ಪತ್ರಕರ್ತ, ಲೇಖಕ ಶಿವಾಜಿ ಗಣೇಶನ್ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ. ಪ್ರೌಢಶಾಲೆವರೆಗೆ ಓದಿದ್ದು ಮಳವಳ್ಳಿ. ಪಿಯುಸಿಯಿಂದ ಸ್ನಾತಕೋತ್ತರ ಪತ್ರಿಕೋದ್ಯಮ ಶಿಕ್ಷಣದವರೆಗೆ ವ್ಯಾಸಂಗ ಮಾಡಿದ್ದು ಮೈಸೂರಿನ ಮಹಾರಾಜ ಕಾಲೇಜು ಮತ್ತು ಮಾನಸಗಂಗೋತ್ರಿಯಲ್ಲಿ. ಮೈಸೂರಿನಲ್ಲಿ ವ್ಯಾಸಂಗ ಮಾಡುವಾಗ ದೇವನೂರ ಮಹಾದೇವ ಮುಂತಾದ ಸ್ನೇಹಿತರಿಂದ ಲೋಹಿಯಾವಾದಿಗಳು ಮತ್ತು ಪ್ರಗತಿಪರರ ಸ್ನೇಹ. ಬೆಂಗಳೂರಿನಲ್ಲಿ ಸಿದ್ದಲಿಂಗಯ್ಯ ಅವರ ಮತ್ತು ಎಡಪಂಥೀಯ ವಿಚಾರಧಾರೆಯತ್ತ ಒಲವು. ಆ ಸ್ನೇಹವೇ ಓದಿನ ಜೊತೆಗೆ ಹೋರಾಟದ ಹಾದಿಹಿಡಿಯಲು ಕಾರಣವಾಯಿತು. ಹಾಗಾಗಿ ಪಂಚಮ ಪತ್ರಿಕೆಯ ಆರಂಭ ಮತ್ತು ದಲಿತ ಸಂಘರ್ಷ ಸಮಿತಿಯ ಪ್ರಾರಂಭದಿಂದಲೂ ಅದರ ಹೋರಾಟಗಳಲ್ಲಿ ಭಾಗಿ. ದಲಿತ ಚಳವಳಿಗೆ ಒಂದು ಸೈದ್ಧಾಂತಿಕ ತಳಹದಿ ಒದಗಿಸಲು ಹಲವು ಚಳವಳಿಗಳ ಅಧ್ಯಯನ ಮಾಡಿ ಪೂರಕ ಮಾಹಿತಿ ಒದಗಿಸುವ ಜೊತೆಗೆ ಸಕ್ರಿಯವಾಗಿ ಭಾಗವಹಿಸುವಿಕೆ. ಬಸವಲಿಂಗಪ್ಪನವರು ಕನ್ನಡ ಸಾಹಿತ್ಯವನ್ನು ಬೂಸಾ ಎಂದು ಹೇಳಿದ ಸಭೆಯಲ್ಲಿ ಭಾಗವಹಿಸಿದ್ದು. ನಂತರ 1978ರಿಂದ 2011ರವರೆಗೆ ಪ್ರಜಾವಾಣಿಯಲ್ಲಿ ವಿವಿಧ ಹಂತದಲ್ಲಿ ಪತ್ರಕರ್ತನಾಗಿ ಕೆಲಸ. ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ತುಮಕೂರು ಮತ್ತು ನವದೆಹಲಿಯಲ್ಲಿ ವರದಿಗಾರನಾಗಿ ಕೆಲಸ. ಪ್ರಜಾವಾಣಿಯಿಂದ ನಿವೃತ್ತನಾದ ಬಳಿಕ ತುಮಕೂರಿನ ರೇಡಿಯೋ ಸಿದ್ಧಾರ್ಥದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.