‘ನಕ್ಸಲೀಯರ ನಾಡಿನಲ್ಲಿ ರವಿ ಬೆಳಗೆರೆ’ ರವಿ ಬೆಳಗೆರೆ ಅವರ ಸಂದರ್ಶನದ ಕೃತಿಯಾಗಿದೆ. ನನ್ನ ನಾಲ್ಕು ದಶಕಗಳ ಆತ್ಮೀಯ ಮಿತ್ರ ರವಿ ಬೆಳೆಗರೆ ಇಪ್ಪತ್ತು ವರ್ಷಗಳ ಹಿಂದೆ ಆಂಧ್ರ ಪ್ರದೇಶದ ನಕ್ಸಲ್ ಸಂಘಟನೆಯ ಪ್ರಮುಖ ನಾಯಕರಾಗಿದ್ದ ಹಾಗೂ ಪ್ರಜಾ ಸಮರಂ ಅಥವಾ ಪೀಪಲ್ಸ್ ವಾರ್ ಗ್ರೂಪ್ ಸಂಘಟನೆಯನ್ನು ಹುಟ್ಟುಹಾಕಿದ್ದ ಕೊಂಡಪಲ್ಲಿ ಸೀತಾರಾಮಯ್ಯನವರನ್ನು ಅವರ ವೃದ್ಧಾಪ್ಯದ ದಿನಗಳಲ್ಲಿ ಬೆನ್ನತ್ತಿ ಮಾಡಿದ ಅನನ್ಯವಾದ ಸಂದರ್ಶನ ಇದಾಗಿದೆ. ಕೇವಲ ನೂರು ಪುಟಗಳಿರುವ ‘ನಕ್ಸಲೀಯರ ನಾಡಿನಲ್ಲಿ ರವಿ ಬೆಳೆಗೆರೆ’ ಎಂಬ ಈ ಕೃತಿಯು ಮೇಲುನೋಟಕ್ಕೆ ಒಂದು ರೀತಿಯಲ್ಲಿ ಅಪೂರ್ಣ ಕೃತಿ ಎನಿಸಬಹುದು. ಆದರೆ, ಈ ಕೃತಿಯಲ್ಲಿ ಏಕಕಾಲಕ್ಕೆ ಕೊಂಡಪಲ್ಲಿ ಸೀತಾರಾಮಯ್ಯ, ಅವರ ಪತ್ನಿ ಕೋಟೇಶ್ವರಮ್ಮ ಹಾಗೂ ಅರಣ್ಯದ ಭೂಗತ ಬದುಕಿನಲ್ಲಿ ಸಂಗಾತಿಯಾಗಿದ್ದ ಅನಸೂಯಮ್ಮ ಮತ್ತು ರಾಯಲಸೀಮೆಯ ಪ್ರದೇಶದಲ್ಲಿ ನಕ್ಸಲ್ ಹೋರಾಟವನ್ನು ಹುಟ್ಟುಹಾಕಿದ ಕೊಂಡಪಲ್ಲಿಯವರ ಸಹಚರ ಬಂಡಯ್ಯ ಮಾಸ್ತರು ಇವರುಗಳ ಸಂದರ್ಶನದ ಜೊತೆಗೆ ಅವರುಗಳು ತಮ್ಮ ಬದುಕಿನ ಕಥನವನ್ನು ಹಾಗೂ ಹೋರಾಟದ ಏಳು ಬೀಳಿನ ಕಥನವನ್ನು ಅವರೆಲ್ಲರೂ ಸ್ವತಃ ಹೇಳಿಕೊಳ್ಳುವುದರ ಮೂಲಕ ಆಂಧ್ರಪ್ರದೇಶದ ನಕ್ಸಲ್ ಹೋರಾಟದ ಇತಿಹಾಸಕ್ಕೆ ಅಧಿಕೃತವಾಗಿ ಸ್ಪಷ್ಟತೆ ದೊರಕಿರುವುದು ಈ ಕೃತಿಯ ವಿಶೇಷವಾಗಿದೆ.
©2024 Book Brahma Private Limited.