'ನನ್ನಲ್ಲಿ ನನ್ನ ಅರಸುತ' ಹೊರಟಾಗ ಪುಟ್ಟದಾದ ನನ್ನೀ ಸ್ನೇಹಗೂಡಲ್ಲಿ ಶಾಶ್ವತವಾಗಿ ನೆಲೆಯೂರಿದ ಅಪ್ಪಟ ಕನ್ನಡತಿ ಈ ಗೆಳತಿ. ನನ್ನೀ ಸ್ನೇಹಿತೆ ಬರೆದ ಕಾವ್ಯಗಳು ಬರೀ ಕಾವ್ಯಗಳಲ್ಲ. ಅವು ಹೃದಯದಿಂದ ಹರಿದು ಬಂದ ಭಾವನೆಗಳು, ಪ್ರೀತಿಯಿಂದ ಬರೆಯಿಸಿಕೊಂಡ ಪದಪುಂಜಗಳು, ಯಾರನ್ನೂ ನೋಯಿಸದ ಮುಗ್ಧ ಮನಸ್ಸಿನ ಸ್ನೇಹಿತೆಯ ಮೊಣಚಾದ ಲೇಖನಿಯಿಂದ ಮೂಡಿಬಂದ ಪ್ರತಿ ಸಾಲುಗಳಲ್ಲಿಯೂ ಜೀವನದ ಮೌಲ್ಯಗಳು ತುಂಬಿಕೊಂಡಿವೆ. ಪುಟ್ಟ ಪುಟ್ಟ ಸಾಲುಗಳು ಓದುತ್ತಾ ಹೋದಂತೆ ನಮ್ಮನ್ನು ನಾವೇ ಮರೆತುಬಿಡುತ್ತೇವೆ. ಪ್ರತಿಯೊಂದು ಪದವು ಓದುವ ಪ್ರತಿಯೊಂದು ಮನಸ್ಸಿಗೆ ವಿಚಾರದೆಡೆಗೆ ಸೆಳೆಯುತ್ತವೆ. ತನ್ನ ತಾ ಅರಿಯುವಂತೆ ಪ್ರೇರೇಪಿಸುತ್ತವೆ. ಈ ಕೃತಿಯಲ್ಲಿರುವ ಬರಹಗಳು ಜೀವನದ ಅಮೂಲ್ಯವಾದ ಮುತ್ತು-ರತ್ನಗಳು, ಸ್ನೇಹ-ಪ್ರೀತಿಯ ಕಡಲು, ನೊಂದ ಮನಸ್ಸಿಗೆ ಸ್ಪೂರ್ತಿ ತುಂಬುವ ಸಂಜೀವಿನಿ, ಮಲಗಿದ್ದವರನ್ನು ಬಡಿದೆಬ್ಬಿಸುವ ಬೆಳಕಿನ ಕಿರಣಗಳು. ಸೋಮಾರಿಗಳಿಗೆ ತಿದ್ದಿ-ತೀಡಿ ಕೆಲಸಕ್ಕೆ ಅಣಿಯಾಗಿಸುವ ದಿವ್ಯ ಚೇತನದ ನುಡಿಮುತ್ತುಗಳು, ಹೀಗೆ ಹೇಳುತ್ತ ಹೋದಂತೆ ಪಟ್ಟಿ ಉದ್ದವಾಗಿಯೇ ಸಾಗುತ್ತದೆ. ಚಿಕ್ಕದಾಗಿ ಚೊಕ್ಕದಾಗಿ ಸ್ಪಷ್ಟವಾಗಿ ಹೇಳುವುದೇನೆಂದರೆ ಡಾ. ಅರ್ಚನಾ ಎನ್. . ಪಾಟೀಲ ಅವರು ತನ್ನ ಲೇಖನಿಯಿಂದ ಪೋಣಿಸಿದ ಅಕ್ಷರಗಳ ಮಾಲೆಗೆ ನನ್ನಲ್ಲಿ ನನ್ನ ಅರಸುತ' ಎಂಬ ಮುದ್ದಾದ ಹೆಸರಿಟ್ಟಿದ್ದಾರೆ. ಈ ಪುಟ್ಟ ಪುಸ್ತಕ ಬದುಕಿನ ಮೌಲ್ಯಗಳನ್ನು ಹೊತ್ತುಕೊಂಡು ಸಾಹಿತ್ಯಲೋಕದಲ್ಲಿ ಬೆಳಕು ಚೆಲ್ಲುತ್ತ ತಮ್ಮ ಮನ-ಮನೆ ಸೇರಲು ಅಣಿಯಾಗಿದೆ. ಇದು ಸರ್ವರಿಗೂ ಸರ್ವ ಕಾಲಕ್ಕೂ ಪ್ರಸ್ತುತವೆನಿಸುವ ಉತ್ತಮ ಕೃತಿಯಾಗಿದೆ.
©2024 Book Brahma Private Limited.