ಕವಿ ಎಚ್.ಎಸ್. ಮುಕ್ತಾಯಕ್ಕ ಅವರ ಸಮಗ್ರ ಗಜಲುಗಳ ಸಂಗ್ರಹ ‘ಮೈ ಅವ್ರ ಮೇರೆ ಲಮ್ಹೆ’. ಕನ್ನಡದ ಮೊಟ್ಟ ಮೊದಲ ಗಜಲ್ ಕೃತಿಯಾಗಿ ಕನ್ನಡ ಕಾವ್ಯಲೋಕದ ಚರಿತ್ರೆಯಲ್ಲಿ ಗುರುತಿಸಲ್ಪಟ್ಟಿರುವ ನಲವತ್ತು ಗಜಲುಗಳು ಕೃತಿ ಪ್ರಕಟವಾದ (2002) ಎರಡು ದಶಕಗಳ ನಂತರ ಇದೀಗ (2022) ಗಜಲಿನ ಬಗೆಗೆ ಸ್ಥೂಲ ವಿವರಣೆಯನ್ನೊಳಗೊಂಡು, ಎಚ್.ಎಸ್. ಮುಕ್ತಾಯಕ್ಕ ಹಾಗೂ ಶಾಂತರಸರು ಗಜಲುಗಳ ಬಗೆಗೆ ಬರೆದ ದೀರ್ಘ ಪ್ರಸ್ತಾವನೆ ಮತ್ತು ಎಂ. ಎಸ್. ಆಶಾದೇವಿ ಅವರ ಬೆನ್ನುಡಿಯೊಂದಿಗೆ ಅವರ "ಸಮಗ್ರ ಗಜಲುಗಳ ಸಂಗ್ರಹ"ವನ್ನು ಸಂಗಾತ ಪ್ರಕಾಶನ ಪ್ರಕಟಿಸಿದೆ.
ಕೃತಿಯ ಬೆನ್ನುಡಿಯಲ್ಲಿ ಎಂ. ಎಸ್. ಆಶಾದೇವಿ ಅವರು ಹೇಳಿರುವಂತೆ, ಗಜಲ್ ಪ್ರಕಾರವು ಅತ್ಯಂತ ಆಕರ್ಷಕವಾದುದು. ನಿಜ, ಆದರೆ ಅದು ಎಲ್ಲರಿಗೂ ಒಲಿಯುವುದು ಸಾಧ್ಯವೇ ಇಲ್ಲ. ಆರಂಭದಿಂದ ಕೊನೆಯವರೆಗೂ ತುರೀಯಾವಸ್ಥೆಯ ಅನುರಕ್ತಿಯನ್ನು ಅದು ಬೇಡುತ್ತದೆ. ಸದಾ ಭಾವೋಲಿಪ್ತವಾದ, ಆದರೂ ಹುಸಿಯಾಗದ ಅಪರೂಪದ ಮನಸ್ಥಿತಿಯಿಲ್ಲದಿದ್ದರೆ ಗಜಲುಗಳನ್ನು ಬರೆಯುವುದು ಸಾಧ್ಯವಿಲ್ಲ. ಅಪ್ಪಟ ಗಜಲುಗಳ ಮಾತೇ ಬೇರೆ, ಅವು ಭಾವ ನಾದದ ನದಿಗಳಂತೆ, ಹರಿಯುತ್ತಲೇ ಇರುತ್ತವೆ. ಯಾವ ಊರುಗೋಲುಗಳು ಬೇಡ ಅವುಗಳಿಗೆ ನದಿಯ ಜೀವಂತಿಕೆ, ಮಾರ್ದವ, ಆರ್ತತೆ, ಸೌಂದರ್ಯ, ಸ್ವಚ್ಛಂದತೆ ಎಲ್ಲವೂ ಮಾಂಸಲವಾಗಿ ಓದುಗರನ್ನು ಮುಟ್ಟ ಮೀಯಿಸುತ್ತವೆ.ಈ ಎಲ್ಲವೂ ಮುಕ್ತಾಯಕ್ಕನವರ ಗಜಲ್‌ಗಳಲ್ಲಿ ಇವೆ ಎಂದೇ ಅವು ಕನ್ನಡದ ಕಾವ್ಯಾಸಕ್ತರನ್ನು ಎಂದಿಗೂ ಸೆಳೆದಿವೆ ಎಂದಿದ್ದಾರೆ.
©2024 Book Brahma Private Limited.