‘ಬೆಳ್ಳಕ್ಕಿ ಹಿಂಡು’ ಕೃತಿಯು ಸುಬ್ಬಣ್ಣ ರಂಗನಾಥ ಎಕ್ಕುಂಡಿ ಅವರ ಸಮಗ್ರ ಕಾವ್ಯವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಭವಕೆ ಬರುವಾಗಲೇ ಭಗವಂತ ಇಟ್ಟಿರುವ ಮಣಿದೀಪವೊಂದೊಂದು ಹೃದಯದೊಳಗೆ ಕೊನೆಗೊಮ್ಮೆ ಕತ್ತಲು ಕವಿದಾಗ ಇರಲೆಂದು ಮುಕ್ತಿ ಲಿಪಿ ಓದಿಸಲು ನಿಮ್ಮ ಬಳಿಗೆ… ದೂರವಿದ್ದವರನ್ನು ಹತ್ತಿರಕೆ ತರಬೇಕು ಹರಿವ ಹೊಳೆಗೂ ಉಂಟು ಎರಡು ತೋಳು, ನೆಲವಪ್ಪಿದ ಎರಡು ದಂಡೆಗಳು ಬಾಂಧವ್ಯ ಬೆಸೆಯಬೇಕಲ್ಲವೆ?… ಎನ್ನುವ ಈ ಎರಡು ಬೇರೆ ಬೇರೆ ಪದ್ಯದ ಸಾಲುಗಳು ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ `ಬಕುಲದ ಹೂವುಗಳು‘ ಕವನ ಸಂಕಲನದಿಂದ ಉದ್ಧರಿಸಿದಂಥವು. ದೈವತ್ವ, ಮನುಷ್ಯ ಸಂಬಂಧ – ಎರಡರಲ್ಲೂ ಬಹಳವಾಗಿ ನಂಬಿಕೆಯಿದ್ದ ಎಕ್ಕುಂಡಿಯವರ ಮತ್ತೆರಡು ವಿಚಿತ್ರ ಆಸಕ್ತಿ ಎಂದರೆ ಮಧ್ವ ಸಿದ್ಧಾಂತ ಮತ್ತು ಮಾರ್ಕ್ಸ್ ವಾದ ಪತಿಪಾದನೆ. ಇಲ್ಲಿ ಮಧ್ವ ಸಿದ್ಧಾಂತ ಎನ್ನುವುದನ್ನು ಕೊಂಚ ವ್ಯಾಪಕವಾದ ಅರ್ಥದಲ್ಲಿ ನೋಡಿ: ಎಕ್ಕುಂಡಿಯವರಿಗೆ ಮಧ್ಯಕಾಲೀನ ಭಾಗವತ ಪರಂಪರೆಯಲ್ಲಿದ್ದ ವಿಶ್ವಾಸ ಮತ್ತು ಉದಾರ ನಿಲುವು ಇವು ಅಂತರ್ಗತವಾಗಿತ್ತು ಎಂದುಕೊಳ್ಳಬಹುದೇನೋ. ಅಂತೆಯೇ ಎಕ್ಕುಂಡಿ ಭಾಗವತ ಹಿನ್ನೆಲೆಯ ಅನೇಕ ಪೌರಾಣಿಕ ಸಂಗತಿಗಳನ್ನು ತೆಗೆದುಕೊಂಡು ಪದ್ಯ ರಚಿಸಿದ್ದಾರೆ. ಕಥನ ಕವನಗಳೂ ಇಲ್ಲಿವೆ.
©2024 Book Brahma Private Limited.