‘ಆಕಾಶದಲ್ಲೊಂದು ಮನೆ’ ಲೇಖಕ ಪಾಲಹಳ್ಳಿ ವಿಶ್ವನಾಥ್ ಅವರ ಕೃತಿ. ಅನ್ಯಗ್ರಹ ಜೀವಿ (ಏಲಿಯನ್ಸ್)ಗಳ ಬಗ್ಗೆ ಕುತೂಹಲವಿರುವ ನಕ್ಷತ್ರಿಕ ಮತ್ತು ನಿಹಾರಿಕಾ ಎಂಬ ಇಬ್ಬರು ವಿದ್ಯಾರ್ಥಿಗಳು ತಮ್ಮ ಅಧ್ಯಾಪಕರ ಬಳಿ ಬಂದು ವಿಚಾರಿಸುತ್ತಾರೆ.. ಅವುಗಳ ಬಗ್ಗೆ ತಿಳಿದುಕೊಂಡು ಬೇಗ ಹೋಗುವ ಆತುರ ಈ ವಿದ್ಯಾರ್ಥಿಗಳಿಗೆ, ಆದರೆ ಅಧ್ಯಾಪಕರು “ಅದಕ್ಕೆ ಉತ್ತರ ಕೊಡುವ ಮೊದಲು ಬಹಳ ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ” ಎಂದು ಅವರನ್ನು 12 ದಿವಸಗಳು ಉಳಿಸಿಕೊಳ್ಳುತ್ತಾರೆ. ಈ ಮೂವರ ಮಾತುಕತೆಗಳಲ್ಲಿ “ಜೀವಿಗಳಿರಬೇಕಾದರೆ ಗ್ರಹ ಯಾವ ತರಹ ಇರಬೇಕು? ನಮ್ಮ ಭೂಮಿಯ ಅತಿಶಯವೇನು? ಭೂಮಿ ನೀರನ್ನು ಮತ್ತು ವಾತಾವರಣವನ್ನು ಹೇಗೆ ಗಳಿಸಿತು? ಯಾವ ಗುಣಗಳುಳ್ಳ, ನಕ್ಷತ್ರದ ಬಳಿ ಇಂತಹ ಗ್ರಹಗಳಿಗೆ ಸ್ಥಾನವಿದೆ? ನಮ್ಮ ಸೌರ ಮಂಡಲದಲ್ಲೇ ಮಂಗಳ ಮತ್ತು ಇತರ ಉಪಗ್ರಹಗಳು ವಾಸಯೋಗ್ಯವೇ? ನಮ್ಮ ಗೆಲಕ್ಸಿಯಲ್ಲೇ ಭೂಮಿಯಂತಹ ಇತರ ಗ್ರಹಗಳಿವೆಯೇ? ಹೊರಗಿನವರನ್ನು ನಾವು ಸಂಪರ್ಕಿಸಲು ಪ್ರಯತ್ನಿಸಿದ್ದೇವೆಯೇ? ಭವಿಷ್ಯದ ಭೂಮಿಗಳಿಗೆ ಹುಡುಕಾಟ ಯಾವಾಗ ಶುರುವಾಯಿತು? ಬಾಹ್ಯಾಕಾಶ ಯಾನ ಹೇಗೆ ಮತ್ತು ಯಾವಾಗ ಶುರುವಾಯಿತು? ಈ ಅಗಾಧ ವಿಶ್ವದಲ್ಲಿ ನಮ್ಮ ತರಹ ನಾಗರಿಕತೆ ಹುಟ್ಟಿ ನಾಶವಾಗಿರಬಹುದೇ” ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ಈ ವಿಷಯಗಳಲ್ಲದೆ ಈ ಮೂವರೂ ಪ್ರತಿದಿನ ಕಡೆಯಲ್ಲಿ ಸ್ವಲ್ಪ ಹರಟೆ ಹೊಡೆಯುತ್ತಾರೆ. ಈ ಹರಟೆಯಲ್ಲಿ ಇತಿಹಾಸ, ವೈಜ್ಞಾನಿಕ ಕಥಾಸಾಹಿತ್ಯ, ಸಿನೆಮಾಗಳು ಎಲ್ಲ ಬಂದು ಹೋಗುತ್ತವೆ. ಈ ಕೃತಿಯನ್ನು ರಚಿಸಿರುವ ಪಾಲಹಳ್ಳಿ ವಿಶ್ವನಾಥ್ ಮೈಸೂರು ಮತ್ತು ಮಿಶಿಗನ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನಮಾಡಿ ಅನಂತರ ಮುಂಬಯಿಯ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಿ.ಐ.ಎಫ್.ಆರ್.) ಮತ್ತು ಬೆಂಗಳೂರಿನ ಭಾರತೀಯ ಜ್ಯೋತಿರ್ವಿಜ್ಞಾನ ಸಂಸ್ಥೆ (ಐ.ಐ.ಎ.)ಯಲ್ಲಿ ಪ್ರಾಧ್ಯಾಪಕರಾಗಿದ್ದರು. ಭಾರತ ಮತ್ತು ಅಮೆರಿಕದಲ್ಲಿ ಹಲವಾರು ಭೌತವಿಜ್ಞಾನ ಮತ್ತು ಖಗೋಳ ವಿಜ್ಞಾನದ ಪ್ರಯೋಗಗಳಲ್ಲಿ ಭಾಗಿಯಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಕನ್ನಡದಲ್ಲಿ ವಿಜ್ಞಾನ ಪ್ರಸಾರಣೆಯ ಕಾರ್ಯವನ್ನು ಮಾಡುತ್ತಿದ್ದಾರೆ. ಮೂರು ಪುಸ್ತಕ | (ಭೂಮಿಯಿಂದ ಬಾನಿನತ್ತ, ಕಣ ಕಣ ದೇವಕಣ, ಖಗೋಳ ವಿಜ್ಞಾನದ ಕಥೆ (ಅನುವಾದ))ಗಳನ್ನು ರಚಿಸಿದ್ದಾರೆ. ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುವುದು, ಸ್ಕೂಲು ಕಾಲೇಜು ಮಕ್ಕಳೊಂದಿಗೆ ಚರ್ಚೆಗಳಲ್ಲಿ ಮತ್ತು ವಿಜ್ಞಾನದ ಬಗ್ಗೆ ನಡೆಯುವ ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುತ್ತಾರೆ.ವಿಜ್ಞಾನದ ಕುರಿತು ಕುತೂಹಲ ವಿರುವ ಮತ್ತು ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಈ ಕೃತಿ ಸಹಕಾರಿಯಾಗುತ್ತೆದೆ.
©2024 Book Brahma Private Limited.