About the Author

ಡಾ. ವಸುಂಧರಾ ಭೂಪತಿ ಕರ್ನಾಟಕದ ರಾಯಚೂರಿನಲ್ಲಿ 1962 ರ ಜೂನ್ 5 ರಂದು ಜನಿಸಿದರು. ಇವರು ಬರೆದಿರುವ ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳು ವಾರಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.

ವಸುಂದರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ,  ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ.  ಮತ್ತು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಆಂಗ್ಲ ಭಾಷೆಯಲ್ಲಿ2009 ರಲ್ಲಿ 'ಮೆಡಿಸಿನಲ್ ಪ್ಲಾಂಟ್ಸ್ ಇನ್ ಯುವರ್ ಯಾರ್ಡ್' ಹಾಗೂ 2010 ರಲ್ಲಿ ಹಿಂದಿ ಭಾಷೆಯಲ್ಲಿ ಅಪ್ನಾ ಸ್ವಾಸ್ತ್ ಅಪ್ನೆ ಹಾತ್ ಎಂಬ ಕೃತಿಯನ್ನು ರಚಿಸಿದ್ದಾರೆ.

2012 ರಲ್ಲಿ ಮಹಿಳೆ ಮತ್ತು ವೈಜ್ಞಾನಿಕ ಅರಿವು ಮತ್ತು 2014 ರಲ್ಲಿ ಮಹಿಳೆ ಮತ್ತು ಮೌಢ್ಯ ಎಂಬ ವಿಚಾರ ಸಾಹಿತ್ಯಗಳನ್ನು ಪ್ರಕಟಿಸಿದ್ದಾರೆ. ಸಂಕ್ರಾಂತಿ ಮತ್ತು ಜೀವ ಸರಪಳಿಯ ಗೂಡು ಇವರ ಕಥಾ ಸಂಕಲನಗಳಾಗಿವೆ.

2012 ರಲ್ಲಿ ವಿಜ್ಞಾನಮಯಿ ಎಂಬ ನಾಟಕ ಪ್ರಕಟಗೊಂಡಿದೆ. ಸುಶ್ರುತ, ಚರಕ, ಯಲ್ಲಪ್ರಗಡ ಸುಬ್ಬರಾವ್, ಪಂಡಿತ್ ತಾರನಾಥ್, ಕೊಡಗಿನ ಗೌರಮ್ಮ ಹಾಗೂ ಸಿ.ವಿ ರಾಮನ್ ಅವರ ಜೀವನ ಚರಿತ್ರೆಗಳನ್ನು ಪ್ರಕಟಿಸಿದ್ದಾರೆ. ವಿಜಯವಾಣಿ ಪತ್ರಿಕೆಯಲ್ಲಿ ಅಂಕಣಕಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಆಕಾಶವಾಣಿಯಲ್ಲಿ ಆರೋಗ್ಯ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ 150 ಕ್ಕೂ ಹೆಚ್ಚಿನ ಫೋನ್-ಇನ್ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ಸಂದರ್ಶನ ಹಾಗೂ ವೈದ್ಯಲೇಖಕರ ಜೀವನ ಸಾಧನೆ ಕುರಿತು ರೇಡಿಯೋ ಸಂದರ್ಶನ ನಡೆಸಿದ್ದಾರೆ.

ಕರ್ನಾಟಕದಾದ್ಯಂತ ಹಲವಾರು ಸಂಘ- ಸಂಸ್ಥೆಗಳ ಮೂಲಕ ಸಾರ್ವಜನಿಕ ಉಪನ್ಯಾಸಗಳು ಹಾಗೂ ಚರ್ಚೆಗಳ ಮುಖಾಂತರ ಜನರಿಗೆ ಆರೋಗ್ಯ ಮಾಹಿತಿ ಸಂಹವನವನ್ನು ನಡೆಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ವೈಜ್ಞಾನಿಕ ಅರಿವು ಮೂಡಿಸಲು ಗುಲ್ಬರ್ಗಾ, ರಾಯಚೂರು ಹಾಗೂ ಬಳ್ಳಾರಿಯಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಿದ್ಧಾರೆ. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ  ಮತ್ತು ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

2007 ರಲ್ಲಿ ಎಚ್ಐವಿ/ಏಡ್ಸ್ ಕುರಿತಾದ ಲೇಖನಕ್ಕೆ ಯೂನಿಸೆಫ್ ಪತ್ರಿಕೋದ್ಯಮ ಪ್ರಶಸ್ತಿ , ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯಿಂದ ಶ್ರೇಷ್ಠ ಲೇಖಕಿ ಪುರಸ್ಕಾರ, ಇವರ ಹೂವು ಮತ್ತು ಆರೋಗ್ಯ ಪುಸ್ತಕಕ್ಕೆ ಅಕಲಂಕ ಪ್ರಶಸ್ತಿ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಶ್ರೇಷ್ಠ ವಿಜ್ಞಾನ ಸಂಹವನಕಾರ ಪ್ರಶಸ್ತಿ, 2013-14 ನೇ ಸಾಲಿನ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ, ಮೊಗ್ಗು ಅರಳಿತೋ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಗ್ರಂಥ ಪ್ರಶಸ್ತಿ, ಡಾ. ಪಿ.ಎಸ್ ಶಂಕರ್ ವೈದ್ಯ ಸಾಹಿತ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಸೀತಾಸುತ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಸೇತು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

 

ವಸುಂಧರಾ ಭೂಪತಿ

(05 Jun 1962)

Books by Author

BY THE AUTHOR