ಆಕಾಶವೆನ್ನುವುದು ಹಲವು ನಿಗೂಢಗಳ ಆಗರ. ರಾತ್ರಿಯಲ್ಲಿ ತಣ್ಣಗೆ ಚಂದ್ರ ಮತ್ತು ನಕ್ಷತ್ರಗಳ ನಡುವೆ ಆಕಾಶ ಕಂಗೊಳಿಸುತ್ತಿರುತ್ತದೆ. ಆದರೆ ಅದರ ಆಳವನ್ನು ಶೋಧಿಸುತ್ತಾ ಹೋದಂತೆಯೇ ಅನಂತಾನಂತ ವಿಸ್ಮಯಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ಆದರೆ ತೆರೆದಷ್ಟೂ ಮುಗಿಯದ ವಿಸ್ಮಯಗಳವು. ಆಕಾಶದ ನಿಗೂಢತೆಯ ಕಾರಣದಿಂದಾಗಿಯೇ ಅದನ್ನು ಹಲವರು ದುರ್ಬಳಕೆ ಮಾಡುತ್ತಾ ಬಂದಿದ್ದಾರೆ. ಗ್ರಹಗಳನ್ನು ಮುಂದಿಟ್ಟುಕೊಂಡು ಜನರನ್ನು ಶೋಷಿಸುತ್ತಾ ಬಂದಿದ್ದಾರೆ. ರಾಹು-ಕೇತು ಎಂದೆಲ್ಲ ಕತೆಗಳು ಸೃಷ್ಟಿಯಾಗಿ ಜನರು ಮೂರ್ಖರಾಗುತ್ತಿದ್ದಾರೆ. ಇತ್ತೀಚೆಗೆ ಗ್ರಹಣ ಸಂಭವಿಸಿದಾಗ ಹೇಗೆ ಜ್ಯೋತಿಷಿಗಳು ಜನರನ್ನು ಶೋಷಿಸಿದರು ಎನ್ನುವುದನ್ನು ನಾವು ನೋಡಿದ್ದೇವೆ. ಈ ಹಿನ್ನೆಲೆಯಲ್ಲಿ ಜನರ ಮೌಡ್ಯವನ್ನು ಅಳಿಸುವ ಹಾಗೆಯೇ ಆಕಾಶದ ನಿಗೂಢಗಳನ್ನು ಸರಳವಾಗಿ ತೆರೆದಿಡುವ ಕೃತಿಯಾಗಿ ಸರೋಜ ಪ್ರಕಾಶ ಬರೆದಿರುವ 'ಬಾನಲ್ಲಿ ಗ್ರಹ ಗಣತಿ' ಮುಖ್ಯವಾಗುತ್ತದೆ. ಇದೊಂದು ಬಿಡಿ ಲೇಖನಗಳ ಸಂಗ್ರಹವಶಗಿದ್ದು, ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಬಡಿ ಬಿಡಿಯಾಗಿ ಪ್ರಕಟಗೊಂಡ ಲೇಖನಗಳನ್ನು ಇಲ್ಲಿ ಒಟ್ಟು ಸೇರಿಸಲಾಗಿದೆ.
ಇದು ಉಪಗ್ರಹ, ಗನನ ನೌಕೆಗಳ ಯುಗ, ಬಾಹ್ಯಾಕಾಶ ಸಂಶೋಧನೆ ವಿಜ್ಞಾನಿಗಳ ತೀರದ ದಾಹ, ವಿಶ್ವದ ವಿಸ್ತಾರವೆಷ್ಟು? ಬಾನಂಗಳಕ್ಕೆ ಕೊನೆ - ಮೊದಲು ಇದೆಯೆ? ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಮಿಂಚುವ ನಕ್ಷತ್ರಗಳ ಗುಟ್ಟೇನು? ಇವೇ ಮುಂತಾದ ಪ್ರಶ್ನೆಗಳ ಸರಮಾಲೆ ಧರಿಸಿ ವಿಜ್ಞಾನಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಬಾನಿನ ವಿಸ್ತಾರದಂತೆ ತಮ್ಮ ಅರಿವೂ ವಿಸ್ತಾರಗೊಂಡಾಗ, ನಮ್ಮ ಸೂರ್ಯನಿಗಿಂತಲೂ ಹೆಚ್ಚು ಪ್ರಕಾಶಮಾನವಾದ ಲೆಕ್ಕವಿಲ್ಲದಷ್ಟು ನಕ್ಷತ್ರಗಳಿದ್ದು ಅವುಗಳನ್ನು ಸುತ್ತುವ ಗ್ರಹಗಳಿವೆಯೆಂದು, ಅಂಥ ಗ್ಯಾಲಕ್ಸಿಗಳು ಲಕ್ಷಾಂತರ ಜ್ಯೋತಿರ್ವರ್ಷ ದೂರದಲ್ಲಿವೆ ಎಂದು ತಿಳಿದದ್ದೇ ತಡ - ಒಂದರ ಹಿಂದೊಂದು ಬಾನ ನೌಕೆಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಆಕಾಶವನ್ನು ಭೇದಿಸಿ ಸಾಗಿದವು. ನಿರಾಸೆ ಎಂಬ ಪದ ವಿಜ್ಞಾನಿಗಳ ಭಂಡಾರದಲ್ಲೇ ಇಲ್ಲ. ನಮ್ಮ ಸೌರವ್ಯೂಹದಾಚೆ ಪಯಣಿಸಲು ಸಿದ್ದವಾಗಿರುವ, ವಿಶ್ವದ ರಹಸ್ಯ ಭೇದಿಸಲು ಹೊರಟಿರುವ ಸಾಹಸಯಾನಗಳ ಕಥೆ ಈ ಕೃತಿಯಲ್ಲಿ ರೋಚಕ ಅಂಶಗಳೊಂದಿಗೆ ನಿರೂಪಿಸಲಾಗಿದೆ. ಸಿರಿಟ್, ಅಪಾರ್ಚುನಿಟಿ, ನ್ಯೂಹಾರಿಝಾನ್, ಫೀನಿಕ್ಸ್, ಡಾನ್, ವಾಯೇಜರ್ ಜುನೊ - ಮುಂತಾಗಿ ಅರ್ಥಪೂರ್ಣ ಹೆಸರಿನೊಂದಿಗೆ ಬಾನಂಗಳಕ್ಕೆ ಧುಮುಕಿದ ಗಗನ ನೌಕೆಗಳ ಬಗ್ಗೆ ತಿಳಿದುಕೊಂಡು ರೋಮಾಂಚಿತರಾಗುವುದೇ ಒಂದು ರೋಚಕ ಅನುಭವ. ವಿಜ್ಞಾನ ಲೋಕದ ಸಂಶೋಧನೆಗಳ ಮಹಾಪೂರವಿದು.
- ಇಂದಿರಾಕುಮಾರಿ ಯಶವಂತಪುರ, ಬೆಂಗಳೂರು-೫೬೦ ೦೧೮
ಕೃಪೆ: ಹೊಸತು 2018 ಜನೆವರಿ
©2024 Book Brahma Private Limited.