ಬಣ್ಣಗಳು ಸೃಷ್ಟಿಸುವ ಮಾಯಾಜಾಲದ ಬಗ್ಗೆ ವೈಜ್ಞಾನಿಕವಾಗಿ ವಿವರಣೆ ನೀಡಿರುವ ಕೃತಿ ‘ವರ್ಣ ಮಾಯಾಜಾಲ’ . ಎನ್. ಎಸ್. ಲೀಲಾ ಅವರು ಬರೆದಿದ್ದು, ಶಿವಮೊಗ್ಗದ ಕರ್ನಾಟಕ ಸಂಘದಿಂದ ‘ಹಸೂಡಿ ವೆಂಕಟಶಾಸ್ತ್ರಿ ವಿಜ್ಞಾನ ಸಾಹಿತ್ಯ ಪ್ರಶಸ್ತಿ’ 2011 ಹಾಗೂ ಭಾರತೀಯ ಪ್ರಕಾಶಕರ ಒಕ್ಕೂಟದ ‘ಅತ್ಯುತ್ತಮ ಮುದ್ರಣ ವಿನ್ಯಾಸ ಪ್ರಶಸ್ತಿ ( 2012) ಲಭಿಸಿದೆ. ಬೆಳಕಿನ ಕಿರಣಗಳು ಹೇಗೆ ಏಳು ವರ್ಣಗಳಾಗಿ ವಿಭಜನೆಗೊಳ್ಳುತ್ತವೆ ಮತ್ತು ತನ್ನೊಳಗೆ ಹುದುಗಿಸಿಟ್ಟುಕೊಂಡಿದ್ದ ವಿವಿಧ ಸೂಕ್ಷ್ಮ ಕಿರಣಗಳ ರಹಸ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿವರಿಸಿದ ಕೃತಿ ಇದು. ವರ್ಣಮಯ ಮಾಯಾಜಾಲದ ವಿವರಣೆಗೆ ಕಾರಣೀಕರ್ತರಾದ ವಿವಿಧ ವಿಜ್ಞಾನಿಗಳ ಜಿಜ್ಞಾಸೆಯೂ ಇಲ್ಲಿದೆ.
(ಹೊಸತು, ಮಾರ್ಚ್ 2012, ಪುಸ್ತಕದ ಪರಿಚಯ)
ಬಣ್ಣವಿಲ್ಲದೆ ಯಾವ ವಸ್ತುವೂ ಇಲ್ಲ. ಎಲ್ಲಿ ನೋಡಿದರೂ ಬಣ್ಣವೇ. ಈ ಬಣ್ಣಗಳೆಲ್ಲಿಂದ? ಅಚ್ಚ ಬಿಳುಪಾದ ಸೂರ್ಯನಿಂದ ಬರುವ ಬೆಳಕಿನ ಕಿರಣ ವಿಭಜನೆಯಾದಾಗ ಕಾಮನಬಿಲ್ಲಿನ ಏಳು ಬಣ್ಣಗಳು ಕಾಣಿಸುತ್ತವೆ. ಅವೆಲ್ಲ ಸಮ್ಮಿಶ್ರವಾದಾಗ ಮತ್ತೆ ಬಿಳಿಯ ಬಣ್ಣ! ಅದ್ಭುತವಲ್ಲವೆ ? ಪ್ರಕೃತಿಯಲ್ಲಿ ನೂರಾರು ಬಣ್ಣಗಳಿದ್ದು ಹೂವು - ಎಲೆ - ಹಣ್ಣು - ಪ್ರಾಣಿ - ಪಕ್ಷಿಗಳು ಮುಂತಾಗಿ ಎಲ್ಲವೂ ವರ್ಣಮಯ ಜಗತ್ತೇ, ಬಟ್ಟೆ, ಆಟಿಕೆ ಮುಂತಾದ ಕೈಗಾರಿಕೆಗಳು ಬಣ್ಣವನ್ನು ಮರೆತರೆ, ಪುಸ್ತಕೋದ್ಯಮವು ಪುಟಗಳನ್ನು ಬಣ್ಣದಲ್ಲಿ ಮುದ್ರಿಸದಿದ್ದರೆ ಗ್ರಾಹಕರನ್ನು ತಲುಪಲು ವಿಫಲರಾಗಬಹುದು. ವರ್ಣಸಂಯೋಜನೆಯು ವೈಜ್ಞಾನಿಕ ತಳಹದಿಯ ಮೇಲೆ ಆಧಾರಿತವಾಗಿದೆ. ಕಣ್ಣುಗಳ ಮೂಲಕ ಮಿದುಳು ಗ್ರಹಿಸಿ ನಮಗೆ ಬಣ್ಣಗಳ ಲೋಕದ ಅರಿವಾಗುತ್ತದೆ. ಇಂಥ ಅತ್ಯವಶ್ಯವಾದ ಸುಂದರ ಮಾಯಾಲೋಕವನ್ನು ತಿಳಿಯಲು ನೀವು ಈ ಪುಸ್ತಕವನ್ನು ಓದಲೇಬೇಕು. ಪುಟ ತೆರೆದಲ್ಲೆಲ್ಲ ಕಣ್ಮನ ತಣಿಸುವ ವರ್ಣಚಿತ್ರಗಳಿಂದ ಶೋಭಿಸುವ ಇದು ಬಣ್ಣಗಳ ಬಗ್ಗೆ ವಿವರವಾದ ಮಾಹಿತಿ ಒದಗಿಸುತ್ತದೆ. ಸಚಿತ್ರ ವಿವರಣೆ ನೀಡಿ ನಮ್ಮನ್ನು ಸ್ವಪ್ನಲೋಕಕ್ಕೆ ಕರೆದೊಯ್ಯುವ ಈ ಕೃತಿ ರಚಿಸಿಕೊಟ್ಟವರು ಡಾ|| ಎನ್. ಎಸ್. ಲೀಲಾ, ಬೆಂಗಳೂರಿನ ಎಮ್.ಇ.ಎಸ್. ಕಾಲೇಜಿನಲ್ಲಿ ಪ್ರಾಧ್ಯಾಪಕಿ, ಪ್ರಾಣಿಶಾಸ್ತ್ರ ವಿಭಾಗದಲ್ಲಿ ಮುಖ್ಯಸ್ಥೆಯಾಗಿ ನಿವೃತ್ತರು. ಇವರಿಗೆ 'ಅನುಪಮ ವಿಜ್ಞಾನ ಶಿಕ್ಷಕಿ' ಮತ್ತು 'ಸದೋದಿತ' ಪ್ರಶಸ್ತಿಗಳು ಸಂದಿವೆ. ರಾಷ್ಟ್ರೀಯ - ಅಂತರರಾಷ್ಟ್ರೀಯ ವಿಜ್ಞಾನ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.
©2024 Book Brahma Private Limited.