ವಾಲ್ಮೀಕಿ ರಾಮಾಯಣ ಸು.ರುದ್ರಮೂರ್ತಿ ಶಾಸ್ತ್ರೀ ಅವರ ಕೃತಿಯಾಗಿದೆ. ಏಕಪತ್ನಿವೃತ, ಗುರು ಹಿರಿಯರಲ್ಲಿ ಭಕ್ತಿ, ಸತ್ಯವಾದಿತ್ವ, ಪರಿಶುದ್ಧ ನಡವಳಿಕೆ, ಪತಿವ್ರತಾ ಧರ್ಮ ಹೀಗೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಜೀವನವಿಧಾನದ ಸಾರಸರ್ವಸ್ವವಾಗಿದೆ ರಾಮಾಯಣ ಕಾವ್ಯ. ರಾಮಾಯಣ ಭಾರತದ ಸಾಹಿತ್ಯ, ಕಲೆ, ಸಂಗೀತ ಮೊದಲಾದ ವಿಭಿನ್ನ ಮಾಧ್ಯಮಗಳ ವಸ್ತುವಾಗಿ ಈಗಲೂ ಪುನರ್ಜನ್ಮ ಪಡೆಯುತ್ತಲೇ ಇದೆ. ಭಾರತದ ಎಲ್ಲ ಭಾಷೆಗಳಲ್ಲೂ ಮೂಲರಾಮಾಯಣದ ಅನುವಾದಗಳು ಮಾತ್ರವಲ್ಲದೆ, ನಾಟಕ ರೂಪದಲ್ಲಿ, ನೃತ್ಯರೂಪಕಗಳಾಗಿ, ಆಧುನಿಕ ಕಥೆ ಕಾದಂಬರಿಗಳಾಗಿ ಪುಂಖಾನುಪುಂಖವಾಗಿ ಈಗಲೂಬರುತ್ತಲೇ ಇವೆ. ದೇವಾಲಯಗಳಲ್ಲಿ, ಶಿಲ್ಪಕಲೆಗಳಲ್ಲಿ ರಾಮಾಯಣಕ್ಕೆ ಶಾಶ್ವತ ರೂಪ ಕೊಡಲು ಪ್ರಯತ್ನಿಸಲಾಗಿದೆ. ಪಿತೃಭಕ್ತಿಗೆ ರಾಮ, ಸೋದರ ಪ್ರೇಮಕ್ಕೆ ಲಕ್ಷ್ಮಣ, ಭರತ, ಸ್ವಾಮಿಭಕ್ತಿಗೆ ಹನುಮಂತ, ಪಾತಿವ್ರತ್ಯಕ್ಕೆ ಸೀತೆ-ಭಾರತೀಯರಿಗೆ ಮಾತ್ರವಲ್ಲದೆ ಮಾನವ ಕುಲಕ್ಕೆ ಆದರ್ಶ ಪಾತ್ರಗಳು. ಜಗತ್ತು ಎಷ್ಟೇ ಆಧುನಿಕವಾದರೂ, ವ್ಯಕ್ತಿ ಜೀವನ, ಕುಟುಂಬ ಜೀವನ ಮತ್ತು ರಾಷ್ಟ್ರ ಜೀವನಕ್ಕೆ ರಾಮಾಯಣ ಮಾರ್ಗದರ್ಶನ ನೀಡುತ್ತಿದೆ. ಅದರಿಂದಲೇ ಎಷ್ಟೋ ಶತಮಾನಗಳು ಕಳೆದರೂ ರಾಮಾಯಣ ಇಂದಿಗೂ ತನ್ನ ಪ್ರಸ್ತುತತೆಯನ್ನು ಮಾತ್ರವಲ್ಲದೆ, ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ.
©2024 Book Brahma Private Limited.