ವೆಂಕಟೇಶ್ ಎಂ.ಟಿ. ಯವರ “ಲಹರಿ-ಲಾಸ್ಯ”ದಲ್ಲಿ, ಏಳು ಬಗೆಯಲ್ಲಿ ಲಾಸ್ಯಮಯವಾಗಿ ಅವರ ಭಾವ ಲಹರಿಯು ವಿನ್ಯಾಸಗೊಂಡಿದೆ. ಕವಿ ತಾನು ಕಂಡು ಉಂಡ ಅನುಭವಗಳನ್ನು, ನೋವು ನಲಿವುಗಳನ್ನು, ವಿಸ್ಮಯ ಕುತೂಹಲಗಳನ್ನು, ಆಗಾಗ ದಾಖಲಿಸುತ್ತಾ ಬಂದವರು. ಜನರ ನಡೆನುಡಿಗಳಲ್ಲಿನ ವೈರುಧ್ಯವನ್ನು, ನಾಯಕಮಣಿಗಳ ಆಷಾಡಭೂತಿತನವನ್ನು ಕಂಡು ರೋಸಿಹೋದವರು. ದೊಡ್ಡವರ ಸಣ್ಣತನವನ್ನು, ಖ್ಯಾತರ ಹುಂಬತನವನ್ನು ನೋಡಿದವರು. ಪ್ರಕೃತಿಯಲ್ಲಿನ ಸಾಮರಸ್ಯವನ್ನು, ಪ್ರಾಣಿಪಕ್ಷಿಗಳಲ್ಲಿನ ಮುಗ್ಧ ಒಡನಾಟವನ್ನು ಕಂಡು ಆಶ್ಚರ್ಯಪಟ್ಟವರು. ಮನುಷ್ಯರು, ಎಲ್ಲಾ ಅಲೌಕಿಕ ಸಂಪತ್ತು ಇದ್ದು, ಅದನ್ನು ಧಿಕ್ಕರಿಸಿ, ಲೌಕಿಕಕ್ಕಾಗಿ ವಾಮಮಾರ್ಗ ಹಿಡಿಯುವುದನ್ನು ಕಂಡು ನೋವುಂಡವರು. ಇವೆಲ್ಲವನ್ನು ತಮ್ಮ ಸೂಕ್ಷ್ಮ ಮನಸ್ಸಿನಲ್ಲಿ ಆವಾಹಿಸಿ, ಪದ್ಯರೂಪವಾಗಿ ರಚಿಸಿದ್ದಾರೆ. ಅವೆಲ್ಲವನ್ನು ಒಟ್ಟಾಗಿ ನೀಡುವ ಬದಲು, ಸಹೃದಯರ ಓದಿಗೆ ಅನುಕೂಲವಾಗುವಂತೆ, ತಮ್ಮ ಕಾವ್ಯರಚನೆಯ ಹಿನ್ನೆಲೆಯನ್ನು ಆಧಾರವಾಗಿರಿಸಿಕೊಂಡು, ಏಳು ವಿಭಾಗಗಳನ್ನಾಗಿ ಗುರುತಿಸಿ, ಓದುಗರ ಮುಂದಿರಿಸಿದ್ದಾರೆ. ಇದರಿಂದ, ಕವನದ ಉದ್ದೇಶಗಳಲ್ಲಿ ಸ್ಪಷ್ಟತೆ, ಖಚಿತತೆ ಕಂಡುಬರುತ್ತದೆ. “ಲಹರಿ-ಲಾಸ್ಯ”ದ ಕವನಗಳಲ್ಲಿ ಹೊಸತನವಿದೆ, ಬದುಕಿನ ಬಗ್ಗೆ ಚಿಂತನೆ ಇದೆ, ಸಂಸಾರ ಕುಟುಂಬದ ಬಗ್ಗೆ ಕಾಳಜಿ ಇದೆ, ವಸ್ತು ವಿಚಾರದಲ್ಲಿ ವೈವಿಧ್ಯವಿದೆ, ಲಘು ವಿಚಾರವನ್ನು ಗಂಭೀರತೆಗೆ ಕೊಂಡುಹೋಗುವ ಪ್ರಯತ್ನವಿದೆ. ಲೌಕಿಕ ಸಂಗತಿಗಳಿಂದ ಅಲೌಕಿಕಕ್ಕೆ ತುಡಿಯುವ ಮನಸ್ಸಿದೆ, ಎಲ್ಲವನ್ನೂ ಆಶಾಭಾವದಿಂದ ನೋಡುವ ಹೃದಯವಿದೆ, ಸ್ವಾರ್ಥಪರ ಚಟುವಟಿಕೆಗಳ ಬಗ್ಗೆ ವ್ಯಂಗ್ಯ ವಿಡಂಬನೆಯ ಮೊನಚಿದೆ. ಹೀಗೆ ಇರುವುದರಿಂದಲೇ, ಕವನ ಸಂಕಲನ ವಿಶಿಷ್ಟವಾಗಿದೆ. ಸಂಗೀತ ಪ್ರಪಂಚದಿಂದ ಸಾಹಿತ್ಯಲೋಕಕ್ಕೆ ಬಂದಿರುವ ವೆಂಕಟೇಶ್ ಎಂ.ಟಿ. ಯವರನ್ನು, ಕನ್ನಡ ಓದುಗರು ಆರ್ದ್ರ ಹೃದಯದಿಂದ, ಮುಕ್ತಕಂಠದಿಂದ ಸ್ವಾಗತಿಸಲೆಂಬುದೇ, ನನ್ನ ಹಾರೈಕೆ. ಡಾ. ಆನಂದರಾಮ ಉಪಾಧ್ಯ ಯಕ್ಷಗಾನ ವಿದ್ವಾಂಸರು ಹಾಗೂ ಸಾಹಿತ್ಯ ವಿಮರ್ಶಕರು
©2024 Book Brahma Private Limited.