`ಕೃಷ್ಣಾ ತೊರೆ’ ಕೃತಿಯು ಕವಿ `ಭುಜೇಂದ್ರ ಮಹಿಷವಾಡಿ ಅವರ ಸಮಗ್ರ ಕಾವ್ಯ ಕೃತಿ. ಲೇಕಕ ಪಿ.ಜಿ. ಕೆಂಪಣ್ಣವರ ಸಂಪಾದಿಸಿದ್ದಾರೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಭುಜೇಂದ್ರ ಮಹೀಶವಾಡಿಯವರು ಕನ್ನಡದ ಮಹತ್ವಪೂರ್ಣ ಲೇಖಕರಲ್ಲಿ ಒಬ್ಬರು. ಕವಿಯಾಗಿಯೇ ಹೆಚ್ಚು ಗುರುತಿಸಿಕೊಂಡಿದ್ದು, ಐದು ಕವನ ಸಂಕಲನಗಳನ್ನು, ಹನ್ನೊಂದು ಸಂಪಾದನಾ ಕೃತಿಗಳನ್ನು, ಎಂಟು ಸಂಶೋಧನಾ ಕೃತಿಗಳನ್ನು, ಮೂರು ಚರಿತ್ರ ಗ್ರಂಥಗಳನ್ನು ಎರಡು ಸಂಸ್ಮರಣ ಸಂಪುಟಗಳನ್ನು ಹಾಗೂ 140ಕ್ಕಿಂತಲೂ ಅಧಿಕ ಲೇಖನಗಳನ್ನು ಕನ್ನಡಕ್ಕೆ ನೀಡಿದವರು. ಇದರೊಂದಿಗೆ 16 ಜನರ ಕೃತಿಗಳಿಗೆ ಅತ್ಯಂತ ಮೌಲ್ವಿಕ ಮುನ್ನುಡಿಗಳನ್ನು ಬರೆದುಕೊಟ್ಟಿರುವ ಶ್ರೀಯುತರ ಸಾಹಿತ್ಯ ಕೃಷಿಯ ಹರಹು ಕಂಡಾಗ ಬೆರಗು ಮೂಡುತ್ತದೆ. ಇಷ್ಟೊಂದು ಸುಲಲಿತ ಹಾಗೂ ಗಂಭೀರ ಸಾಹಿತ್ಯವನ್ನು ರಚಿಸಿದ ಮಹಿಷವಾಡಿಯವರನ್ನು ಕನ್ನಡಿಗರು ಗುರುತಿಸಲೇ ಇಲ್ಲವೆಂಬುದು ವಿಷಾದನೀಯ ಹೀಗಾಗಿ ಅವರ ಯಾವ ಕೃತಿಗಳಿಗೂ ಪ್ರಶಸ್ತಿ ಪುರಸ್ಕಾರಗಳು ದಕ್ಕಲೇ ಇಲ್ಲ. ಜೊತೆಗೆ ಅವರ ಕಾವ್ಯ, ಸಂಶೋಧನೆ ಹಾಗೂ ಇತರ ಸಾಹಿತ್ಯದ ಕುರಿತು ವಿಚಾರ ಸಂಕಿರಣಗಳಾಗಲಿ, ಲೇಖನಗಳಾಗಲಿ, ಅಧ್ಯಯನಗಳಾಗಲಿ ನಡೆದಿಲ್ಲ. ಭುಜೇಂದ್ರರ ಶಿಷ್ಯರೂ, ಅವರ ಕಾವ್ಯದ ಕುರಿತ ಅಪಾರ ಒಲವುವುಳ್ಳ ಡಾ. ಶಿವಾನಂದ ಮೂಲಿಮನಿಯವರು ತಮ್ಮ ಮಹಾಪ್ರಬಂಧವಾದ 'ಆಧುನಿಕ ಕನ್ನಡ ಸಾಹಿತ್ಯದಲ್ಲಿ ಪ್ರೇಮ ಗೀತೆಗಳು" ಎಂಬುದರಲ್ಲಿ ಮಹಿಷವಾಡಿಯವರ ಪ್ರೇಮಗೀತೆಗಳ ಕುರಿತು ವಿಸ್ತಾರವಾದ, ವಿಶ್ಲೇಷಣಾತ್ಮಕ ವಿವರಣೆ ನೀಡಿದ್ದರೆ, ಶ್ರೀ ರಾಜಶೇಖರ ಕರ್ಕಿ, ಡಾ. ಎಂ.ಎ. ಜಯಚಂದ್ರ, ಡಾ. ಬಿ.ಬಿ. ರಾಯನಾಡ ಹಾಗೂ ಶ್ರೀ ನಾ ಕೃ ವತ್ತಾರ ಮುಂತಾದವರು ಸಾಂದರ್ಭಿಕವಾಗಿ ಭುಜೇಂದ್ರರ ಕಾವ್ಯಗಳ ಕಿರು ಪರಿಚಯವನ್ನು ಮಾಡಿದ್ದು ಸುತ್ಯಾರ್ಹ. ಪ್ರಸ್ತುತ 'ಕೃಷ್ಣಾತೊರೆ'' ಎಂಬ ಈ ಕೃತಿಯಲ್ಲಿ ಅವರ ಐದು ಪ್ರಕಟಿತ ಕವನ ಸಂಕಲನಗಳನ್ನು, ನಾಲ್ಕು ಅಪ್ರಕಟಿತ ಕವನ ಸಂಗ್ರಹಗಳನ್ನು ಜೊತೆಗೆ ಬಿಡಿಗವನಗಳನ್ನು ಕಲೆಹಾಕಿ, ಒಂದೆಡೆ ಜೋಡಿಸಿ ಕನ್ನಡಿಗರಿಗೆ ಕೊಡುವ ಪ್ರಯತ್ನ ಮಾಡಲಾಗಿದೆ. ಗಡಿಭಾಗದ ಕನ್ನಡ ಚೇತನವಾಗಿರುವ ಚಿ೦ಚಣಿಯ ಮ.ನಿ.ಪ್ರ. ಅಲ್ಲಮಪ್ರಭುದೇವ ಮಹಾಸ್ವಾಮಿಗಳು ಮಹಿಷವಾಡಿಯವರ ಕಾವ್ಯದ ಕುರಿತು ಅಪಾರ ಒಲವನ್ನು ತಾಳಿದವರು. ಅವರ ಅನೇಕ ಕವನಗಳನ್ನು ಓದಿ ಮೆಚ್ಚಿಕೊಂಡು ಇವುಗಳನ್ನೆಲ್ಲ ಒಂದೇ ಹೊತ್ತಿಗೆಯಲ್ಲಿ ಕನ್ನಡಿಗರಿಗೆ ನೀಡಬೇಕೆಂಬ ಅಭಿಲಾಷೆ ತಾಳಿದವರು. ಪೂಜ್ಯರ ಅಭಿಲಾಷೆಗೆ ಕೈಜೋಡಿಸಿದವರು ಭುಜೇಂದ್ರರ ಮಗ ಡಾ. ಅಶೋಕ ಮಹಿಷವಾಡಿ ಹಾಗೂ ಅವರ ಧರ್ಮಪತ್ನಿಯವರು. ಇಡೀ ಕೃತಿಗೆ ತಗಲುವ ವೆಚ್ಚವನ್ನು ಭರಿಸಲು ಒಪ್ಪಿಕೊಂಡು ಆ ಕಾರ್ಯವನ್ನು ಅತ್ಯಂತ ಗೌರವದಿಂದ ನೆರವೇರಿಸಿಕೊಟ್ಟಿದ್ದು ಸುಂದರವಾದ ಕೃತಿ ಸಿದ್ಧವಾಗಲು ಸಹಕಾರಿಯಾಯಿತು. ನಾನು ಭುಜೇಂದ್ರ ಮಹಿಷವಾಡಿಯವರ ಸಾಹಿತ್ಯದ ಕುರಿತು 1998ರಲ್ಲಿ ಮಹಾಪ್ರಬಂಧವನ್ನು ರಚಿಸಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪಡೆದಾಗಿನಿಂದ ಕನ್ನಡದ ಹಿರಿಯ ಕವಿ ನಾಡೋಜ ಚೆನ್ನವೀರ ಕಣವಿಯವರು ''ಮಹಿಷವಾಡಿಯವರ ಸಮಗ್ರ ಕಾವ್ಯ' ವನ್ನು ಕನ್ನಡಿಗರಿಗೆ ನೀಡಬೇಕೆಂಬ ಪ್ರೀತಿಯ ಒತ್ತಾಯ ಮಾಡುತ್ತಲೇ ಬಂದಿದ್ದರು. ಅವರೊಂದಿಗೆ ಡಾ. ಗುರುಲಿಂಗ ಕಾಪಸೆಯವರು, ಡಾ. ಎಂ.ಎಂ. ಕಲಬುರ್ಗಿಯವರು ಹಾಗೂ ಡಾ. ರಾಮಕೃಷ್ಣ ಮರಾಠ, ಡಾ. ದಯಾನಂದ ನೂಲಿ, ಪ್ರಾ, ಚ೦ದ್ರ ಕಾಂತ ಪೋಕಳೆ, ಪ್ರೊ.ಎಸ್.ವಾಯ್ ಹಂಜಿ ಮುಂತಾದವರ ಒತ್ತಾಸೆಯೂ ಇತ್ತು’ ಎಂದಿದೆ.
©2024 Book Brahma Private Limited.