jಜನಪ್ರಿಯ ಕವಿ ಎಂ.ಎನ್. ವ್ಯಾಸರಾವ್ ಅವರು ರಚಿಸಿದ ಸಮಗ್ರ ಕವಿತೆಗಳ ಸಂಕಲನವಿದು. ಶ್ರೀಧರ ಬನವಾಸಿ ಮತ್ತು ಪ್ರಕಾಶ್ ಕಗ್ಗೆರೆ ಅವರು ಸಂಪಾದಿಸಿದ್ದಾರೆ. ನವ್ಯಕಾವ್ಯದ ಏರುದಿನಗಳಲ್ಲಿ ಕವಿತೆ ಬರೆಯಲು ಆರಂಭಿಸಿದ ವ್ಯಾಸರಾವ್ ಅವರು ಭಾವಗೀತೆಗಳಿಗೆ ಒಲಿದವರು. ಅವರ ಕವಿತೆಗಳ ಕುರಿತು ಹಿರಿಯ ಲೇಖಕ-ಕವಿ ಚಂದ್ರಶೇಖರ ಕಂಬಾರ ಅವರು ಹೀಗೆ ಬರೆದಿದ್ದಾರೆ-
ಸದಾ ಮುಗುಳುನಗೆಯ, ಇದರಿಂದಾಗಿಯೇ ಅಜಾತಶತ್ರುವಾದ, ತನ್ನೆಲ್ಲ ಸ್ನೇಹಿತರಿಗೆ ಸಮಾನ ಪ್ರೀತಿಯವನಾದ ಸಜ್ಜನ ಕವಿ. ಅವರು ನವ್ಯಕಾವ್ಯ ಪ್ರಭಾವದಲ್ಲಿ ಬರವಣಿಗೆಯನ್ನು ಪ್ರಾರಂಭಿಸಿದರೂ ಕಾಲಕ್ರಮೇಣ ಇಂದಿನ ಕಾಲದ ಎಲ್ಲಾ ಕಾವ್ಯ ರೀತಿಗಳನ್ನು ಬಳಸಿಕೊಂಡರು. ಈ ಎಲ್ಲ ಕವಿತೆಗಳು ಹಲವಾರು ಮಾಧ್ಯಮಗಳ ಮೂಲಕ ಕವಿಯಿಂದ ಕವಿಗೆ ಹರಡಿ ಜನರ ಮೇಲೆ ತಮ್ಮದೇ ಆದ ಪ್ರಭಾವ ಬೀರಿದವು. ವೈಚಾರಿಕ ಪ್ರತಿಪಾದನೆ ಹಾಗೂ ಸರಳವಾದ ಭಾವಾಭಿವ್ಯಕ್ತಿ ಎರಡೂ ಜೊತೆಯಾಗಿರಲು ಸಾಧ್ಯ ಎಂಬ ನಂಬುಗೆಯಿಂದ ಕಾವ್ಯ ಬರೆದವರು ವ್ಯಾಸರಾವ್. ಕಾವ್ಯ ಸಾರ್ವಕಾಲಿಕವಾಗಬಹುದಾದ ಹಾಗೇ ಎಲ್ಲ ವರ್ಗದ ಎಲ್ಲಾ ಅಭಿರುಚಿಯುಳ್ಳ ಸಾಮಾಜಿಕರಿಗೆ ವರ್ತಮಾನದ ಸಂತೋಷವನ್ನು ನೀಡಬಲ್ಲದು. ಕಾವ್ಯ ಸೃಷ್ಟಿಯ ವಿಸ್ಮಯದ ಜೊತೆಗೆ ಹಲವು ಸ್ತರಗಳ ಜನ, ಸುಗಮ ಸಂಗೀತ, ಭಾವಗೀತೆ, ಸಿನಿಮಾ ಹಾಡುಗಳು-ಹೀಗೆ ಹಲವು ಮಾಧ್ಯಮಗಳ ಮೂಲಕ ಕಾವ್ಯಾನಂದಕ್ಕೆ ಹಾತೊರೆವುದನ್ನು ಕಂಡು ವ್ಯಾಸರಾಯರು ಬೆರಗಾಗಿದ್ದರು. ಜನ ತಮ್ಮದೇ ಕಾವ್ಯಾಭಿರುಚಿಯಲ್ಲಿ ಸಂತೋಷಿಸಲು ತಮ್ಮ ಕವಿತೆಗಳು ಕಾರಣವಾದುದನ್ನು ನೋಡಿ ಅವರು ಸಂತೋಷಪಟ್ಟಿದ್ದರು.
©2024 Book Brahma Private Limited.