ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ.
ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ಬೆಳೆಸಿದ್ದಾರೆ. ಹೀಗೆ ವೈವಿಧ್ಯಪೂರ್ಣವಾಗಿ ಕಾರ್ಯಮಾಡಿದವರು ಅಪರೂಪ.
1931 ಫೆಬ್ರವರಿ 20ರಂದು ಜನಿಸಿದ ಕೆ.ವಿ. ಸುಬ್ಬಣ್ಣ ಬರವಣಿಗೆ ಆರಂಭಿಸಿದ್ದು ಐವತ್ತರ ದಶಕದಲ್ಲಿ. ಅವರು 'ಕೈಲಾಸಂ ದರ್ಶನ' (1952) ಸಂಪಾದನೆ ಹಾಗೂ ಸ್ವತಂತ್ರ ಕವನ ಸಂಗ್ರಹ 'ಹೂವು ಚೆಲ್ಲಿದ ಹಾದಿಯಲ್ಲಿ (1952) ಪ್ರಕಟವಾದವು. ಸಂಪಾದನೆ, ಸ್ವರಚನೆ, ಅನುವಾದ - ಇತ್ಯಾದಿ ಪ್ರಕಾರಗಳಲ್ಲಿ ಕಾರ್ಯ ಮಾಡುತ್ತ ಅವರು 41೪೧ ಕೃತಿ ಪ್ರಕಟಿಸಿದ್ದಾರೆ.
ಅವುಗಳಲ್ಲಿ ಅನುವಾದಿತ ಕೃತಿಗಳ ಸಂಖ್ಯೆ ಒಂದಿಷ್ಟು ಹೆಚ್ಚಾಗಿಯೇ ಇದೆ. ನಾಟಕ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಗಮನಾರ್ಹ. ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮ್ಯಾಗ್ನೆಸೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ (2003) ಗೌರವ ಪ್ರಶಸ್ತಿ ನೀಡಿದೆ.