ಜಗತ್ತು -2009' ವರ್ಷವನ್ನು ಅಂತಾರಾಷ್ಟ್ರೀಯ ಖಗೋಳ ವಿಜ್ಞಾನ ವರ್ಷವೆಂದು ಸಂಭ್ರಮದಿಂದ ಆಚರಿಸಿತು. ಇಟಲಿಯ ಪ್ರಸಿದ್ಧ ವಿಜ್ಞಾನಿ ಗೆಲಿಲಿಯೋ ಗೆಲಿಲಿ, ತಾನೇ ರಚಿಸಿದ ದೂರದರ್ಶಕದಲ್ಲಿ ಬಾನನ್ನು ವೀಕ್ಷಿಸಿ 400 ವರ್ಷಗಳು ಸಂದವು. ಈ ನಾಲ್ಕು ಶತಮಾನದ ಅವಧಿಯಲ್ಲಿ ಖಗೋಳ ವಿಜ್ಞಾನದಲ್ಲಿ ಒಂದಕ್ಕಿಂತ ಒಂದು ಮಹಾ ಶೋಧಗಳಾಗಿವೆ. ಹಾಗೆಯೇ ದಶಕದಿಂದ ದಶಕಕ್ಕೆ ಇನ್ನಷ್ಟು ಶಕ್ತಿಶಾಲಿ ದೂರದರ್ಶಕಗಳು ಸೃಷ್ಟಿಯಾಗುತ್ತಿವೆ. ಬ್ರಹ್ಮಾಂಡಗಳಂತಿರಲಿ, ವಿಶ್ವದ ಪರಿಕಲ್ಪನೆಯೇ ಬದಲಾಗುತ್ತಿದೆ. ಇಂದು ಸಾಮಾನ್ಯ ಹವ್ಯಾಸಿ ಖಗೋಳ ವೀಕ್ಷಕನ ಕೈಯಲ್ಲಿ ಗೆಲಿಲಿಯೋ ಬಳಸಿದ್ದಕ್ಕಿಂತ ನೂರು ಪಟ್ಟು ಸಮರ್ಥವಾದ ದೂರದರ್ಶಕಗಳಿವೆ. ಖಗೋಳ ವಿಜ್ಞಾನದ ಈ ಸಂಭ್ರಮಕ್ಕೆ ಕೊಟ್ಟ ಕೊಡುಗೆ `ದೂರದರ್ಶಕ ಕಂಡ ವಿಶ್ವರೂಪ’ ಕೃತಿ. ದೂರದರ್ಶಕಗಳು ಕಾಲದಿಂದ ಕಾಲಕ್ಕೆ ಪ್ರಗತಿಯಾದ ಬಗೆ, ವಿಶ್ವದ ತಿಳಿವನ್ನು ಹೆಚ್ಚಿಸಿರುವ ಪರಿ ಇವುಗಳನ್ನು ಅತ್ಯಂತ ತಾರ್ಕಿಕವಾಗಿ ಕೊಡುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ.
ವಿಜ್ಞಾನದ ಓದು ಹಗುರವಾಗಿರಬೇಕು ಆದರೆ ಸಾರಗೆಡಬಾರದು, ಜನರು ವಿಜ್ಞಾನವನ್ನು ಸಾಹಿತ್ಯದಂತೆಯೇ ಓದಬೇಕು ಎಂಬುದು ಈ ಕೃತಿ ರಚನೆಯ ಉದ್ದೇಶ. ಈಗಾಗಲೇ ಎರಡು ಮುದ್ರಣಗಳನ್ನು ಈ ಕೃತಿ ಕಂಡಿದೆ. ಖಗೋಳ ವಿಜ್ಞಾನದ ಆಸಕ್ತರು ಓದಗಲೇಬೇಕಾದ ಕೃತಿ ಇದು.
©2024 Book Brahma Private Limited.