ಕುವೆಂಪು ಅವರ ‘ಚಿತ್ರಾಂಗದಾ’ ಸರಳ ರಗಳೆಯಲ್ಲಿ ರಚಿತವಾದ ಖಂಡಕಾವ್ಯ. ಇದು ಅವರ ಮಹಾ ಛಂದಸ್ಸಿನ ಪೂರ್ವ ಪ್ರಯೋಗವಾಗಿದ್ದು ಮಹೋಪಮೆಗಳನ್ನು ಪ್ರಯೋಗಿಸಿರುವ ಮೊದಲಕಾವ್ಯ. ಹಾಗಾಗಿ ಇದು ಕನ್ನಡ ಸಾಹಿತ್ಯದಲ್ಲಿ ಹೊಸ ಸಾಹಸದ ಐತಿಹಾಸಿಕ ಕಾವ್ಯ ಪ್ರಯೋಗ ಕೃತಿ. ಈ ಖಂಡಕಾವ್ಯವು ಶೃಂಗಾರರಸದ ವಿವಿಧ ಮನೋಹರ ಭಾವಲಹರಿಗಳಿಂದ ಚಿತ್ತಾಕರ್ಷಕವಾಗಿದೆ. ಇದರ ಆಂತರ್ಯದಲ್ಲಿ ಚಿತ್ರಾಂಗದೆಯ ಪ್ರಣಯ ಪಾವಿತ್ರ್ಯ ಪ್ರತಿಷ್ಠಾಪಿತವಾಗಿದೆ. ಕುವೆಂಪು ಅವರ ‘ಚಿತ್ರಾಂಗದಾ’ ಅತಿಮಾನುಷ ಪೌರಾಣಿಕ ಚಿತ್ರಣವಲ್ಲ. ಅದು ಗಂಡು ಹೆಣ್ಣಿನ ಮನುಷ್ಯ ಸಹಜ ಆಕರ್ಷಣೆ, ದ್ವೇಷ, ಅಹಂಭಾವಗಳು ನಿರಸನಗೊಂಡ ಭಾರತೀಯ ತಾತ್ವಿಕ ನೆಲೆಯಲ್ಲಿ ಮಾಗಿದ ತಪಸ್ವಿ ಚಿತ್ರಾಂಗದೆಯ ಹೊಸಸೃಷ್ಟಿ. ಅವರ ನವ ಕಲ್ಪನೆಯಲ್ಲಿ - ಯುದ್ಧರಂಗದ ಮಧ್ಯದಲ್ಲಿ ಚಿತ್ರಾಂಗದೆ ನುಗ್ಗಿ ಪ್ರೀತಿಯ ಪತಿ, ವಾತ್ಸಲ್ಯದ ಮಗನ ಮಧ್ಯೆ ಬಿದ್ದು, ಅವರಿಬ್ಬರನ್ನು ಭೇಟಿಮಾಡಿಸಿ ಜೀವನ್ಮುಕ್ತಳಾಗುತ್ತಾಳೆ! ಕುವೆಂಪು ಅವರು ‘ಅರಿಕೆ’ಯಲ್ಲಿ ತಿಳಿಸಿರುವಂತೆ ‘ಪೂರ್ವ ಚಿತ್ರಾಂಗದೆಯನ್ನು ಚಿತ್ರಿಸುವ ಕೆಲವು ಸನ್ನಿವೇಶಗಳಿಗೆ ಈ ಕಾವ್ಯ ಋಣಿಯಾಗಿದೆ ಎನ್ನುತ್ತಾರೆ ಲೇಖಕ ಜಿ.ಕೃಷ್ಣಪ್ಪ.
©2024 Book Brahma Private Limited.