‘ದಿನಕರ ದೇಸಾಯರ ಕಾವ್ಯ’ ಗೌರೀಶ ಕಾಯ್ಕಿಣಿ ಸಂಗ್ರಹಿಸಿರುವ ಸಮೀಕ್ಷ ಪ್ರಬಂಧಗಳು. ಕೃತಿಗೆ ಮುಮ್ಮಾತುಗಳನ್ನು ಬರೆದಿರುವ ಗೌರೀಶ ಕಾಯ್ಕಿಣಿ ಅವರು ಡಾ. ದಿನಕರ ದೇಸಾಯರ ಕಾವ್ಯ ಪ್ರಪಂಚದ ಬಗೆಗೆ ಆಗೀಗ ಪ್ರಾಸಂಗಿಕವಾಗಿ ನಾನು ಬರೆದ ಬರಹಗಳನ್ನು ಇಲ್ಲಿ ಒಟ್ಟಾಗಿ ಈ ಪುಟ್ಟ ಹೊತ್ತಿಗೆಯ ರೂಪದಲ್ಲಿ ಹೊರತರುತ್ತಿದ್ದೇನೆ. ಇದಕ್ಕೆ ನನ್ನ ಕವಿಮಿತ್ರರೂ ಸಮರ್ಥ ಪ್ರಕಾಶಕರೂ ಆದ ಶ್ರೀವಿಷ್ಣು ನಾಯ್ಕರ ಅನುಗ್ರಹದ ಆಗ್ರಹವೇ ಮೂಲ ಪ್ರಚೋದನೆ ಎಂದಿದ್ದಾರೆ ಗೌರೀಶ ಕಾಯ್ಕಿಣಿ. ಈ ಸಂಕಲನದಲ್ಲಿ ದಿನಕರರ ಚೌಪದಿಗಳ ಕುರಿತು ನಾನು ಸೇರಿಸಿದ ಲೇಖನ(ಚೌಪದಿಗಳ ಚೌಕಶಿ) ಮಾತ್ರ ಈ ಸಂಕಲನಕ್ಕಾಗಿಯೇ ಅದೂ ಪ್ರಿಯ ವಿಷ್ಣು ನಾಯ್ಕರ ಸಲಹೆ ಮೇರೆಗೆ-ಬರೆದದ್ದು. ಕವಿ ದಿನಕರರ ಚುಟುಕುಗಳ ವಿಸ್ತಾರ ಅಪಾರ. ಕ್ಷಿತಿಜದ ತಂತಿಯೇ ಅದರ ಅಂತ್ಯವನ್ನೂ ಮೀಟಬಲ್ಲದು. ಕನ್ನಡದಲ್ಲಿ ಗೀಚಿದ್ದೆಲ್ಲ ಶ್ರೀಗಂಧ. ಎಂದಿದ್ದಾರೆ ದಿನಾಕರರು. ಈ ಮಾತನ್ನು ಕನ್ನಡದ ಸೌಂದರ್ಯವನ್ನು ಹೊಗಳಲು ಅವರು ಹೇಳಿದ್ದು. ಆದರೂ ಇದು ಅವರ ಈ ಚೌಪದಿಗಳ ರೂಪ ಗುಣಶೀಲಕ್ಕೂ ಯಥಾರ್ಥವಾಗಿ ಅನ್ವಯಿಸುತ್ತದೆ. ಶ್ರೀಗಂಧದ ಚೆಕ್ಕೆ ಒರಟಾಗಿ-ದೊರಗಾಗಿ ಕಾಣುತ್ತದೆ. ಆದರೆ ಅದನ್ನು ತಿಕ್ಕಿ ತೇದಂತೆ ಅದರ ಸುಗಂಧ ಹೆಚ್ಚು ಹೆಚ್ಚು ಸೂಸುತ್ತದೆ. ಡಾ. ದಿನಕರರ ಚುಟುಕಗಳೆಂಬ ಈ ಚೆಲುವಿನ ಚೆಕ್ಕೆಚೂರುಗಳೂ ಹಾಗೆಯೇ . ಇವುಗಳಲ್ಲಿ ಪದಲಾಲಿತ್ಯದೊಂದಿಗೆ ಅರ್ಥ ಗೌರವ ಹಾಸು ಹೊಕ್ಕಾಗಿಯೇ ಹೆಣೆದು ಹಬ್ಬಿದೆ. ಅದರ ಸೊಗಸನ್ನು ಇಲ್ಲಿ ಆದಷ್ಟು ಸಂಕ್ಷಿಪ್ತದಲ್ಲಿ ನೀಡಲು ಯತ್ನಿಸಿದ್ದೇನೆ ಎಂದಿದ್ದಾರೆ.
©2024 Book Brahma Private Limited.