‘ದ್ರಾವಿಡರು ನಾವು ದ್ರಾವಿಡರು ಅಲ್ಲಮನ ಎಲ್ಲ ಕವಿತೆ’ ಕವಿ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಅವರ ಕವಿತೆಗಳ ಸಮಗ್ರ ಸಂಕಲನ. ಅಲ್ಲಮಪ್ರಭು ಅವರ ನನ್ನ ಭಾರತ(1977), ಕುದರಿಮೋತಿ ಮತ್ತು ನೀಲಗಿರಿ(1989), ಕೆಡಹಬಲ್ಲರು ಅವರು ಕಟ್ಟಬಲ್ಲೆವು ನಾವು(2001), ಗುಲಗಂಜಿ (2009) ಕವನ ಸಂಕಲನಗಳ ಕವಿತೆಗಳ ಹೊಸ ಕವಿತೆಗಳು ಈ ಸಂಕಲನದಲ್ಲಿ ಸೇರಿವೆ.
ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮುನ್ನುಡಿ ಬರೆದಿದ್ದಾರೆ. ಕೃತಿ ಮತ್ತು ಕವಿಯ ಬಗ್ಗೆ ಬರೆಯುತ್ತಾ ‘ಗೆಳೆಯ ಅಲ್ಲಮರು ಅಂದಿನಿಂದ ಇಂದಿನವರೆಗೆ ಪ್ರಗತಿಪರ ವಿಚಾರಧಾರೆಯ ದಾರಿಯಲ್ಲಿ ನೇರ ನಿಷ್ಠುರ ಹೆಜ್ಜೆ ಹಾಕುತ್ತಾ ಬಂದವರು. ಯಾವುದೇ ಪ್ರಗತಿಪರ ಹೋರಾಟವಾಗಲಿ ಸ್ವಯಂ ಆಸಕ್ತಿಯಿಂದ ಭಾಗವಹಿಸುತ್ತ ನೈತಿಕವಾಗಿ ನಿಂತವರು, ವಿಶೇಷವಾಗಿ ಬಂಡಾಯ ಸಾಹಿತ್ಯ ಸಂಘಟನೆಗೆ ಕಟಿಬದ್ಧರಾಗಿ ಉಳಿದವರು, ಇವರ ಕವಿತೆಗಳನ್ನು ಓದುತ್ತ ಹೋದಂತೆ ವ್ಯಕ್ತಿತ್ವದ ಒಳ ಆಯಾಮವೊಂದು ಅನಾವರಣಗೊಂಡ ಅನುಭವವಾಗುತ್ತದೆ. ನೇರ ನಿರೂಪಣೆ, ವ್ಯಂಗ್ಯ-ವಿಡಂಬನೆ, ಸಿಟ್ಟು, ಸಂಕಟ, ವಿಷಾದಗಳ ಅಕ್ಷರ ರೂಪಗಳು ಸಾಲುಸಾಲಾಗಿ ಕಣ್ಣೆದುರು ಹಾದು ಹೋಗುತ್ತವೆ. ನವ್ಯ ಸಾಹಿತ್ಯಸಂದರ್ಭದಲ್ಲಿ ಬರವಣಿಗೆ ಆರಂಭಿಸಿ, ದಲಿತ-ಬಂಡಾಯ ಸಾಹಿತ್ಯ-ಚಳವಳಿಯವರೆಗೆ ಬೆಳೆದ ಕವಿತಾ ಚರಿತೆಯ ಗುರುತುಗಳು ಅಲ್ಲಮಪ್ರಭು ಬೆಟ್ಟದೂರರ ಸಂಕಲನದಲ್ಲಿ ಕ್ರಮವಾಗಿ ಕಾಣಸಿಗುತ್ತವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.