‘ಸಂಶೋಧನ ಸಂಪದ’ ಕ್ಷಮಾ ವಿ.ಭಾನುಪ್ರಕಾಶ್ ಅವರ ಲೇಖನಗಳ ಸಂಗ್ರಹವಾಗಿದೆ. ದಿನನಿತ್ಯದ ಬದುಕಿನಲ್ಲಿ ವಿಜ್ಞಾನಿಗಳ, ಅವರ ಸಂಶೋಧನೆಗಳ ಪಾತ್ರ ಹಿರಿದು. ಎದ್ದಾಗಿನಿಂದ ಮಲಗುವವರೆಗೂ ಪುಟ್ಟ ಕೂಸಿನಿಂದ ವಯೋವೃದ್ಧರವರೆಗೂ ಎಲ್ಲರಿಗೂ ಬೇಕಾದ ವಸ್ತುಗಳ ಆವಿಷ್ಕಾರ, ಬಳಕೆ, ಸುಧಾರಣಿ, ಅನ್ವೇಷಣೆ, ತಯಾರಿ - ಹೀಗೆ ಎಲ್ಲೆಲ್ಲೂ ವಿಜ್ಞಾನವೇ, ಆಹಾರ, ಆರೋಗ್ಯ - ಎಲ್ಲದರಲ್ಲೂ ವಿಜ್ಞಾನಿಗಳ ಕೊಡುಗೆ ಹಾಸುಹೊಕ್ಕು. ಅಣುವಿನಿಂದ ಅಂತರಿಕ್ಷದವರೆಗೂ ಇರುವ ಅಗಣಿತ ವಸ್ತು-ವಿಷಯಗಳ ಬಗ್ಗೆ, ಜಗತ್ತಿನ ಮೂಲೆಮೂಲೆಯ ಪ್ರಯೋಗಾಲಯಗಳಲ್ಲಿ ಕುಳಿತು, ಎಲೆಮರೆಯ ಕಾಜುಗಳಂತೆ ತಮ್ಮ ಅಧ್ಯಯನಗಳಲ್ಲಿ, ಪ್ರಯೋಗಗಳಲ್ಲಿ ಮುಳುಗಿ ಹೋಗಿರುವ ವಿಜ್ಞಾನಿಗಳ ಬೆಲೆ, ನಿಜಕ್ಕೂ ಜಗತ್ತಿಗೆ ತಿಳಿದಿಲ್ಲ ಎನಿಸದೆ ಇರದು, ಅವರ ಕೆಲವು ಸಂಕೀರ್ಣ ಸಂಶೋಧನೆಗಳ ಸರಳೀಕೃತ ಪುಟ್ಟ ಸಾರಾಂಶಗಳೆನ್ನಬಹುದಾದ ಈ ಬರಹಗಳು, ಕನ್ನಡದ ಅನೇಕ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ ಮತ್ತು ವಿಜ್ಞಾನಿಗಳ ಹಾಗೂ ಜನಸಾಮಾನ್ಯರ ನಡುವೆ ವಿಜ್ಞಾನ ಸಂವಹನದ ಕೊಂಡಿಗಳಾಗಿವೆ. ಇವುಗಳನ್ನೋದಿದ ಓದುಗರು, ಮೆಚ್ಚಿ ಇವುಗಳ ಬಗ್ಗೆ ಹೊಗಳಲು ಕರೆ ಮಾಡಿದಾಗ, ಮತ್ತಷ್ಟು ತಿಳಿಯಲು ಆಸಕ್ತಿ ತೋರಿದಾಗ, ಗೊಂದಲಗಳನ್ನು ಬಗೆಹರಿಸಿಕೊಳ್ಳೋಕೆ ಪತ್ರ ಬರೆದಾಗ ದೊರೆತ ಸಾರ್ಥಕತೆ, ವಿಜ್ಞಾನ ಸಂವಹನವನ್ನು ಮತ್ತಷ್ಟು ಜವಾಬ್ದಾರಿಯುತವಾಗಿ ನಿರ್ವಹಿಸುವಂತೆ ಮಾಡಿದೆ. ಅಂತಹ ಬರಹಗಳ ಗುಚ್ಚವಿದು.
©2024 Book Brahma Private Limited.