ವ್ಯಕ್ತಿಗೆ ಬಾಳು ಮುಖ್ಯ, ಬದುಕು ಮುಖ್ಯ, ಅದು ಒಡ್ಡುವ ನಾನಾ ಸವಾಲುಗಳೂ ಸನ್ನಿವೇಶಗಳೂ ಪರಿಸ್ಥಿತಿಗಳೂ ಮುಖ್ಯ, ಇದನ್ನೆಲ್ಲ ಕಾಣಲು ಕನ್ನಡಕದಂತೆ ಕಾವ್ಯ ಇದೆಯೇ ಹೊರತು, ಕಾವ್ಯವನ್ನು ಇಲ್ಲಿ ಒಂದು ಜಗಮಗಿಸುವ ಪ್ರತಿಮೆಯಂತೆ ನೀವು ನೋಡಲು ಸಾಧ್ಯವಿಲ್ಲ ಎಂಬುದನ್ನು ಅನಂತ್ ಕುಣಿಗಲ್ ಅವರ ‘ಎದೆಯ ದನಿ ಕೇಳಿರೋ’ ಕವನ ಸಂಕಲನ ಪ್ರಸ್ತುತಪಡಿಸುತ್ತದೆ. ಅಂದರೆ ಇಲ್ಲಿ ಕಾವ್ಯವೇ ತನ್ನ ಸೌಂದರ್ಯದಿಂದ ಎದ್ದು ಕಾಣುವುದಿಲ್ಲ. ಬದಲಾಗಿ ತಾನು ತೋರಿಸಬೇಕಾದುದನ್ನು ಸರಳವಾಗಿ ಬೆರಳೆತ್ತಿ ತೋರಿಸಿ ತಾನು ವಿರಮಿಸುತ್ತದೆ. ಮೊದಲೇ ಎಚ್ಚರಿಸುತ್ತಿದ್ದೇನೆ ನನ್ನನ್ನು ಓದಬೇಡಿ!! ಯಾಕೆಂದರೆ ನಾನು ಸರಿ ಇಲ್ಲ ಇದ್ದದ್ದನ್ನು ಇದ್ದ ಹಾಗೆಯೇ ಹೇಳಿಬಿಡುತ್ತೇನೆ ಅದಕ್ಕೆ ನನ್ನನ್ನು ಕವಿತೆ ಎಂಬರು ಎಂಬಂಥ ಸಾಲುಗಳಲ್ಲಿ ಈ ಗುಣವನ್ನು ಕಾಣಬಹುದು. ಇಲ್ಲಿಯ ಗುಣವೆಂದರೆ ನೇರ ಹೇಳುವಿಕೆ ಮತ್ತು ಅದನ್ನು ಕ್ಲುಪ್ತ ಸಾಲುಗಳಲ್ಲಿ ಹೆಚ್ಚಿನ ವೈಭವವಿಲ್ಲದೆ ಹೇಳಿಬಿಡುವ ಸರಳತೆ. ನಾನು ನಾನೇ! ನಿಮ್ಮಂತೆ ಏಕಾಗಬೇಕು? ಆಗ ಸಿಗುವ ಬೆಲೆಯಾದರೂ ಏನು? ಗುರುತಾದರೂ ಏನು? ತಿಳಿದದ್ದನ್ನು ತಿಳಿಸಲು ಬಿಡಿ ತಪ್ಪಿದ್ದರೆ ತಿದ್ದಿ ಬಿಡಿ ಅಳಿಸದಿರಿ ನೈತಿಕತೆಯ ಕೊಲ್ಲದಿರಿ ತಾತ್ವಿಕತೆಯ ಹೀಗೆಂಬ ಸಾಲುಗಳಲ್ಲಿ ಕಾವ್ಯದ ಮ್ಯಾನಿಫೆಸ್ಟೋ ಸ್ಪಷ್ಟವಾಗಿದೆ. ಮನುಷ್ಯನ ಅಂತರಂಗವನ್ನು ಸದಾಕಾಲ ಮೀಟುತ್ತಿರುವ ಮೂಲಭೂತ ಸಂಕಟಗಳೇ ಅವರ ಕಾವ್ಯದ ವಸ್ತು. ನೈತಿಕತೆ ಹಾಗೂ ಹಾಗೂ ತಾತ್ವಿಕತೆ ಅವರಿಗೆ ಬೇರೆ ಬೇರೆಯಲ್ಲ ಎಂಬುದು ಖಚಿತವಾಗಿದೆ. ಯಾವುದರಲ್ಲಿ ನೈತಿಕತೆಯಿಲ್ಲವೋ ಅದು ಕವಿಯ ತಾತ್ವಿಕತೆಯಾಗಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಿದೆ.
https://vistaranews.com/art-literature/sunday-read-new-kannada-poetry-book-edeya-dani-keliro-a-introduction/272297.html - ವಿಸ್ತಾರ
©2024 Book Brahma Private Limited.