‘ಕನ್ನಡ ವ್ಯಾಕರಣ ಪದಕೋಶ’ ಎಂಬುದು ಹಿರಿಯ ಲೇಖಕ ಕ.ನಂ. ಪ್ರಸನ್ನ ಅವರ ವ್ಯಾಕರಣದ ಬೃಹತ್ ಕೃತಿ. ಅಲಂಕಾರ ಹಾಗೂ ಛಂದಸ್ಸು ಸಹಿತ ವಿವರಗಳನ್ನು ನೀಡಿದ್ದರ ಕುರಿತು ಕೃತಿಯ ಉಪಶೀರ್ಷಿಕೆ ಹೇಳುತ್ತದೆ. ಅಮರಸಿಂಹನು ಬೌದ್ಧ ಅಥವಾ ಜೈನ ಪಂಡಿತನು. ಅದ್ವೈತ ಮತಪ್ರಚಾರಕ್ಕೆಂದು ಭಾರತದಾದ್ಯಂತ ಪ್ರವಾಸದಲ್ಲಿದ್ದ ಶಂಕರಾಚಾರ್ಯರು ಅಮರಸಿಂಹನನ್ನು ಭೆಟ್ಟಿಯಾಗ ಬಯಸುತ್ತಾನೆ. ಆಗ, ಶಂಕರಾಚಾರ್ಯರೊಡನೆ ವಾದಕ್ಕಿಳಿಯಬಯಸದ ಅಮರಸಿಂಹನು, ತನ್ನ ಎಲ್ಲ ಕೃತಿಗಳನ್ನು ಸುಟ್ಟು ಹಾಕಲು ಪ್ರಯತ್ನಿಸಿದನು. ಇದನ್ನು ತಿಳಿದ ಶಂಕರಾಚಾರ್ಯರು ಅವನ ಮನೆಗೆ ಧಾವಿಸಿದರು. ಆದರೆ, ಅಮರಕೋಶವೊಂದನ್ನು ಬಿಟ್ಟು ಎಲ್ಲ ಕೃತಿಗಳು ಸುಟ್ಟು ಹೋಗಿದ್ದವು. ಈ ಸಂಗತಿಯನ್ನು ಶಂಕರದಿಗ್ವಿಜಯ ದಲ್ಲಿ ಹೇಳಲಾಗಿದೆ. ಅಮರಕೋಶವು ಸಂಸ್ಕೃತ ಭಾಷೆಯಲ್ಲಿ ರಚಿಸಿದ ನಾಮಲಿಂಗಾನುಶಾಸನ ಎಂಬ ಸಮಾನಾರ್ಥಕ ಪದಕೋಶ. ನಾಮಲಿಂಗಾನುಶಾಸನ ಕೃತಿಯನ್ನು ಅವನ ಗೌರವಾರ್ಥ ಅಮರಕೋಶ ಎಂದು ಕರೆಯುತ್ತಾರೆ. ಈ ಕೃತಿಯು `ಅಮರಾನಿರ್ಜರಾದೇವಾಃ' ಎಂದು ಅರಂಭವಾಗುವುದರಿಂದ ಅಮರಕೋಶ ಎಂಬ ಹೆಸರು ಬಂದಿದೆ ಎಂದೂ ಹೇಳಲಾಗುತ್ತಿದೆ. ನಾಮಲಿಂಗಾನುಶಾಸನ ಎಂದರೆ ನಾಮ ಮತ್ತು ಲಿಂಗಗಳನ್ನು ಕುರಿತಾದ ವ್ಯವಸ್ಥೆ ಎಂದರ್ಥ. ಅಮರಸಿಂಹನು ಕ್ರಿ.ಶ. 400 ರ ಸುಮಾರಿಗೆ ಇದ್ದ ಗುಪ್ತವಂಶದ ಎರಡನೆಯ ಚಂದ್ರಗುಪ್ತ ಅರಸನ ಆಸ್ಥಾನದಲ್ಲಿದ್ದ ನವರತ್ನಗಳಲ್ಲಿ ಒಬ್ಬನು. ಅವನು ಕ್ರಿ.ಶ. 7ನೇ ಶತಮಾನದಲ್ಲಿದ್ದ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದವನು ಎಂದೂ ಕೆಲವು ಮೂಲಗಳು ತಿಳಿಸುತ್ತವೆ. ಒಟ್ಟಿನಲ್ಲಿ, ಆಸಕ್ತಿಕರ ಇಂತಹ ವಿವರಗಳನ್ನು ಒಳಗೊಂಡ ಕೃತಿ ಇದು. .
©2024 Book Brahma Private Limited.