ಹಿರಿಯ ಪತ್ರಕರ್ತ ಡಿ.ವಿ. ರಾಜಶೇಖರ ಅವರು ತಮ್ಮ ವೃತ್ತಿ ಬದುಕಿನ ಅನುಭವಗಳ ಹಿನ್ನೆಲೆಯಲ್ಲಿ ಸುದ್ದಿ-ವರದಿ ಹೀಗೆ ಇಡೀ ಪತ್ರಿಕೋದ್ಯಮ ಕುರಿತ ಪಕ್ಷಿನೋಟದ ಬರಹಗಳನ್ನು ಸಂಕಲಿಸಲಾಗಿದೆ. ಕೃತಿಗೆ ಬೆನ್ನುಡಿ ಬರೆದ ಔಟ್ ಲುಕ್ ರಾಷ್ಟ್ರೀಯ ವಾರಪತ್ರಿಕೆಯ ಹಿರಿಯ ಸಹ ಸಂಪಾದಕ ಸುಗತ ಶ್ರೀನಿವಾಸ ‘ಪತ್ರಿಕೋದ್ಯಮಕ್ಕೆ ಸೇರಲು ತುದಿಗಾಲಲ್ಲಿ ನಿಂತಿರುವ ಹಾಗೂ ಈಗಾಗಲೇ ಅದರಲ್ಲಿ ತಳವೂರಿರುವ ಎಲ್ಲರೂ ಅಗತ್ಯವಾಗಿ ಓದಲೇಬೇಕಾದ ಕೃತಿ ಇದು. ಒಳಗೆ ಬರಲು ಕಾದಿರುವವರಿಗೆ ಇದು ಭ್ರಮೆಯ ನಿವಾರಣೆಯನ್ನು, ಅಪೇಕ್ಷಿತ ಮನಸ್ಥಿತಿಯ ಚೌಕಟ್ಟುಗಳನ್ನು, ಒಳಗೆ ಇರುವವರಿಗೆ ಎಚ್ಚರವನ್ನು ಹಾಗೂ ತಾವು ಈಗಾಗಲೇ ತುಳಿದಿರುವ ಹಾದಿಯನ್ನು ಅವಲೋಕಿಸಲು ಅವಕಾಶವನ್ನು ಮಾಡಿಕೊಡುತ್ತದೆ. ಸಾಮಾನ್ಯ ಓದುಗ ಹಾಗೂ ಕುತೂಹಲಿಗಳು ಪ್ರತಿದಿನ ಸ್ವೀಕರಿಸುವ ಅಕ್ಷರ ರಾಶಿಯ ಹಿಂದಿನ ಸೂಕ್ಷ್ಮತೆಗಳು, ಸವಾಲುಗಳು, ಹತಾಶೆಗಳು ಹಾಗೂ ಆದರ್ಶಗಳನ್ನು ಪರಿಚಯ ಮಾಡದೇ ಇರುವುದಿಲ್ಲ. ಇವು ಕೇವಲ ಪಾಠ ಮಾಡುವ, ಮಾರ್ಗಗಳನ್ನು ಸೂಚಿಸುವ, ಸರಿ-ತಪ್ಪುಗಳ ಬಗ್ಗೆ ಖಡಾಖಂಡಿತವಾಗಿ ಮಾತನಾಡುವ ಲೇಖನಗಳಲ್ಲ. ಮೂರು ದಶಕಗಳಿಗೂ ಹೆಚ್ಚು ಕಾಲ,ಕಳಂಕರಹಿತ ವೃತ್ತಿ ಬದುಕು ನಡೆಸಿದವರ ಅನುಭವ ಜರಡಿಯಿಂದ ಹೊರಬಂದ ನಿರಂಹಕಾರ ಮತ್ತು ಪರಾನುಭೂತಿಯಿಂದ ಕೂಡಿದ ಅಪರೂಪದ ಬರವಣಿಗೆ. ಪತ್ರಿಕೋದ್ಯಮವನ್ನು ಬರೀ ಒಂದು ಉದ್ಯಮವಾಗಿ ಕಾಣುವ, ಅಧಿಕಾರ ಕೇಂದ್ರಗಳಿಗೆ ಹತ್ತಿರವಾಗಲು ಕಾಲುದಾರಿಗಳನ್ನು ಹುಡುಕುವ ಮತ್ತು ಹೊಟ್ಟೆಪಾಡಿನ ದಿಕ್ಕಾಗಿ ಕಾಣುವ ಮಂದಿಗೆ ಈ ವ್ಯಕ್ತಿಯ ನೈಜ ಉದ್ದೇಶವನ್ನು ತಿಳಿಸಿ ಹೇಳುತ್ತವೆ. ಪತ್ರಿಕೋದ್ಯಮದ ಗೆಲುವು ಇರುವುದು ಓದುಗರ ಪರವಾದಾಗಲಲ್ಲ. ಜನಪರವಾದಾಗ ಮತ್ತು ಧ್ವನಿ ಇಲ್ಲದವರ ಧ್ವನಿಯಾದಾಗ ಮಾತ್ರ ಎಂಬುದನ್ನು ಪರೋಕ್ಷವಾಗಿ ಪ್ರತಿಪಾದಿಸುತ್ತವೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.