ವಲಸೆ ಸಂಘರ್ಷ ಮತ್ತು ಸಮನ್ವಯ

Author : ಪುರುಷೋತ್ತಮ ಬಿಳಿಮಲೆ

Pages 408

₹ 400.00




Year of Publication: 2019
Published by: ಆಕೃತಿ ಆಶಯ ಪಬ್ಲಿಕೇಷನ್ಸ್‌
Address: ಮ್ಯಾಗ್ಸಿಮಸ್‌ ಕಾಂಪ್ಲೆಕ್ಸ್, ಲೈಟ್‌ ಹೌಸ್‌ ಹಿಲ್‌ ರಸ್ತೆ, ಹಂಪನಕಟ್ಟೆ, ಮಂಗಳೂರು
Phone: 0824244300

Synopsys

 'ವಲಸೆ ,ಸಂಘರ್ಷ ಹಾಗೂ ಸಮನ್ವಯ : ಸುಳ್ಯ ಪರಿಸರದ ಗೌಡ ಸಮುದಾಯದ ಸಾಂಸ್ಕೃತಿಕ ಅಧ್ಯಯನ' ಇದು ಪುರುಷೋತ್ತಮ ಬಿಳಿಮಲೆ ಅವರ ಸಂಶೋಧನಾ ಕೃತಿ. ಸುಮಾರು 35 ವರ್ಷಗಳ ಹಿಂದೆ ಬಿಳಿಮಲೆ ಅವರು ನಡೆಸಿದ ಅಧ್ಯಯನವನ್ನು ಬಳಸಿಕೊಂಡು ಗೌಡ ಸಮುದಾಯದ ಇಂದಿನ ಪರಿಸ್ಥಿತಿಯ ಕುರಿತು ಸ್ಥೂಲವಾಗಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. 

ಈ ಕೃತಿಗೆ ಮುನ್ನುಡಿ ಬರೆದಿರುವ ಬಿ.ಎ. ವಿವೇಕ್‌ ರೈ ಅವರು  'ವಲಸೆ ' ಎಂಬ ಪರಿಕಲ್ಪನೆಯನ್ನು ಕುರಿತು ಜಾಗತಿಕ ಮಟ್ಟದಲ್ಲಿ ಸಾಕಷ್ಟು ಚರ್ಚೆಗಳು ಅಧ್ಯಯನಗಳು ನಡೆದಿವೆ ; ಗ್ರಂಥಗಳು ಲೇಖನಗಳು ಪ್ರಕಟವಾಗಿವೆ . ವಲಸೆಗೆ ಐತಿಹಾಸಿಕ , ರಾಜಕೀಯ , ಆರ್ಥಿಕ , ಧಾರ್ಮಿಕ ಮತ್ತು ಸಾಂಸ್ಕೃತಿಕವಾದ ಅನೇಕ ನೆಲೆಗಳು ಇರುತ್ತವೆ . ಇವುಗಳಲ್ಲಿ ಒಂದಕ್ಕಿಂತ ಹೆಚ್ಚು ಕಾರಣಗಳು ಒತ್ತಡಗಳ ರೂಪದಲ್ಲಿ ಕೆಲಸಮಾಡುತ್ತವೆ . ಇಂತಹ ವಲಸೆಗೆ ಒಳಗಾಗುವ' ಸಮುದಾಯ 'ಎನ್ನುವುದು ಕಸುಬು ,ಜಾತಿ , ಧರ್ಮ , ಭಾಷೆ , ಕುಟುಂಬ - ಹೀಗೆ ಅನೇಕ ಮಾಪನಗಳಿಂದ ರೂಪಿತವಾಗಿರುತ್ತದೆ .  ಆರ್ಥಿಕ ಮತ್ತು ಸಾಮಾಜಿಕ ಅಭದ್ರತೆಗಳು ವಲಸೆಯ ಪ್ರಕ್ರಿಯೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ .

ವಲಸೆ ಹೋಗಲು ಒಂದು  ಪ್ರದೇಶವನ್ನು ಆಯ್ಕೆಮಾಡುವಾಗ ಕೆಲವು ಪೂರ್ವಸೂಚನೆಗಳನ್ನು ಸಂಗ್ರಹಿಸುತ್ತಿದ್ದರು , ಸ್ಥಳೀಯ ವಿವರಗಳನ್ನು ಕಲೆಹಾಕುತ್ತಿದ್ದರು , ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು , ವಲಸೆಯ ದಾರಿಗಳನ್ನು ಗುರುತಿಸುತ್ತಿದ್ದರು . ಕರಾವಳಿ ಕರ್ನಾಟಕಕ್ಕೆ  ( ಈಗಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ) ಗೋವಾದಿಂದ ವಲಸೆ ಬಂದ ಗೌಡ ಸಾರಸ್ವತರು ತಮ್ಮ ವ್ಯಾಪಾರೀ ಕಸುಬಿಗಾಗಿ ಅರಬೀ ಸಮುದ್ರದ ಬದಿಯ ಬಂದರು ಪಟ್ಟಣಗಳನ್ನು ಮತ್ತು ನದಿಗಳ ಬದಿಯ ಪೇಟೆಗಳನ್ನು ಆರಿಸಿಕೊಂಡರೆ , ಗೋವಾದಿಂದ ವಲಸೆ ಬಂದ ರೋಮನ್ ಕೆಥೋಲಿಕ್ ಕ್ರೈಸ್ತರು ತಮ್ಮ ಕೃಷಿಯ ಕೆಲಸಕ್ಕಾಗಿ ಒಳನಾಡಿನ ಪ್ರದೇಶಗಳಲ್ಲಿ ಹೆಚ್ಚಾಗಿ ವಲಸೆ ಊರಿದರು . ಕರಾವಳಿಯ ಉತ್ತರದ ಪ್ರದೇಶಗಳಿಂದ ( ಹೈಗ , ಮಹಾರಾಷ್ಟ್ರ ಸಹಿತ ) ದಕ್ಷಿಣಕ್ಕೆ ವಲಸೆ ಬಂದ ಹವ್ಯಕ ಬ್ರಾಹ್ಮಣರು ಹಳೆಯ ಪುತ್ತೂರು ತಾಲೂಕು ( ಸುಳ್ಯ , ಬಂಟ್ವಾಳ ಸೇರಿ ) ಮತ್ತು ಕಾಸರಗೋಡು ಪ್ರದೇಶಗಳಲ್ಲಿ ನೆಲೆ ನಿಂತು ಕೃಷಿಯ ಕಾಯಕವನ್ನು ಕೈಕೊಂಡರೆ , ಚಿತ್ಪಾವನ ಬ್ರಾಹ್ಮಣರು ಕಾರ್ಕಳ ಮತ್ತು ಬೆಳ್ತಂಗಡಿಯ ಬೆಟ್ಟ ಪ್ರದೇಶಗಳನ್ನು ತಮ್ಮ ಕೃಷಿಗೆ ಆಯ್ಕೆ ಮಾಡಿಕೊಂಡರು .

ಕೃಷಿಕ ವೃತ್ತಿ ಆಯ್ಕೆಮಾಡಿಕೊಂಡ ವಲಸಿಗರಿಗೆ ಕೃಷಿಗೆ ಯೋಗ್ಯವಾದ ಭೂಮಿ ದೊರೆಯುವ ಸ್ಥಳಗಳು ವಲಸೆಯ ನೆಲೆಗಳಾದವು . ಗೌಡ ಸಮುದಾಯದವರು ಸುಳ್ಯ ಪರಿಸರಕ್ಕೆ ವಲಸೆ ಬಂದ ಕಾರಣಗಳು , ವಲಸೆ ಬಂದ ದಾರಿಗಳು , ವಲಸೆ ನಿಂತ ಪ್ರದೇಶಗಳು ಇವನ್ನು ಬಿಳಿಮಲೆ ತಮ್ಮ ಕೃತಿಯಲ್ಲಿ ಚರ್ಚಿಸಿದ್ದಾರೆ .

About the Author

ಪುರುಷೋತ್ತಮ ಬಿಳಿಮಲೆ
(21 August 1955)

ಡಾ.ಪುರುಷೋತ್ತಮ ಬಿಳಿಮಲೆ ಅವರು ಜನಿಸಿದ್ದು 1955 ಆಗಸ್ಟ್‌ 21ರಂದು. ನವದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಪುರುಷೋತ್ತಮ ಬಿಳಿಮಲೆಯವರು ಬಂಡಾಯ-ದಲಿತ ಸಾಹಿತ್ಯ ಚಳುವಳಿಯಲ್ಲಿ ನೇರವಾಗಿ ಭಾಗವಹಿಸಿದವರು, ಜನಪರ ಹೋರಾಟಗಳನ್ನು ಸಂಘಟಿಸಿದವರು. ಬಡವರ, ಹಿಂದುಳಿದವರ , ಅಲ್ಪಸಂಖ್ಯಾತರ ಮತ್ತು ದಲಿತರ ಪರವಾಗಿ ನಿರಂತರವಾಗಿ ಬರೆಯುತ್ತಲೇ ಬಂದಿರುವ ಅವರು ಸಾಹಿತ್ಯವನ್ನು ತಮ್ಮ ಹೋರಾಟಗಳಿಗೆ ಪೂರಕವಾಗಿ ಬಳಸಿಕೊಂಡಿದ್ದಾರೆ. ಜನಪದ ಸಾಹಿತ್ಯವನ್ನು ಗಂಭೀರವಾಗಿ ಅಭ್ಯಸಿಸಿರುವ ಅವರು ಆ ಮೂಲಕ ಶಿಷ್ಟ ಸಾಹಿತ್ಯದ ಕೆಲವು ಜನವಿರೋಧಿ ನೆಲೆಗಳನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ. 1955ರಲ್ಲಿ ಸುಳ್ಯ ತಾಲೂಕಿನ ಪಂಜದಲ್ಲಿ ಹುಟ್ಟಿದ ಇವರು ಪುತ್ತೂರು, ಮದರಾಸು, ಮಂಗಳೂರುಗಳಲ್ಲಿ ...

READ MORE

Excerpt / E-Books

ವಲಸೆ ಸಂಘರ್ಷ ಮತ್ತು ಸಮನ್ವಯ ಕೃತಿಯ ಕುರಿತು ಬಿ.ಎ. ವಿವೇಕ್‌ ರೈ ಬರೆದ ಮುನ್ನುಡಿ

ಡಾ . ಪುರುಷೋತ್ತಮ ಬಿಳಿಮಲೆ ಅವರ ಡಾಕ್ಟರೇಟ್ ಪ್ರಬಂಧವು ಸುಮಾರು ೩೫ ವರ್ಷಗಳ ಬಳಿಕ ಪರಿಷ್ಕೃತಗೊಂಡು ' ವಲಸೆ ,ಸಂಘರ್ಷ ಹಾಗೂ ಸಮನ್ವಯ : ಸುಳ್ಯ ಪರಿಸರದ ಗೌಡ ಸಮುದಾಯದ ಸಾಂಸ್ಕೃತಿಕ ಅಧ್ಯಯನ' ಎಂದು ಪ್ರಕಟವಾಗುತ್ತಿರುವುದು ಪ್ರಸ್ತುತ ಸಂದರ್ಭದಲ್ಲಿ ಮುಖ್ಯವಾದುದು . ೧೯೮೨-೮೫ ರ ಅವಧಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪಿಎಚ್ ಡಿ ಪದವಿಗಾಗಿ ಅವರು ನಡೆಸಿದ ಸಂಶೋಧನೆಗೆ ಮಾರ್ಗದರ್ಶಕನಾಗಿದ್ದ ನಾನು ೩೫ ವರ್ಷಗಳ ಬಳಿಕ ಅದು ಪ್ರಕಟವಾಗುತ್ತಿರುವ ಸಂದರ್ಭದಲ್ಲಿ ಈ ಗ್ರಂಥಕ್ಕೆ ಮುನ್ನುಡಿ ಬರೆಯುವ ಸನ್ನಿವೇಶದಲ್ಲಿ  ನಾವಿಬ್ಬರೂ ನಮ್ಮ ಹಳೆಯ ಸಂಬಂಧಗಳನ್ನು  ಉಳಿಸಿಕೊಂಡಿರುವುದು ಮತ್ತು ನಾವು  ಬೇರೆ ಬೇರೆಯಾಗಿ ನಮ್ಮದೇ ಆದ ವಲಸೆ , ಸಂಘರ್ಷ ಮತ್ತು ಸಮನ್ವಯಗಳಿಗೆ ಒಳಗಾಗಿಯೂ ನಮ್ಮ ನಮ್ಮ ಅನನ್ಯತೆ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಬಂದಿರುವುದು ನನಗೆ ಸಂತೃಪ್ತಿ ಮತ್ತು ಸಂತಸವನ್ನು ಉಂಟುಮಾಡುತ್ತಿದೆ . 
ಬಿಳಿಮಲೆ ಮಂಗಳೂರು ವಿವಿಯಲ್ಲಿ ನನ್ನ ಮೊದಲನೆಯ ಸಂಶೋಧನಾ ವಿದ್ಯಾರ್ಥಿ . ಆ ಮಮಕಾರವನ್ನು ನಾವಿಬ್ಬರೂ ಮರೆತಿಲ್ಲ . ೧೯೮೨ರಲ್ಲಿ ಮಂಗಳೂರು ವಿವಿಯ ಕನ್ನಡ ವಿಭಾಗದಲ್ಲಿನಾನು  ರೀಡರ್ ಆಗಿ , ಸಂಶೋಧನೆಯ ಮಾರ್ಗದರ್ಶಕನಾಗಿ ಮಾನ್ಯತೆ ಪಡೆದಾಗ ಪಿ ಎಚ್ ಡಿ ಪದವಿಯ ಸಂಶೋಧನೆಗಾಗಿ ನನ್ನನ್ನು ಮೊದಲು ಸಂಪರ್ಕಿಸಿದವರು ಪುರುಷೋತ್ತಮ ಬಿಳಿಮಲೆ . ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಅವರು ಉತ್ಸಾಹ ,ಸಾಹಿತ್ಯ ಪ್ರೀತಿ ಮತ್ತು ಸಂಘಟನೆಯ ಮೂಲಕ ಗಮನ ಸೆಳೆದಿದ್ದರು .ಬಂಡಾಯ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು . ಅವರ ಸಾಂಸ್ಕೃತಿಕ ಹಿನ್ನೆಲೆ , ಅವರು ಕೆಲಸ ಮಾಡುತ್ತಿದ್ದ ಪರಿಸರ -ಇವನ್ನು ಗಮನಿಸಿ 'ಸುಳ್ಯ ಪರಿಸರದ ಗೌಡ ಜನಾಂಗದ ಸಾಂಸ್ಕೃತಿಕ ಅಧ್ಯಯನ ' ದ ಬಗ್ಗೆ ಸಂಶೋಧನೆ ನಡೆಸಲು ಸೂಚಿಸಿದೆ . ನಾನು ಅಧ್ಯಾಪನಕ್ಕಾಗಿ ಅಧ್ಯಯನ ಮಾಡಿ ನನ್ನ ಸಂಶೋಧನೆಗೆ ಬಳಸಿದ್ದ ಸಾಂಸ್ಕೃತಿಕ ಮಾನವವಿಜ್ಞಾನದ ನನ್ನ ಓದು ಈ ವಿಷಯ ಸೂಚಿಸಲು ಕಾರಣವಾಗಿತ್ತು . ಜೊತೆಗೆ ವೈಚಾರಿಕವಾಗಿ ನಾನು ಸ್ಪಷ್ಟವಾಗಲು ನನಗೆ ಮೊದಲು ನೆರವಾದದ್ದು ಕೂಡಾ  ಸಾಂಸ್ಕೃತಿಕ ಮಾನವವಿಜ್ಞಾನ .  ಮತ್ತೆ ಅದಕ್ಕೆ ಪೂರಕವಾಗಿ ಜಾನಪದ ವಿಜ್ಞಾನದ ಅಧ್ಯಯನ . 
ಬಿಳಿಮಲೆ ಪರಸ್ಪರ ಸಮಾಲೋಚನೆಯ ಮೂಲಕ ತಮ್ಮ ಕ್ಷೇತ್ರಕಾರ್ಯದ ಪ್ರಶ್ನಾವಳಿ ಸಿದ್ಧಪಡಿಸಿದರು . ಬಳಿಕ ಎರಡು ವರ್ಷಗಳಲ್ಲಿ ಸುಳ್ಯ ತಾಲೂಕಿನ ಪ್ರತಿಯೊಂದು ಗ್ರಾಮವನ್ನೂ ಸುತ್ತಾಡಿ ಮನೆಮನೆಗೆ ಹೋಗಿ ಮಾಹಿತಿ ಕಲೆಹಾಕಿದರು . ಪಕ್ಕದ ಪುತ್ತೂರು ತಾಲೂಕು ಮತ್ತು ಕೊಡಗು ಪ್ರದೇಶಗಳನ್ನೂ ತಮ್ಮ ಕ್ಷೇತ್ರಕಾರ್ಯದ ವ್ಯಾಪ್ತಿಗೆ ಅಳವಡಿಸಿದರು . ಅವರು ಆಗ ನಡೆಸಿದ ಕ್ಷೇತ್ರಕಾರ್ಯ ಮತ್ತು ಸಂಗ್ರಹಿಸಿದ ಬಹುಮುಖಿ ಮಾಹಿತಿ ನನ್ನ ದೃಷ್ಟಿಯಲ್ಲಿ ಒಂದು ಅಪೂರ್ವ ಸಂಸ್ಕೃತಿ ಭಂಡಾರ . ತಮ್ಮ ಕಾಲೇಜು ಅಧ್ಯಾಪನದ ನಡುವೆ ಕೇವಲ ಎರಡು ವರ್ಷಗಳಲ್ಲಿ ಅವರು ನಡೆಸಿದ ಸೂಕ್ಷ್ಮಗ್ರಾಹಿ  , ಪ್ರಭೇದಮುಖಿ  ,ಮತ್ತು ಬಹುರೂಪಿ ಜ್ಞಾನಸಂಪತ್ತು ಪರಂಪರೆಯ ದಾಖಲೀಕರಣದಲ್ಲಿ ಇಂದಿಗೂ ಒಂದು ಅಪೂರ್ವ ದಾಖಲೆ ಎಂದು ನಾನು ಭಾವಿಸುತ್ತೇನೆ . ಹಾಗಾಗಿಯೇ ಅಂದು ಅವರು ಕಲೆಹಾಕಿದ ಆ ದೇಸೀಜ್ಞಾನರಾಶಿ ೩೫ವರ್ಷಗಳ ಬಳಿಕ ಮತ್ತೆ ನಮಗೆ ದೊರಕಿದ ದೃಷ್ಟಿಯಿಂದ ಈ ಗ್ರಂಥಕ್ಕೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಇದೆ . ಬಿಳಿಮಲೆ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಕಾಲಕ್ರಮೇಣ ಆದ ಬದಲಾವಣೆಗಳನ್ನು ಗುರುತಿಸಿದ್ದಾರೆ . ಕೆಲವೊಮ್ಮೆ ಇತ್ತೀಚೆಗಿನ ವಿದ್ಯಮಾನಗಳ ಬಗ್ಗೆ ಅಭಿಪ್ರಾಯ ಮತ್ತು ಆತಂಕಗಳನ್ನು ಪ್ರಕಟಿಸಿದ್ದಾರೆ . ಆದರೆ ಪ್ರಧಾನವಾಗಿ ಈ ಗ್ರಂಥವು ಅವರ ಪಿ ಎಚ್ ಡಿ ಸಂಶೋಧನೆಯ ಕಾಲದ ವಿಪುಲ ಸಾಮಗ್ರಿಗಳ ವಿವರಣಾತ್ಮಕ ದಾಖಲೆಯಾಗಿ ರೂಪುಗೊಂಡಿದೆ . ಈ ದೃಷ್ಟಿಯಿಂದ ಈ ಗ್ರಂಥದ ಮಹತ್ವ ಒಂದು ಪರಂಪರೆಯ ಕಣಜವಾಗಿ ಮತ್ತು ಪರಿವರ್ತನಶೀಲತೆಯ ಶ್ರೀಮಂತ ಆಕರವಾಗಿ ವಿಶಿಷ್ಟವಾಗಿದೆ . 

ಬಿಳಿಮಲೆ ತಮ್ಮ ಈ ಗ್ರಂಥಕ್ಕೆ ' ವಲಸೆ , ಸಂಘರ್ಷ ಹಾಗೂ ಸಮನ್ವಯ ' ಎಂಬ ಮುಖ್ಯ ಶೀರ್ಷಿಕೆಯನ್ನು ಕೊಟ್ಟು ಅದರ ಅಡಿಯಲ್ಲಿ ' ಸುಳ್ಯ ಪರಿಸರದ ಗೌಡ ಸಮುದಾಯದ ಸಾಂಸ್ಕೃತಿಕ ಅಧ್ಯಯನ ' ಎನ್ನುವ ಉಪಶೀರ್ಷಿಕೆಯನ್ನು ಜೋಡಿಸಿದ್ದಾರೆ . ಇದರಿಂದಾಗಿ ಈ ಮುಖ್ಯ ಶೀರ್ಷಿಕೆಯ ಪರಿಕಲ್ಪನೆಯ ವ್ಯಾಪ್ತಿಯಲ್ಲಿ ಇಲ್ಲಿನ ಅಧ್ಯಯನವನ್ನು ಓದಲು ಮತ್ತು ಗ್ರಹಿಸಲು ಅವಕಾಶ ಕಲ್ಪಿಸಲಾಗಿದೆ . 'ವಲಸೆ ' ಎಂಬ ಪರಿಕಲ್ಪನೆಯನ್ನು ಕುರಿತು ಜಾಗತಿಕ ಮಟ್ಟದಲ್ಲಿ ಸಾಕಷ್ಟು ಚರ್ಚೆಗಳು ಅಧ್ಯಯನಗಳು ನಡೆದಿವೆ ; ಗ್ರಂಥಗಳು ಲೇಖನಗಳು ಪ್ರಕಟವಾಗಿವೆ . ವಲಸೆಗೆ ಐತಿಹಾಸಿಕ , ರಾಜಕೀಯ , ಆರ್ಥಿಕ , ಧಾರ್ಮಿಕ ಮತ್ತು ಸಾಂಸ್ಕೃತಿಕವಾದ ಅನೇಕ ನೆಲೆಗಳು ಇರುತ್ತವೆ . ಇವುಗಳಲ್ಲಿ ಒಂದಕ್ಕಿಂತ ಹೆಚ್ಚು ಕಾರಣಗಳು ಒತ್ತಡಗಳ ರೂಪದಲ್ಲಿ ಕೆಲಸಮಾಡುತ್ತವೆ . ಇಂತಹ ವಲಸೆಗೆ ಒಳಗಾಗುವ' ಸಮುದಾಯ 'ಎನ್ನುವುದು ಕಸುಬು ,ಜಾತಿ , ಧರ್ಮ , ಭಾಷೆ , ಕುಟುಂಬ - ಹೀಗೆ ಅನೇಕ ಮಾಪನಗಳಿಂದ ರೂಪಿತವಾಗಿರುತ್ತದೆ .  ಆರ್ಥಿಕ ಮತ್ತು ಸಾಮಾಜಿಕ ಅಭದ್ರತೆಗಳು ವಲಸೆಯ ಪ್ರಕ್ರಿಯೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ . ವಲಸೆ ಹೋಗಲು ಒಂದು  ಪ್ರದೇಶವನ್ನು ಆಯ್ಕೆಮಾಡುವಾಗ ಕೆಲವು ಪೂರ್ವಸೂಚನೆಗಳನ್ನು ಸಂಗ್ರಹಿಸುತ್ತಿದ್ದರು , ಸ್ಥಳೀಯ ವಿವರಗಳನ್ನು ಕಲೆಹಾಕುತ್ತಿದ್ದರು , ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು , ವಲಸೆಯ ದಾರಿಗಳನ್ನು ಗುರುತಿಸುತ್ತಿದ್ದರು . ಕರಾವಳಿ ಕರ್ನಾಟಕಕ್ಕೆ  ( ಈಗಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ) ಗೋವಾದಿಂದ ವಲಸೆ ಬಂದ ಗೌಡ ಸಾರಸ್ವತರು ತಮ್ಮ ವ್ಯಾಪಾರೀ ಕಸುಬಿಗಾಗಿ ಅರಬೀ ಸಮುದ್ರದ ಬದಿಯ ಬಂದರು ಪಟ್ಟಣಗಳನ್ನು ಮತ್ತು ನದಿಗಳ ಬದಿಯ ಪೇಟೆಗಳನ್ನು ಆರಿಸಿಕೊಂಡರೆ , ಗೋವಾದಿಂದ ವಲಸೆ ಬಂದ ರೋಮನ್ ಕೆಥೋಲಿಕ್ ಕ್ರೈಸ್ತರು ತಮ್ಮ ಕೃಷಿಯ ಕೆಲಸಕ್ಕಾಗಿ ಒಳನಾಡಿನ ಪ್ರದೇಶಗಳಲ್ಲಿ ಹೆಚ್ಚಾಗಿ ವಲಸೆ ಊರಿದರು . ಕರಾವಳಿಯ ಉತ್ತರದ ಪ್ರದೇಶಗಳಿಂದ ( ಹೈಗ , ಮಹಾರಾಷ್ಟ್ರ ಸಹಿತ ) ದಕ್ಷಿಣಕ್ಕೆ ವಲಸೆ ಬಂದ ಹವ್ಯಕ ಬ್ರಾಹ್ಮಣರು ಹಳೆಯ ಪುತ್ತೂರು ತಾಲೂಕು ( ಸುಳ್ಯ , ಬಂಟ್ವಾಳ ಸೇರಿ ) ಮತ್ತು ಕಾಸರಗೋಡು ಪ್ರದೇಶಗಳಲ್ಲಿ ನೆಲೆ ನಿಂತು ಕೃಷಿಯ ಕಾಯಕವನ್ನು ಕೈಕೊಂಡರೆ , ಚಿತ್ಪಾವನ ಬ್ರಾಹ್ಮಣರು ಕಾರ್ಕಳ ಮತ್ತು ಬೆಳ್ತಂಗಡಿಯ ಬೆಟ್ಟ ಪ್ರದೇಶಗಳನ್ನು ತಮ್ಮ ಕೃಷಿಗೆ ಆಯ್ಕೆ ಮಾಡಿಕೊಂಡರು . ಕೃಷಿಕ ವೃತ್ತಿ ಆಯ್ಕೆಮಾಡಿಕೊಂಡ ವಲಸಿಗರಿಗೆ ಕೃಷಿಗೆ ಯೋಗ್ಯವಾದ ಭೂಮಿ ದೊರೆಯುವ ಸ್ಥಳಗಳು ವಲಸೆಯ ನೆಲೆಗಳಾದವು . ಗೌಡ ಸಮುದಾಯದವರು ಸುಳ್ಯ ಪರಿಸರಕ್ಕೆ ವಲಸೆ ಬಂದ ಕಾರಣಗಳು , ವಲಸೆ ಬಂದ ದಾರಿಗಳು , ವಲಸೆ ನಿಂತ ಪ್ರದೇಶಗಳು ಇವನ್ನು ಬಿಳಿಮಲೆ ತಮ್ಮ ಗ್ರಂಥದಲ್ಲಿ ಚರ್ಚಿಸಿದ್ದಾರೆ . ಜನವಸತಿ ಕಡಮೆ ಇದ್ದ , ಅರಣ್ಯಗಳಿಂದ ತುಂಬಿದ ಪ್ರದೇಶಕ್ಕೆ ಗೌಡರು ವಲಸೆ ಬಂದ ಪ್ರಕ್ರಿಯೆಯ ಹಿಂದೆ ಒಂದು ಸಮುದಾಯವು  ಒಟ್ಟಾಗಿ ಮತ್ತು ಸುರಕ್ಷಿತವಾಗಿ ಒಂದು  ಕಡೆ ನೆಲೆಊರುವ ಮನೋಧರ್ಮ ಕಾಣಿಸುತ್ತದೆ . 
ವಲಸೆ ಬಂದ ಸಮುದಾಯವು ನೆಲೆಊರಿದ ಪ್ರದೇಶದಲ್ಲಿ ಅಲ್ಲಿ ಆಗಾಗಲೇ ಇದ್ದ ಸಮುದಾಯಗಳ ಜೊತೆಗೆ ಸಂಘರ್ಷ ಮತ್ತು ಸಮನ್ವಯದ ಸಂಬಂಧವನ್ನು ಹೊಂದುವ ಪ್ರಕ್ರಿಯೆ  ಅಧ್ಯಯನಯೋಗ್ಯವಾದುದು . ಸಮುದಾಯಗಳ ನಡುವೆ ಯಾವ ಯಾವ ನೆಲೆಗಳಲ್ಲಿ ಯಾವ ಪ್ರಮಾಣದಲ್ಲಿ ಹೇಗೆ ಸಂಘರ್ಷ ಏರ್ಪಡುತ್ತದೆ ಎನ್ನುವುದು ಕುತೂಹಲಕಾರಿಯಾದುದು .ಸಾಮಾನ್ಯವಾಗಿ  ಪ್ರಭುತ್ವ ಮತ್ತು ಅಧೀನತೆಯ  ಮಾದರಿಯಲ್ಲಿ ಸಂಘರ್ಷಗಳು ನಡೆಯುತ್ತವೆ . ಇಂತಹ ಸಂದರ್ಭಗಳಲ್ಲಿ ಜಾತಿ ಅಥವಾ ಧರ್ಮಕ್ಕಿಂತ ಆರ್ಥಿಕಹತೋಟಿ ಪ್ರಧಾನ ಪಾತ್ರವನ್ನು ವಹಿಸುತ್ತದೆ . ಕರಾವಳಿಯ ಇತಿಹಾಸದಲ್ಲಿ ಮಂಗಳೂರಿನಲ್ಲಿ ನಡೆದ ಅನೇಕ ಯುದ್ಧಗಳ ಮೂಲ ಕಾರಣವೆಂದರೆ ಆ ಕಾಲದ ಆರ್ಥಿಕ ವ್ಯವಹಾರದ ಶಕ್ತಿಕೇಂದ್ರವಾದ ಮಂಗಳೂರು ಬಂದರನ್ನು ವಶಮಾಡಿಕೊಳ್ಳುವುದು .ಸುಳ್ಯ ಪ್ರದೇಶದಲ್ಲಿ ಗೌಡರು ವಲಸೆ ಬಂದ ಕಾಲದಲ್ಲಿ ಇದ್ದಿರಬಹುದಾದ ಎರಡು ಸಮುದಾಯಗಳ ಬಗ್ಗೆ ಬಿಳಿಮಲೆ ಪ್ರಸ್ತಾವಿಸಿದ್ದಾರೆ . ಅಲ್ಲಿನ ಮೂಲನಿವಾಸಿಗಳಾಗಿ ಇದ್ದಿರಬಹುದಾದ ಮಲೆಕುಡಿಯರು ಮತ್ತು ಅಲ್ಲಿನ ಧಾರ್ಮಿಕ ಮತ್ತು ಸಾಮಾಜಿಕ ಪ್ರಭುತ್ವದ ಪ್ರತಿನಿಧಿಗಳಾಗಿದ್ದ ಜೈನರು . ಮಲೆಕುಡಿಯರು ಅರಣ್ಯ ಸಂಸ್ಕೃತಿಯವರು ಆಗಿದ್ದುದರಿಂದ ಗೌಡರಿಗೆ ಅವರ ಜೊತೆಗೆ ಸಂಘರ್ಷಕ್ಕೆ ಅವಕಾಶ ಇರಲಿಲ್ಲ . ಗೌಡರ ಕೃಷಿ ಸಂಸ್ಕೃತಿಯಲ್ಲಿ ಅವರು ಸಹಾಯಕರಾದರು . ಆದರೆ ಜೈನರು ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಭುತ್ವದ ನೆಲೆಯಲ್ಲಿ ಇದ್ದ ಕಾರಣ ವಲಸೆ ಬಂದ ಗೌಡರು ತಾವು ಕಟ್ಟಿಕೊಂಡು ಬಂದ ಸಬ್ಬಮ್ಮ ಮತ್ತು ಕೆಂಚಮ್ಮ ದೇವತೆಗಳನ್ನು ಅಲ್ಲಿ ನೆಲೆಊರಿಸಲು ಪ್ರಯತ್ನಿಸಿದಾಗ ಸಹಜವಾಗಿಯೇ ಸಂಘರ್ಷ ನಡೆದಿರಬೇಕು . ಕಂದ್ರಪಾಡಿಯ ಉಲ್ಲೇಖವನ್ನು ಬಿಳಿಮಲೆ ಕೊಡುತ್ತಾರೆ . ಆದರೆ ಜೈನ ಮತ್ತು ಗೌಡರ ನಡುವಿನ ಸಂಘರ್ಷ ಕೇವಲ ಧಾರ್ಮಿಕ ನೆಲೆಗೆ ಸೀಮಿತವಾಗಿತ್ತು ಎಂದು ನನಗೆ ಅನ್ನಿಸುವುದಿಲ್ಲ. ಅದಕ್ಕೆ ಆಡಳಿತದ ಪ್ರಭುತ್ವದ ಸಂಘರ್ಷವೂ ಕಾರಣವಾಗಿತ್ತು ಅನ್ನಿಸುತ್ತದೆ .  ಸುಳ್ಯ ಪ್ರದೇಶದಲ್ಲಿ ನಿರ್ದಿಷ್ಟ ಜೈನ ಅರಸುಮನೆತನ ಆಳುತ್ತಿದ್ದ ಉಲ್ಲೇಖ ಇಲ್ಲ . ಆದರೆ ಜೈನರ ಬೀಡುಗಳು ಇದ್ದುವು ಮತ್ತು ಬಲ್ಲಾಳರು ಇದ್ದರು . ಆದ್ದರಿಂದ ಅಲ್ಲಿ ಜೈನರ ಅಸ್ತಿತ್ವ ಇದ್ದುದು ಸ್ಥಳೀಯ ಭೂ ಒಡೆತನದ ರೂಪದಲ್ಲಿ . ಇದಕ್ಕೆ ಪೂರಕವಾಗಿ ಕೆಲವು ಕಡೆ ಜೈನ ಬಸದಿಗಳು ಇದ್ದುವು . ಈ ಕಾರಣಕ್ಕಾಗಿ ಸ್ಥಳೀಯ ದೈವಗಳ ಆರಾಧನೆಯ ಜೊತೆಗೆ ಜೈನ ಧರ್ಮದ ಅಸ್ತಿತ್ವಕ್ಕೆ ಗೌಡರ ವಲಸೆಯ ಮೊದಲೇ ಸಂಘರ್ಷ ಏರ್ಪಟ್ಟಿರಬೇಕು . ಆದ್ದರಿಂದಲೇ ಗೌಡರು ಅಲ್ಲಿಗೆ ವಲಸೆ ಬಂದಾಗ ಅವರ ದೈವಗಳಿಗೆ ಜೈನ ಧರ್ಮದ ಆರಾಧನೆಯ ಜೊತೆಗೆ ಸಂಘರ್ಷ ಏರ್ಪಟ್ಟಾಗ ಸ್ಥಳೀಯರು ಗೌಡರ ಜೊತೆಗೆ ಸೇರಿ ಜೈನರನ್ನು ಹೊರಗಟ್ಟಲು ನೆರವಾಗಿರಬಹುದು . ಇದರ ಪರಿಣಾಮವಾಗಿ ಗೌಡರು ಸ್ಥಳೀಯ ದೈವಗಳನ್ನೂ ಆರಾಧಿಸುವ ಸಮನ್ವಯ ಸಾಧ್ಯ ಆಗಿರಬಹುದು . 
ಬಿಳಿಮಲೆ ಅವರ ಅಧ್ಯಯನವನ್ನು ಗಮನಿಸಿದಾಗ ಇಂತಹ ಸಂಘರ್ಷ ಮತ್ತು ಸಮನ್ವಯ ಹೆಚ್ಚು ಕಾಣಿಸಿಕೊಳ್ಳುವುದು 'ಧಾರ್ಮಿಕ ಸಂಪ್ರದಾಯಗಳು ' ಅಧ್ಯಾಯದಲ್ಲಿ . ಸಬ್ಬಮ್ಮ ಮತ್ತು ಕೆಂಚಮ್ಮ , ನಾಗಾರಾಧನೆ , ಲಕುಲೀಶ ಮತ್ತು ಗೊರವ , ಹರಿಸೇವೆ , ಬಚ್ಚನಾಯ್ಕ , ಪುರುಷ , ಶಿರಾಡಿ ಭೂತ ಮತ್ತು ಉಳ್ಳಾಕುಲು - ಗೌಡರ ಆರಾಧನಾ ಸಂಪ್ರದಾಯದಲ್ಲಿ ಕಾಲಕಾಲಕ್ಕೆ ಈ ಎಲ್ಲ ಜನಪದ ಧರ್ಮದ ಭಿನ್ನ ಬಗೆಗಳು ಸೇರಿಕೊಂಡ ಕಥನವೇ ವಲಸೆ , ಸಂಘರ್ಷ ಮತ್ತು ಸಮನ್ವಯದ ವಿಶಿಷ್ಟ ಮಾದರಿ . ಈ ಅಧ್ಯಾಯವನ್ನು ಒಂದು ವಿದ್ಯಮಾನವಾಗಿ ಇಟ್ಟುಕೊಂಡೇ 'ವಲಸೆ , ಸಂಘರ್ಷ ಮತ್ತು ಸಮನ್ವಯ' ದ ಸೈದ್ಧಾಂತಿಕ ವಿನ್ಯಾಸವನ್ನು ರೂಪಿಸಲು ಅವಕಾಶವಿದೆ . 'ಸಮನ್ವಯ ' ಎಂಬ ಪರಿಕಲ್ಪನೆ ಕೂಡಾ ಸರಳಸ್ವರೂಪದ್ದಲ್ಲ . ತನ್ನ ಅನನ್ಯತೆಯನ್ನು ಉಳಿಸಿಕೊಂಡು ಎಷ್ಟು ಪ್ರಮಾಣದಲ್ಲಿ ಏನನ್ನು ಸೇರಿಸಿಕೊಳ್ಳಬಹುದು ಎನ್ನುವುದು'ಸಮನ್ವಯದ ಚರ್ಚೆಯಲ್ಲಿ  ಬಹಳ ಮುಖ್ಯ . ಧಾರ್ಮಿಕ ಮತ್ತು ಆರ್ಥಿಕ ನೆಲೆಗಳಲ್ಲಿ 'ಸಮನ್ವಯ ' ಎನ್ನುವುದು ಹೆಚ್ಚು ಸೂಕ್ಷ್ಮವಾಗಿ ವಿಚಾರಪರವಾಗಿ ಗಮನಿಸಬೇಕಾದ ಸಂಗತಿ . ಅನೇಕ ಸಮುದಾಯಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿರುವುದು ಧಾರ್ಮಿಕ ಮತ್ತು ಆರ್ಥಿಕ ನೆಲೆಗಳಲ್ಲಿ . ಕರ್ನಾಟಕದ ಕರಾವಳಿಯಲ್ಲಿ ಕಳೆದ ಮೂರು ದಶಕಗಳಿಂದ ಈ ರೀತಿಯ 'ಸಾಂಸ್ಕೃತಿಕ ಸವೆತ 'ನಡೆಯುತ್ತಿದೆ . ಧರ್ಮ ,ಜಾತಿ , ಅಂತಸ್ತು ,' ದೊಡ್ಡ ಹಣ ', ಕೀಳರಿಮೆ -ಮೇಲರಿಮೆಗಳ ದ್ವಂದ್ವ , ಖಾಸಗಿ ಬದುಕು ಸಾರ್ವಜನಿಕ ಪ್ರದರ್ಶನವಾಗಿ ಕಾಣಿಸಿಕೊಳ್ಳುವ ಬಹಿರಂಗೀಕರಣ - ಇಂತಹ ಹಲವು ಮಾಪಕಗಳು ಒಂದು ಸಮುದಾಯದ ಅನನ್ಯತೆಯನ್ನು ತೋರಿಕೆಯ ಸಮನ್ವಯದ ಹೆಸರಿನಲ್ಲಿ ಕರಗಿಸುತ್ತಾ ಬರುತ್ತವೆ . 
          ಧರ್ಮದ ನೆಲೆಯಲ್ಲಿ ಜನಪದ ಮತ್ತು ಶಿಷ್ಟ ಎನ್ನುವ ಪ್ರಭೇದಗಳು ಕಲಬೆರಕೆ ಆಗುತ್ತಾ ಬಂದಿವೆ . ಶೈವಧರ್ಮದ ವಿಭಿನ್ನ ಪಂಥಗಳು ಲಕುಲೀಶ , ಕಾಳಾಮುಖ , ಕಾಪಾಲಿಕ , ಕಾಳಭೈರವ ಮುಂತಾದುವು ಜನಪದ ಪರಂಪರೆಯಲ್ಲಿ ಸಮನ್ವಯಗೊಂಡು ಪ್ರಸರಣಗೊಂಡವು . ಇವು ಬಹುಮಟ್ಟಿಗೆ ಸಂಚಾರಮಾಡುವ 'ವಲಸೆಧರ್ಮಗಳು ' . ಅವು ಹೆಚ್ಚಾಗಿ ನೆಲೆಊರುವುದು ಬೆಟ್ಟ ಮತ್ತು ಅರಣ್ಯಪ್ರದೇಶಗಳಲ್ಲಿ . ಈ ಪಂಥಗಳಲ್ಲಿ ಇರುವ ಕಾಠಿಣ್ಯ ಮತ್ತು ದೊರಗುತನ - ಜನಪದ ಮನೋಧರ್ಮಕ್ಕೆ ಸಮೀಪವಾದವು . ಇವುಗಳ ಆಚರಣೆಗಳು ಬಹುಮಟ್ಟಿಗೆ ಉಗ್ರಸ್ವರೂಪದವು . ಇವುಗಳ ಬಳಿಕ ಸ್ಥಳೀಯ ಸಂಸ್ಕೃತಿಯ ಮೇಲೆ ಪ್ರಭಾವ ಬೀರಿದ ವೈಷ್ಣವ ಧರ್ಮವು ಭಕ್ತಿ ಪಂಥದ ಮಾದರಿಯದ್ದು . 'ಜನಪದ ಶೈವ'ಕ್ಕೆ ಸಂಪೂರ್ಣ ವಿರುದ್ಧವಾದ 'ಜನಪದ ವೈಷ್ಣವ'ವು ಹರಿಸೇವೆ ಮತ್ತು ವೆಂಕಟರಮಣ ಮುಡಿಪುವಿನ ರೂಪಗಳಲ್ಲಿ ಕಾಣಿಸಿಕೊಂಡಿತು . ಭಕ್ತಿ ಪಂಥದ ಮುಖ್ಯಗುಣಗಳಾದ ಸೌಮ್ಯರೀತಿಯ ಅರ್ಪಣೆ , ವಿಧೇಯತೆ ಮತ್ತು ಮುಗ್ಧ ಬೆರಗು - 'ಜನಪದ ವೈಷ್ಣವ'ದಲ್ಲಿ ಪ್ರಧಾನವಾಗಿದ್ದ  ಕಾರಣ , 'ಜನಪದ ಶೈವ ' ಮತ್ತು 'ಜನಪದ ವೈಷ್ಣವ 'ಗಳ ಸಮನ್ವಯವು ಸುಳ್ಯ ಗೌಡರಲ್ಲಿ ಹೊಸ ಧರ್ಮವೊಂದನ್ನು ಕಂಡುಕೊಂಡ ಕಥನವನ್ನು ಒಂದು ಪ್ರಮೇಯವಾಗಿ ಇಟ್ಟುಕೊಂಡು 'ಧಾರ್ಮಿಕ ಫ್ಯೂಸನ್ ' ನ ಪ್ರಕ್ರಿಯೆಯನ್ನು ಗುರುತಿಸಬಹುದು . 
             ಆಹಾರಪದ್ಧತಿ ಎನ್ನುವುದು ಒಂದು ಸಮುದಾಯದ ಅನನ್ಯತೆಯಲ್ಲಿ ಮುಖ್ಯವಾದುದು . ಆಹಾರದ ಮೂಲದ್ರವ್ಯ , ಆಹಾರದ ಬಗೆಗಳು ,ಅವನ್ನು ತಯಾರಿಸುವ ದೇಸಿ ವಿಧಾನಗಳು , ಒಟ್ಟು ಆಹಾರ ಸಂಸ್ಕೃತಿಯಲ್ಲಿ ಅಡಕವಾಗಿರುವ ನೈಸರ್ಗಿಕ ಆರೋಗ್ಯದ ತತ್ವ ವಿಶಿಷ್ಟವಾಗಿರುತ್ತವೆ . ಆಧುನಿಕ ಕಾಲದಲ್ಲಿ ಸಾವಯವ ಆಹಾರದ ಕಡೆಗೆ ಮತ್ತೆ ಮುಖಮಾಡುತ್ತಿರುವ ಸಂದರ್ಭದಲ್ಲಿ ನಮ್ಮ ಜನಪದ ಸಮುದಾಯಗಳ ದೇಸಿ ಆಹಾರ ವೈವಿಧ್ಯವನ್ನು ಪರಿಶೀಲಿಸಿ ಮರುಬಳಕೆಗೆ ತರುವುದು ಪೌಷ್ಟಿಕತೆಯ ಮತ್ತು ಸರಳತೆಯ ಗಾಂಧಿಮಾರ್ಗದ ಆಹಾರತತ್ವವೂ ಹೌದು . ಗೌಡ ಸಮುದಾಯದ ಬಗ್ಗೆ ಬಿಳಿಮಲೆ ಕೊಡುವ ಆಹಾರದ ವಿವರಗಳನ್ನು ಈ ದೃಷ್ಟಿಯಿಂದ ನೋಡಬೇಕು . ಅಕ್ಕಿರೊಟ್ಟಿ , ಪತ್ರೊಡೆ , ಕಾಯಿಗಂಜಿ , ಮಂತುಳಿ ತುಪ್ಪ, ಮಾಂಬಳ , ಕಣಿಲೆ , ಅಳಂಬು , ಬಗೆಬಗೆಯ ಪೊಜ್ಜಿಗಳು (ಚಟ್ನಿ): ಇಂತಹ ವಿಶಿಷ್ಟ ಆಹಾರದ ಬಗೆಗಳು ಇವತ್ತು ಕೂಡಾ ನಮ್ಮ ಆಹಾರದ ಭಾಗವಾಗಿ ನಮ್ಮ ದೇಹ ಮತ್ತು ಮನಸ್ಸಿಗೆ ಸುಖವನ್ನು ಕೊಡಬೇಕು . 
ಗೌಡರ ವಸತಿ ವ್ಯವಸ್ಥೆಯ ಬಗ್ಗೆ ಇಲ್ಲಿ ಸಾಕಷ್ಟು ವಿವರಗಳಿವೆ . ಪರಂಪರಾಗತವಾದ ನಾಲ್ಕು ಸುತ್ತಿನ ಮನೆಗಳ ಚಿತ್ರಣವನ್ನು ಕೊಟ್ಟಿದ್ದಾರೆ . ಕರಾವಳಿಯ ಪರಂಪರೆಯ ವಸತಿಗಳಲ್ಲಿ ನಾಲ್ಕು ಸುತ್ತಿನ ಮನೆಗಳು ಮತ್ತು ಎದುರಿನ ವಿಶಾಲ ಚಾವಡಿಯ ರಚನೆ ವಿಶಿಷ್ಟವಾದುದು . ಅರಮನೆಯ ಸಂಕ್ಷಿಪ್ತ ರೂಪದ ಹಾಗೆ ಇರುವ ಇಂತಹ ರಚನೆಗಳಲ್ಲಿ ಭದ್ರತೆ ಮತ್ತು ಕಲೆಗಾರಿಕೆಯ ಅಂಶಗಳು ಮೇಳೈಸಿವೆ . ಜೊತೆಗೆ ಮಳೆಗಾಲದ ರಕ್ಷಣೆಯ ಉದ್ದೇಶವೂ ಇದೆ . ಇತ್ತೀಚಿಗೆ ಆಧುನಿಕ ಕಟ್ಟಡಗಳ ವಾಸ್ತುಶಿಲ್ಪಿಗಳು ಕರಾವಳಿಯ ಪರಂಪರೆಯ ಮನೆಗಳ ವಿನ್ಯಾಸವನ್ನು ಅಳವಡಿಸಲು ತೊಡಗಿದ್ದಾರೆ . ಆ ಕಟ್ಟಡಗಳಲ್ಲಿ ಸ್ಥಳಾವಕಾಶವನ್ನು  ವಿಭಜಿಸಿದ ಮತ್ತು ಬಳಸಿದ ಮಾದರಿಗಳು ಅಭ್ಯಾಸಯೋಗ್ಯವಾಗಿವೆ 
        ಕುಟುಂಬ ವ್ಯವಸ್ಥೆಯಲ್ಲಿ 'ಬಳಿಗಳು ' ಬೇರೆ ಬೇರೆ ಮೂಲಗಳಿಂದ ಬಂದು ಸಮುದಾಯಕ್ಕೆ ಸೇರಿಕೊಂಡ ಸೂಚನೆಯನ್ನು ಕೊಡುತ್ತವೆ . ಬಿಳಿಮಲೆಯವರು ಗೌಡ ಸಮುದಾಯದ ಹನ್ನೆರಡು ಬಳಿಗಳನ್ನು ಗುರುತಿಸಿ ಅವುಗಳ ವಿವರಣೆಯನ್ನು ಕೊಟ್ಟಿದ್ದಾರೆ . ಬಳಿಗಳನ್ನು ವಿವಾಹದ ಸಂದರ್ಭದಲ್ಲಿ  ಆದ್ಯತೆಯ ನೆಲೆಯಲ್ಲಿ ಪರಿಗಣಿಸುವ ಅಥವಾ ನಿರಾಕರಿಸುವ ಕ್ರಮಗಳನ್ನು ತಿಳಿಸಿದ್ದಾರೆ . ಒಂದು ಸಮುದಾಯವನ್ನು ಒಂದು 'ಕೂಡುಕಟ್ಟು ' ಎಂದು ಭಾವಿಸಿದರೆ , ಅದರ ಒಳಗೆ ಬರುವ 'ಬಳಿಗಳು ' ಆ ಕೂಡುಕಟ್ಟಿನ ಬಹುರೂಪಿ ಭಿನ್ನ ಮೂಲಗಳು ಆಗಿರುತ್ತವೆ ಎನ್ನುವುದು ನನ್ನ ಅಭಿಪ್ರಾಯ . ಕರಾವಳಿಯ ಇತರ ಸಮುದಾಯ /ಜಾತಿಗಳನ್ನೂ ಗಮನಿಸಿಕೊಂಡು ಈ ಮಾತನ್ನು ಹೇಳುತ್ತಿದ್ದೇನೆ . 
            ಬೇರೆ ಬೇರೆ ಮೂಲಗಳಿಂದ ಜನರು ಸೇರಿಕೊಂಡು ಒಂದು ಸಮುದಾಯ  /ಜಾತಿ ಆಗಿ ರೂಪುಗೊಂಡುದನ್ನು ಅವುಗಳ ಕುಲನಾಮಗಳ ಕತೆಗಳು ಕೂಡ ಹೇಳುತ್ತವೆ . ಬಳಿಗಳು ಭಿನ್ನ ಸ್ಥಳಗಳ ,ಭಿನ್ನ ಕಸುಬುಗಳ ಮತ್ತು ಭಿನ್ನ ಸಂಸ್ಕೃತಿಗಳ ಜೊತೆಗೆ ಸಂಬಂಧ ಹೊಂದಿರುತ್ತವೆ . ಬೇರೆ ಬೇರೆ ಕಾಲಘಟ್ಟಗಳಲ್ಲಿ ಅವು ಒಟ್ಟುಸೇರಿ , ಒಂದು ಘಟಕವಾಗಿ ಈಗ ನಾವು ಗುರುತಿಸುವ ಜಾತಿ /ಸಮುದಾಯ ಆಗುತ್ತವೆ . ನಾನು ಗಮನಿಸಿದಂತೆ ಕರಾವಳಿಯ ಬಹುತೇಕ ಜಾತಿ /ಸಮುದಾಯಗಳು ಭಿನ್ನ ಮೂಲಗಳಿಂದ ಒಟ್ಟಾದ ಸಮ್ಮಿಶ್ರ ಸಂಸ್ಕೃತಿಯವು .  . ಅವುಗಳಿಗೆಲ್ಲ ಒಂದೇ ಮೂಲ , ಶುದ್ಧರೂಪ ಎನ್ನುವುದು ಇರುವುದಿಲ್ಲ. ಈ ದೃಷ್ಟಿಯಿಂದ ಸಮುದಾಯಗಳ ಅಧ್ಯಯನದಲ್ಲಿ ಬಳಿಗಳು ಮತ್ತು ಕುಲನಾಮಗಳು ಮುಖ್ಯ ಆಕರಗಳಾಗುತ್ತವೆ .  ಗೌಡರಲ್ಲಿನ ಅನೇಕ ಬಳಿಗಳು ತುಳುಸಾಮಾಜದ ಬಂಟ , ಬಿಲ್ಲವ , ಮೊಗವೀರ ಸಮುದಾಯಗಳಲ್ಲಿ ಕೂಡ ಇವೆ .  ಬಂಟರಲ್ಲಿ ಇರುವ ಬಂಗರ ಬಳಿ , ಸಾಲಿಯ ಬಳಿ , ನಂದರ ಬಳಿ , ಗುಂಡರ ಬಳಿ , ಕಬರ ಬಳಿಗಳು ಸುಳ್ಯ ಗೌಡರಲ್ಲೂ ಕಾಣಿಸುತ್ತವೆ . .ಇಂತಹ ಬಳಿಗಳಿಗೆ  ಮನೆತನದ ಮೂಲ , ಕಸುಬಿನ ಮೂಲ , ಸ್ಥಳದ ಮೂಲ ಇತ್ಯಾದಿ ಸಂಬಂಧಗಳು ಇರುತ್ತವೆ .  ಹೀಗಾಗಿ ಸುಳ್ಯದ / ಪುತ್ತೂರಿನ ಗೌಡರ ಕೆಲವು ಬಳಿಗಳಾದರೂ ಇತರ ಸಮುದಾಯಗಳ ಸಂಬಂಧವನ್ನು ಹೊಂದಿರಬೇಕು . ಕರಾವಳಿಯ ಸಮುದಾಯಗಳ ಬಳಿಗಳ ಅಂತರ್ ಸಂಬಂಧದ ಅಧ್ಯಯನವು ಈಗ ನಾವು ಕಾಣುವ ಜಾತಿಗಳು ರೂಪುಗೊಂಡ ಸಮ್ಮಿಶ್ರ ಪ್ರಕ್ರಿಯೆಯ ಕಥನವನ್ನು ಬರೆಯಲು ದಾರಿ ಮಾಡಿಕೊಡಬಹುದು . 
ಗೌಡರ ಜೀವನಾವರ್ತನದ ಕ್ರಿಯೆಗಳನ್ನು ಬಿಳಿಮಲೆ ವಿವರಣಾತ್ಮಕವಾಗಿ ನಿರೂಪಿಸಿದ್ದಾರೆ . ಸಾಮಾನ್ಯವಾಗಿ ಈ ಆಚರಣೆಗಳು ಆಧುನಿಕ ಸಂದರ್ಭದಲ್ಲಿ ಎಲ್ಲ ಸಮುದಾಯಗಳಲ್ಲೂ ಸಹಜವಾಗಿ ಬದಲಾವಣೆ ಹೊಂದಿರುತ್ತವೆ . ಹುಟ್ಟಿನಿಂದ ತೊಡಗಿ  ಸಾವಿನವರೆಗಿನ ಬದುಕಿನ ಪಯಣದ ಸಂಕ್ರಮಣ ಕಾಲದ ಆಚರಣೆಗಳು ಪರಂಪರೆಯ ಕಾಲಘಟ್ಟದಲ್ಲಿ ಆತಂಕ ,ಅಚ್ಚರಿ ಮತ್ತು ಅನುಭವದ ಕಾಮನಬಿಲ್ಲು ಆಗಿರುತ್ತಿದ್ದುವು . ಇವತ್ತು ಅವುಗಳಲ್ಲಿ ಅಂತಹ ಯಾವ ಗುಣಗಳೂ ಇಲ್ಲ , ರೋಮಾಂಚನವೂ ಇಲ್ಲ. ಆದ್ದರಿಂದ ಇಂತಹ ಸಂಕ್ರಮಣ-ಕಾಮನಬಿಲ್ಲುಗಳನ್ನು ಇವತ್ತು ನಾವು ಅರ್ಥಮಾಡಿಕೊಳ್ಳುವುದು ಕೇವಲ ನಾಸ್ಟಾಲ್ಜಿಯಾ ಆಗಿ ಮಾತ್ರ ಅಲ್ಲ. ಅವುಗಳಲ್ಲಿ ಅಡಕವಾದ ಬಂಧುತ್ವವನ್ನು ಬೆಸೆಯುವ ನುಡಿಗಟ್ಟುಗಳನ್ನು ಮತ್ತು ಕ್ರಿಯೆಗಳನ್ನು ಅರ್ಥಮಾಡಿಕೊಳ್ಳಬೇಕು . ಬಾಣಂತಿಮದ್ದು,ವಿವಿಧ ಹಂತಗಳ  ಮದುವೆ ಹಾಡುಗಳು , ಕೊಲೆಮದುವೆ - ಇವು ಹುಟ್ಟು , ಬದುಕು ಮತ್ತು ಸಾವಿನ ಮೂರು ರೂಪಕಗಳು . ಬಾಣಂತಿಮದ್ದು ಮಗು ಹುಟ್ಟಿದ ಸಂದರ್ಭದ ಒಂದು ಔಷಧೀಯ ಆಹಾರ . ಮದುವೆಯ ಹಾಡುಗಳು ಎರಡು ಕುಟುಂಬಗಳ ಸೇರುವಿಕೆಯ ಮೂಲಕ ಬದುಕಿನ ದೀರ್ಘ ಪಯಣದ ಬೇರೆ ಬೇರೆ ಹಂತಗಳನ್ನು ಹಾಡು ಮತ್ತು ಆಚರಣೆಗಳ ಮೂಲಕ ಅಭಿನಯಿಸಲು ಅನುವು ಮಾಡಿಕೊಡುವ ಪ್ರಸಂಗಪಠ್ಯ . 'ಕೊಲೆಮದುವೆ ' ಸತ್ತ ಬಳಿಕವೂ ಬದುಕಿನ ಪಯಣ ಮುಂದುವರಿಯುತ್ತದೆ ಮಧ್ಯಂತರ ಜಗತ್ತಿನಲ್ಲಿ ಎನ್ನುವುದನ್ನು ಕುಟುಂಬದವರ ಪಾಲುಗೊಳ್ಳುವಿಕೆಯ ಮೂಲಕ ಪ್ರಸ್ತುತಪಡಿಸುವ ಆಚರಣಾ ಪಠ್ಯ . 
ಗೌಡ ಸಮುದಾಯದವರ ಜಾನಪದದಲ್ಲಿ ಹಾಡುಗಳು ,ಕತೆಗಳು , ಗಾದೆಗಳು , ಒಗಟುಗಳು ,ನಂಬಿಕೆಗಳು , ಬೈಗುಳಗಳು ಮೌಖಿಕ ಪರಂಪರೆಗೆ ಸೇರಿದವುಗಳ ವಿವರಣೆ ಇಲ್ಲಿ ದೊರೆಯುತ್ತದೆ . ಈ ಪ್ರಭೇದಗಳು ಎಲ್ಲ ಸಂಸ್ಕೃತಿಗಳಲ್ಲೂ ಸಾಮಾನ್ಯವಾಗಿ ಕಾಣಸಿಗುತ್ತವೆ .ಆದರೆ ಅವುಗಳ ಬಳಕೆಯ ಸಂದರ್ಭಗಳು ಸಂಸ್ಕೃತಿವಿಶಿಷ್ಟವಾಗಿರುತ್ತವೆ .  ಪ್ರತಿಯೊಂದು ಸಮುದಾಯದ ಸಾಂಸ್ಕೃತಿಕ ಅನನ್ಯತೆ ಹರಳುಗಟ್ಟಿರುವುದೇ ಇಂತಹ ಸಂಸ್ಕೃತಿ ವಿಶಿಷ್ಟ ಕ್ರಿಯಾತ್ಮಕತೆಯಲ್ಲಿ . ಗೌಡ ಕನ್ನಡ ಅಥವಾ ಅರೆಭಾಷೆ ಎಂದು ಕರೆಯುವ ಸುಳ್ಯ ಗೌಡರ ಆಡುಭಾಷೆಯೂ ಅದರ ನಿಜಶಕ್ತಿಯನ್ನು ಪ್ರಕಟಿಸುವುದು ಅದು ಮೌಖಿಕ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಭಾಷಿಕ-ಕ್ರಿಯಾತ್ಮಕ ಬಗೆಗಳ ಸಂಯೋಗದಲ್ಲಿ ಬಳಕೆಯಾಗುವ ವಿನ್ಯಾಸಗಳಲ್ಲಿ . ಅದು ಕೇವಲ ವಿವರಣಾತ್ಮಕ ಭಾಷಾವಿಜ್ಞಾನದ ಧ್ವನಿಮಾ ಆಕೃತಿಮಾ ವಾಕ್ಯರಚನೆಯ ವ್ಯಾಕರಣ ಸೂತ್ರಗಳಲ್ಲಿ ಅಲ್ಲ. ಇಲ್ಲಿನ ಜಾನಪದ ಸಾಮಗ್ರಿಯನ್ನು ಇನ್ನಷ್ಟು ವಿಸ್ತರಿಸಿ ಆನ್ವಯಿಕವಾಗಿ ಬಳಸಿಕೊಂಡು ಈ ಸಮುದಾಯದ ಆಶಯಗಳನ್ನು ಹೊಸಜನಾಂಗಕ್ಕೆ ಕೊಡಲು ಅವಕಾಶಗಳಿವೆ . 
ಸಿದ್ಧವೇಷದ ಬಗ್ಗೆ ಬಿಳಿಮಲೆ ಈಗಾಗಲೇ ಪ್ರತ್ಯೇಕ ಲೇಖನಗಳನ್ನು ಬರೆದಿದ್ದಾರೆ , ವಿವರವಾಗಿ ಚರ್ಚಿಸಿದ್ದಾರೆ . 'ಸಿದ್ಧರು' ಅಥವಾ ;ಪುರುಷರು' ಎನ್ನುವ ಧಾರ್ಮಿಕ ಪರಂಪರೆ ಅಘೋರಿಗಳ ಅಥವಾ ಅವಧೂತರ ಮಾದರಿಯದ್ದು . ಕರಾವಳಿಯಲ್ಲಿ 'ಪುರುಷರು ' 'ಜೋಗಿ ' ಇವರು ಮಧ್ಯಯುಗೀನ ಕಾಲದಲ್ಲಿ ವಲಸೆ ಬಂದ ಬಳಿಕ ಇಲ್ಲಿನ ಸ್ಥಳೀಯ ಆರಾಧನಾ ಪದ್ದತಿಯ ಮೇಲೆ ಪರಿಣಾಮವನ್ನು ಬೀರಿದರು. ಪುರುಷ ಭೂತದ ಉತ್ಪತ್ತಿ ಆಯಿತು . ಘಟ್ಟದಿಂದ ಪುರುಷರು ತುಳುನಾಡಿಗೆ ಬಂದಾಗ ಕೆಲವು ದೈವಗಳು ವಲಸೆ ಬಂದುವು . ತುಳುನಾಡಿನಲ್ಲಿ ' ಪುರುಷರು ' ಎನ್ನುವ ಸಮುದಾಯ ಕಾಣಿಸಿಕೊಂಡಿತು . ಆದ್ದರಿಂದಲೇ ಇಲ್ಲಿ ಧಾರ್ಮಿಕವಾಗಿ ಪ್ರಭಾವಶಾಲಿ ಆಗಿದ್ದ ವೈದಿಕ ಪರಂಪರೆಯ ಬ್ರಾಹ್ಮಣರನ್ನು ಮತ್ತು ದಾಸ ಪರಂಪರೆಯ ದಾಸಯ್ಯರನ್ನು ಹೊಡೆದು ಓಡಿಸುವ ಪ್ರಕ್ರಿಯೆಯ ಪಳೆಯುಳಿಕೆಯಾಗಿ ಆಚರಣಾತ್ಮಕವಾಗಿ ಸಿದ್ಧವೇಷ  ಉಳಿದುಕೊಂಡಿತು . 
              ಬಿಳಿಮಲೆ ಅವರು ೩೫ ವರ್ಷಗಳ ಹಿಂದೆ ಈ ಸಂಶೋಧನಾ ಪ್ರಬಂಧವನ್ನು ರಚಿಸುವ ಕಾಲಕ್ಕೆ ಕರ್ನಾಟಕದ ಬೇರೆ ಪ್ರದೇಶಗಳ ಗೌಡರು /ಒಕ್ಕಲಿಗರುಗಳ ಬಗ್ಗೆ ಹೆಚ್ಚು ಅಧ್ಯಯನ ನಡೆದಿರಲಿಲ್ಲ .ಆದ್ದರಿಂದ ಅವರ ಈ ಗ್ರಂಥದಲ್ಲಿ ತುಳು ಗೌಡರು , ಕೊಡಗಿನ ಗೌಡರು , ಮಲೆನಾಡಿನ ಒಕ್ಕಲಿಗರು , ಬಯಲು ಸೀಮೆಯ ಒಕ್ಕಲಿಗರು ಮುಂತಾದ ಸಂವಾದಿ ಸಮುದಾಯಗಳ ಬಗ್ಗೆ ಪ್ರಾಥಮಿಕ ಮಾಹಿತಿ ಇದೆ . ಆದರೆ ಈಗ ಈ ಎಲ್ಲಾ ಪ್ರಾದೇಶಿಕ ಗೌಡ /ಒಕ್ಕಲಿಗ ಸಮುದಾಯಗಳ ಬಗ್ಗೆ ಸಾಕಷ್ಟುಪ್ರಮಾಣದಲ್ಲಿ ಸಂಶೋಧನೆಗಳು ನಡೆದು ಪಿ ಎಚ್ ಡಿ ಅಧ್ಯಯನದ ಗ್ರಂಥಗಳು ಪ್ರಕಟವಾಗಿವೆ .ಆದ್ದರಿಂದ ಸುಳ್ಯ ಪರಿಸರದ ಗೌಡ ಸಮುದಾಯವನ್ನು ಕೇಂದ್ರದಲ್ಲಿ ಇಟ್ಟುಕೊಂಡು ಇತರ ಪ್ರಾದೇಶಿಕ ಸಂವಾದಿ ಸಮುದಾಯಗಳ ಜೊತೆಗೆ ತೌಲನಿಕವಾಗಿ ಪ್ರತ್ಯೇಕ ಅಧ್ಯಯನ ನಡೆಸಲು ಅವಕಾಶವಿದೆ . 
                   ವಯಸ್ಸಾಗುತ್ತಾ ಬಂದಹಾಗೆಲ್ಲ ನನಗೆ ನನ್ನ ಹಳ್ಳಿಯ ಅಗ್ರಾಳದ ಹಳೆಯ ಮರಗಳು ನೆನಪಾಗುತ್ತವೆ . ಚಿಕ್ಕ ಸಸಿಯೊಂದು ಬೆಳೆಯುತ್ತಾ ಬೆಳೆಯುತ್ತಾ ಮರವಾಗಿ ರೆಂಬೆಕೊಂಬೆಗಳನ್ನು ಬಿಟ್ಟು ಎತ್ತರಕ್ಕೆ ಮತ್ತು ವಿಸ್ತಾರಕ್ಕೆ ಚಾಚಿಕೊಂಡು ವರ್ಷಗಳು ಸಂದರೂ ವೃದ್ಧಾಪ್ಯವನ್ನು ತೋರಿಸಿಕೊಳ್ಳದೆ ಹಣ್ಣೆಲೆಗಳು ಬೀಳುತ್ತಿದ್ದರೂ  ಇರುವಷ್ಟು  ಹಸುರೆಲೆಗಳನ್ನು ಚಂದವಾಗಿ ತೋರಿಸುತ್ತಾ ಎಲ್ಲರ ಗಮನ ಸೆಳೆಯುವ ಪರಿಯೇ ಸೊಗಸು . ನಮ್ಮೆಲ್ಲರ ಬದುಕೂ ಹಾಗೆಯೇ . ಸಸಿಯಾಗಿ ಮೊಳೆತಾಗ ಇದ್ದ ನಮ್ಮ ಬೇರು ತಾಯಿಬೇರು . ಅದು ಕೊನೆಯ ವರೆಗೂ ನಮ್ಮನ್ನು ಗಟ್ಟಿಯಾಗಿ ನಿಲ್ಲಿಸಿ ಆತ್ಮವಿಶ್ವಾಸವನ್ನು ನಿರಂತರವಾಗಿ ಕೊಡುತ್ತಾ ಬರುತ್ತದೆ . ನಾವು ಬೆಳೆಯುತ್ತಾ ಬಂದಹಾಗೆಲ್ಲ ಬೇರೆ ಬೇರೆ ಪರಿಸರಗಳಲ್ಲಿ  ಹೊಸ ಹೊಸ ಬೇರುಗಳನ್ನು ಭೂಮಿಯೊಳಗೆ ಇಳಿಸಿ ಹೊಸ ಆಹಾರವನ್ನು ಹೀರಿಕೊಂಡು ನಾವು ಎತ್ತರಕ್ಕೆ ಚಲಿಸುತ್ತಿರುವಾಗಲೇ ನಮ್ಮ ಸುತ್ತಲೂ ರೆಂಬೆ ಕೊಂಬೆಗಳನ್ನು ಚಾಚಿ ಹೂ ಕಾಯಿ ಹಣ್ಣು ಬಿಟ್ಟು ಎಲ್ಲರ ಜೊತೆಗೆ ಬೆರೆಯುತ್ತಿರುತ್ತೇವೆ . ಹೊರಗೆ ಕಾಣುವ ನಮ್ಮ ಸಮೃದ್ಧಿಯಷ್ಟೇ ಮಣ್ಣಿನ ಒಳಗೆ ಒರುವ ನಮ್ಮ ಬೇರುಗಳು ಕೂಡಾ ಮುಖ್ಯ .ಅವುಗಳಲ್ಲೂ ನಮ್ಮ ತಾಯಿ ಬೇರು ; ಅದರ ಆಧಾರದ ಧೈರ್ಯದಲ್ಲೇ ನಾವು ಮೊಳೆಕೆ ಒಡೆದು ಸಸಿಯಾಗಿ ಈ ನೆಲದಲ್ಲಿ ಬೇರೂರಿದ್ದು . ನಾವು ಹುಟ್ಟಿದ ಹಳ್ಳಿ , ಅಲ್ಲಿ ನಾವು ಪಡೆದ ಕಲಿತ ಸಣ್ಣ ಸಣ್ಣ ವಿದ್ಯೆಗಳ ಚೂರುಗಳು - ಇವೆಲ್ಲ ದೊರಕಿದ ಕಾರಣವೇ ನಾವೆಲ್ಲ ಈಗಿನ ಸ್ಥಿತಿಯ ಮರವಾಗಿ ಬೆಳೆದು ನಿಂತದ್ದು . 
         ಬಿಳಿಮಲೆಯ ಪುರುಷೋತ್ತಮ ಅವರು ಪಂಜ , ಪುತ್ತೂರು , ಮದ್ರಾಸು , ಸುಳ್ಯ , ಮಂಗಳೂರು , ಹಂಪಿ , ದೆಹಲಿಗಳಲ್ಲಿ ತಮ್ಮ ಬೇರುಗಳನ್ನು ಬಲವಾಗಿ ಊರುತ್ತಾ , ಹೋದ ಕಡೆಗಳಲ್ಲೆಲ್ಲಾ  ಚಿಗುರು ಹೂವು ಕಾಯಿ ಹಣ್ಣು ಬಿಡುತ್ತಾ ಒಂದು ಸಾರ್ಥಕ ಮರವಾಗಿ ಬೆಳೆಯುತ್ತಾ   ಬಂದಿದ್ದಾರೆ ; ದೇಶ ವಿದೇಶಗಳಲ್ಲಿ ಸಂಚರಿಸಿದಾಗಲೂ ತಾನು  ಸಸಿಯಾಗಿ ಮರವಾಗಿ ಬೆಳೆದ ಊರುಗಳ ಮಣ್ಣಿನ ವಾಸನೆಯ ಹೂವು ಹಣ್ಣುಗಳನ್ನು ಚೆಲ್ಲಿದ್ದಾರೆ . ೩೫ ವರ್ಷಗಳ ಹಿಂದೆ ಕಂಡು ಅರಸಿದ ತಾಯಿಬೇರಿನ ಸಮಗ್ರ ದರ್ಶನವನ್ನು ನಮ್ಮ ಮುಂದೆ ಇರಿಸಿದ್ದಾರೆ . ಪಯಸ್ವಿನಿ ನದಿಯ ನೀರು ನಿರಂತರ ಹರಿಯುತ್ತಲೇ ಇದೆ . ಅದು ನಿಚ್ಚಮ್  ಪೊಸತು . 

-ಬಿ . ಎ . ವಿವೇಕ ರೈ, ಮಂಗಳೂರು 

Related Books