ಭೂವಿಜ್ಞಾನಿ, ಲೇಖಕ ಟಿ.ಆರ್. ಅನಂತರಾಮು ಅವರ ಕೃತಿ ‘ಬೆಳೆಯುತ್ತಿರುವ ಹಿಮಾಲಯ’. ಹಿಮಾಲಯ ಪರ್ವತ ಶ್ರೇಣಿ ಎಂದೊಡನೆ ಮೈ ರೋಮಾಂಚನವಾಗುತ್ತದೆ. ಅದು ಜೀವನದಿಗಳ ಉಗಮಸ್ಥಾನ. ಸಿಂಧೂ-ಗಂಗಾನದಿ ಬಯಲಿನಲ್ಲಿ ನಾಗರಿಕತೆಯೇ ಕೊನರಿದೆ. ಅವುಗಳ ಮೆಕ್ಕಲು ಕೋಟಿ ಕೋಟಿ ಜನರಿಗೆ ಜೀವನಾಧಾರವಾದ ಕೃಷಿಯನ್ನು ಪೋಷಿಸಿದೆ. ಅದೊಂದು ನಮಗೆ ಭದ್ರಕೋಟೆ, ಶ್ರೀರಕ್ಷೆ. ಸಸ್ಯ ವಿಜ್ಞಾನಿಗಳಿಗೆ ಹಿಮಾಲಯವೇ ನಂದನವನ. ಎವರೆಸ್ಟ್ ಶಿಖರವೇರಿದ ತೇನ್ಸಿಂಗ್ ನಾರ್ವೆ ಮತ್ತು ಎಡ್ಮಂಡ್ ಹಿಲೆರಿ ಮಾನವ ಸಾಹಸದ ಪ್ರತೀಕವಾದರು. ಅದೇ ಹಿಮಲಯವನ್ನು ಭೂವಿಜ್ಞಾನಿಗಳು ಅಧ್ಯಯನ ಮಾಡಿ ಅದು ತುಂಬ ಕಿರಿಯ ಪ್ರಾಯದ ಪರ್ವತಮಾಲೆ ಎನ್ನುತ್ತಾರೆ.
ಆರೂವರೆ ಕೋಟಿ ವರ್ಷಗಳ ಹಿಂದೆ ಈಗ ಇರುವ ಹಿಮಾಲಯದ ಜಾಗ ಸಾಗರದ ಪಾಲಾಗಿತ್ತು. ನಿಧಾನವಾಗಿ ಸಾಗರ ಮೇಲೆದ್ದು ಐದು ಹಂತಗಳಲ್ಲಿ ಹಿಮಾಲಯ ಶ್ರೇಣಿ ಉತ್ಥಾನವಾಗಿ ಈಗಿನ ಸ್ಥಿತಿ ತಲಪಿತು. ಇದೊಂದು ಭೂಚರಿತ್ರೆಯಲ್ಲಿ ರೋಚಕ ಅಧ್ಯಾಯ. ಇಡೀ ಹಿಮಾಲಯವನ್ನು ಯಾವ ಭಾಗದಲ್ಲಿ ನೋಡಿದರೂ ಅಲ್ಲಿ ಸಾಗರ ತಳದಲ್ಲಿ ಸಂಚಯಿಸಿದ ಶಿಲೆಗಳೇ ಈಗಲೂ ಕಾಣುತ್ತವೆ. ಆದರೆ ಹಿಮಾಲಯವನ್ನು ಕೊಚ್ಚಿ ನದಿಗಳು ಕಲ್ಲುಮಣ್ಣನ್ನು ಸಾಗರಕ್ಕೊಯ್ಯುತ್ತಿವೆ. ಗಂಗಾ ನದಿಯೊಂದೇ ದಿನವೊಂದಕ್ಕೆ ಹಿಮಾಲಯದಿಂದ ಒಂಬತ್ತು ಲಕ್ಷ ಟನ್ ಹೂಳನ್ನು ಸಾಗರಕ್ಕೆ ಸೇರಿಸುತ್ತಿದೆ. ಆದರೂ ಹಿಮಾಲಯ ಸೆಟೆದು ನಿಂತಿದೆ, ಅಷ್ಟೇ ಅಲ್ಲ, ವರ್ಷಕ್ಕೆ ಆರು ಸೆಂಟಿ ಮೀಟರಿನಷ್ಟು ಬೆಳೆಯುತ್ತಿದೆ. ಇದರ ಹಿಂದಿರುವ ಕಾರಣಗಳನ್ನು ಈ ಪುಸ್ತಕದ ಪ್ರತಿ ಅಧ್ಯಾಯವೂ ವಿವರಿಸುತ್ತದೆ. ಓದುಗರನ್ನು ಭೂಚರಿತ್ರೆಯ ಹಳೆಯ ಅಧ್ಯಾಯಗಳಿಗೆ ಕರೆದೊಯ್ಯುತ್ತದೆ.
©2024 Book Brahma Private Limited.