‘ಚೆನ್ನದಾಸರ್ ಸಮುದಾಯ’ ಲೇಖಕ ಡಾ. ಮಲ್ಲಿಕಾರ್ಜುನ ಬಿ ಮಾನ್ಪಡೆ ಅವರ ಸಂಶೋಧನಾತ್ಮಕ ಕೃತಿ. ಪರಿಶಿಷ್ಟ ಜಾತಿಗೆ ಸೇರಿರುವ ಚೆನ್ನದಾಸರ್ ಸಮುದಾಯವು ದಾಸ, ದಾಸಯ್ಯ, ದಾಸರು, ದಾಸರ್, ದಾಸರಿ, ದಾಸರ, ದಂಗದಾಸ, ದೊಂಬಿದಾಸ, ಚಕ್ರವಾದ್ಯದಾಸರ, ದಂಡಗಿದಾಸರ, ಜಂಬೂದಾಸರ, ಹರಿದಾಸರ, ಶಂಖದಾಸ, ಮಾಲದಾಸರಿ, ದಶವಂತರು, ಆಟದ ದಾಸರು, ಹೊಲೆಯದಾಸರ ಮುಂತಾದ ಹೆಸರುಗಳಿಂದ ಕರೆಯಿಸಿಕೊಳ್ಳುತ್ತಾ ಬಂದಿದೆ.
ಇಂದಿಗೂ ಈ ಸಮುದಾಯ ಒಂದು ಕಡೆ ನೆಲೆಯೂರಿ ನಿಲ್ಲಲು ಸಾಧ್ಯವಾಗದೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯವಾಗಿಲ್ಲ. ಚೆನ್ನದಾಸರ್ ಸಮುದಾಯ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಮಾತ್ರವಲ್ಲದೆ ಗುಜರಾತ್ ರಾಜ್ಯದಲ್ಲಿಯೂ ಕಂಡುಬರುತ್ತದೆ. ಈ ಸಮುದಾಯವರ ಸಾಂಪ್ರದಾಯಿಕ ವೃತ್ತಿ ಭಿಕ್ಷೆ ಬೇಡುವುದಾಗಿದೆ. ಬಹುಮಟ್ಟಿಗೆ ಮುಂದಿನ ಭವಿಷ್ಯದ ಬಗ್ಗೆ ಕನಸು ಕಾಣದೆ ಅದಕ್ಕಾಗಿ ಸಂಪತ್ತನ್ನು ಕೂಡಿಡದೆ ಅಂದಿನ ಜೀವನಕ್ಕಾಗಿ ಹೆಚ್ಚು ಶ್ರಮವಹಿಸುವ ಅಲ್ಪತೃಪ್ತ ಜನರಿವರು. ತುತ್ತಿನ ಚೀಲ ತುಂಬಿಸಿಕೊಳ್ಳಲು ಅನೇಕ ರೀತಿಯ ಉದ್ಯೋಗಗಳನ್ನು ಅನುಸರಿಸುತ್ತಾ ವೃತ್ತಿ ನೈಪುಣ್ಯತೆಯನ್ನು ಮೆರೆಯುತ್ತಾ ಚೆನ್ನದಾಸರ್ ಸಮುದಾಯ ಪಾರಂಪರಿಕ ಜ್ಞಾನವನ್ನು ಮುಂದುವರಿಸಿಕೊಂಡು ಬಂದಿದೆ.
ಇಂಥ ಅಪೂರ್ವ ಜ್ಞಾನವಾಹಿನಿಗಳ ಮೂಲ ಜನಕರೆನಿಸಿದ ಚೆನ್ನದಾಸರ್ ಸಮುದಾಯದ ಕುರಿತು ಅಪಾರವಾದ ಕ್ಷೇತ್ರಕಾರ್ಯದ ಮೂಲಕ ಮಾಹಿತಿಯನ್ನು ಸಂಗ್ರಹಿಸಿ ಅವರ ಸಮಾಜೋ-ಆರ್ಥಿಕ, ಶೈಕ್ಷಣಿಕ ಸ್ಥಿಗತಿಗಳ ಜೊತೆಗೆ ಚೆನ್ನದಾಸರ ಸಮುದಾಯದ ಅನನ್ಯತೆಯನ್ನು ಗುರುತಿಸುವ ಕೆಲಸ ಮಾಡಿದ್ದಾರೆ. ಇಂತಹ ಜಾತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅವಶ್ಯಕವಾದ ಸಮಾಜೋ-ಆರ್ಥಿಕ ಹಾಗೂ ಶೈಕ್ಷಣಿಕ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಆಲೋಚಿಸಿದ ಸಮಾಜಕಲ್ಯಾಣ ಇಲಾಖೆಯು ಇದೀಗ ಈ ಜಾತಿಗಳ ಸಮರ್ಪಕ ಅಧ್ಯಯನದ ವರದಿ ತಯಾರಿಸಲು ಮುಂದೆ ಬಂದ ಫಲವೇ ಡಾ.ಬಿ ಆರ್ ಅಂಬೇಡ್ಕರ್ ಸಂಶೋಧನಾ ಸಂಸ್ಥೆಯಿಂದ ನಡೆದ ಈ ಅಧ್ಯಯನ ಕೃತಿ.
©2024 Book Brahma Private Limited.