸಂಗ ಸೇರಿದಂತೆ ಹತ್ತು ಹಲವು ವಿದ್ಯೆಗಳಲ್ಲಿ ಪರಿಣಿತರು.
ಸರಕಾರಿ ಮುದ್ರಣಾಲಯದಲ್ಲಿ ವಿವಿಧ ಹುದ್ದೆ, ರಾಜ್ಯ ಗ್ಯಾಜೆಟಿಯರ್ ಇಲಾಖೆಯಲ್ಲಿ ಅನ್ವೇಷಕರಾಗಿದ್ದರು. ಚಿತ್ರಕಲೆ, ಶಿಲ್ಪಕಲೆ ಕುರಿತಂತೆ ನೂರಾರು ಲೇಖನಗಳನ್ನುಬರೆದಿದ್ದು, ಹಲವು ಸ್ಮರಣಸಂಚಿಕೆ, ಗೌರವ ಗ್ರಂಥಗಳಲ್ಲೂ ಇವರ ಲೇಖನಗಳು ಪ್ರಕಟಗೊಂಡಿವೆ. 25ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಕಲಾವಿಕಾಸ, ಕಲಾವಾರ್ತೆ ಸೇರಿದಂತೆ ಹಲವು ಪತ್ರಿಕೆಗಳ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದು, 30 ಗ್ಯಾಜೆಟಿಯರ್ ಗ್ರಂಥಗಳ ವಿನ್ಯಾಸ, ಚಿತ್ರ. ಮುದ್ರಣದ ಮೇಲ್ವಿಚಾರಣೆ ಸೇರಿದಂತೆ ಚಿತ್ರಕಲಾ ಪ್ರಪಂಚ, ಶಿಲ್ಪಕಲಾ ಪ್ರಪಂಚ ಎಂಬ ಕಲಾ ಕೋಶಗಳನ್ನು ಸಂಪಾದಿಸಿದ್ದಾರೆ.
ರಾಜ್ಯಮಟ್ಟದಲ್ಲಿ ಹಲವು ಸಾಂಘಿಕ ಚಿತ್ರಕಲಾ ಪ್ರದರ್ಶನಗಳ ಆಯೋಜನೆ ಮಾಡುತ್ತಾ ಕಲಾ ಸೇವೆಯಲ್ಲಿತೊಡಗಿಸಿಕೊಂಡಿದ್ದ ಅವರಿಗೆ ಲಲಿತಕಲಾ ಅಕಾಡೆಮಿ ವಾರ್ಷಿಕ ಕಲಾ ಪ್ರದರ್ಶನದಲ್ಲಿ ಬಹುಮಾನ, ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ ಬಹುಮಾನ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ.