‘ದಲಿತ ಚಳುವಳಿಯ ಹೆಜ್ಜೆಗಳು’ ಪತ್ರಕರ್ತ, ಲೇಖಕ ಶಿವಾಜಿ ಗಣೇಶನ್ ಅವರ ಕೃತಿ. ಈ ಕೃತಿಗೆ ರಾಮದೇವ ರಾಕೆ ಅವರ ಬೆನ್ನುಡಿಯ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ದಲಿತ ಚಳವಳಿಯ ಹೆಜ್ಜೆಗಳು ಕೃತಿಯಲ್ಲಿ ಕರ್ನಾಟಕದಲ್ಲಿ ಎಪ್ಪತ್ತರ ದಶಕದ ಆರಂಭದಲ್ಲಿ ರೂಪುಗೊಂಡು ಬಲಿಷ್ಠವಾಗಿ ಬೆಳೆದ ದಲಿತ ಚಳವಳಿಯ ಹುಟ್ಟು ಬೆಳವಣಿಗೆಯ ಚಾರಿತ್ರಿಕ ನಡೆ ಕರಾರುವಕ್ಕಾಗಿ ದಾಖಲಾಗಿದ್ದು, ಈ ಕುರಿತು ಇರುವ ಗೊಂದಲಗಳಿಗೆ ಬೆಳಕು ಚೆಲ್ಲುತ್ತದೆ’ ಎನ್ನುತ್ತಾರೆ. ಹಾಗೇ ‘ಮಲ ಹೊರುವ ಪದ್ಧತಿ ನಿಷೇದ ಮುಂತಾದ ದಲಿತಪರ ಕಾಯ್ದೆಗಳ ಅನುಷ್ಠಾನ ಹಾಗೂ ವೈಚಾರಿಕ ವಿಚಾರಧಾರೆಯಿಂದ ದಲಿತರಲ್ಲಿ ಜಾಗೃತಿ ಮೂಡಿಸುತ್ತಿದ್ದ ಬಿ. ಬಸವಲಿಂಗಪ್ಪ ಮೈಸೂರಿನಲ್ಲಿ ನಡೆದ ಹೊಸ ಅಲೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಂದರ್ಭಿಕವಾಗಿ ಆಡಿದ ಕನ್ನಡ ಸಾಹಿತ್ಯದಲ್ಲಿ ಏನಿದೆ, ಬರೀ ಬೂಸಾ ಎಂಬ ಮಾತಿನಿಂದ ಮಂತ್ರಿ ಪದವಿ ಕಳೆದುಕೊಂಡು ಮೂಲೆಗುಂಪಾದರೂ ಬಲಿಷ್ಠ ದಲಿತ ಚಳವಳಿ ರೂಪುಗೊಳ್ಳಲು ಸ್ಫೂರ್ತಿಯಾದದ್ದು ಇತಿಹಾಸ. ಬೂಸಾ ಘಟನೆ ನೆಪದಿಂದ ಸವರ್ಣೀಯರು ತಮ್ಮ ಮೇಲೆ ರಾಜ್ಯಾದ್ಯಂತ ನಡೆಸಿದ ಹಿಂಸಾಚಾರ ದಲಿತ ಸಮುದಾಯ ಒಟ್ಟಾಗಲು ಚಾಲನೆನೀಡಿತು. ಈ ಹಿನ್ನೆಲೆಯಲ್ಲಿ ಬರಹಗಾರರಾದ ದಲಿತ ಯುವಕರು ಪರಿಶಿಷ್ಟ ಜಾತಿ/ಪಂಗಡಗಳ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಲು ನಡೆಸಿದ ಪ್ರಯತ್ನ ನಂತರ ಪಂಚಮ ಪತ್ರಿಕೆ ಆರಂಭದಿಂದ ಮೂಡಿದ ಜಾಗೃತಿಯಿಂದಾಗಿ ದಲಿತ ಚಳವಳಿ(ದಲಿತ ಸಂಘರ್ಷ ಸಮಿತಿ) ತಳೆದುದನ್ನು ನಿರೂಪಿಸುವಲ್ಲಿ ಲೇಖಕರು ಸಫಲರಾಗಿದ್ದಾರೆ. ಈ ಕೃತಿಯು ಶಿವಾಜಿ ಗಣೇಶನ್ ಅವರ ಅನುಭವ ಕಥನದ ಭಾಗವೇ ಆಗಿದೆ. ಕೃತಿಯಲ್ಲಿರುವ ವ್ಯಕ್ತಿ ಚಿತ್ರಗಳು ದಲಿತ ಸಮುದಾಯದ ವಿವಿಧ ಮಾದರಿಗಳನ್ನು ಅನಾವರಣ ಮಾಡಿದೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.