ಸುದ್ದಿ ಮನೆ ಕಥೆ ವಿಶ್ವೇಶ್ವರ ಭಟ್ಟ ಅವರ ಕೃತಿಯಾಗಿದೆ. ಕದನ, ಅಪಘಾತ, ದುರಂತ, ಚಂಡಮಾರುತ, ಪ್ರವಾಹ, ಸುನಾಮಿ, ಹವಾಮಾನ ವೈಪರೀತ್ಯ, ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ, ಭ್ರಷ್ಟಾಚಾರ, ಹಗರಣ, ಕರ್ಮಕಾಂಡ, ಪ್ರಣಯ, ವಿಚ್ಛೇದನ, ಆರೋಪ-ಪ್ರತ್ಯಾರೋಪ, ಚುನಾವಣೆ, ಬೆದರಿಕೆ, ಕನಲಿಕೆ, ಟೀಕೆ, ಘೋಷಣೆ, ಪ್ರಕಟಣೆ, ಸಾವು-ನೋವು, ಜನನ-ಮರಣಗಳೆಲ್ಲಾ ಎಲ್ಲಿಯೇ ನಡೆಯಲಿ, ಅವೆಲ್ಲವುಗಳಿಗೂ ಸಾಕ್ಷಿ ಸುದ್ದಿಮನೆಯೇ, ಸುದ್ದಿಮನೆಯ ಕದ ತಟ್ಟದೇ ಯಾವ ಸುದ್ದಿಯೂ ಓದುಗನ ಒಳಮನೆ, ಒಳಮನಗಳನ್ನು ಪ್ರವೇಶಿಸಲು ಸಾಧ್ಯವಿಲ್ಲ. ಜಗತ್ತಿನ ಎಲ್ಲಾ ವಿದ್ಯಮಾನಗಳೂ ಸುದ್ದಿಮನೆಯ ಜಗುಲಿಯಲ್ಲಿ ಅಂಗಾತ ನಗ್ನ. ಅದು ಜಗತ್ತಿನ ಎಲ್ಲಾ ಆಗು-ಹೋಗುಗಳಿಗೆ ರಂಗಸ್ಥಳ, ವರ್ಷದಲ್ಲಿ ಮೂರ್ನಾಲ್ಕು ದಿನಗಳನ್ನು ಬಿಟ್ಟರೆ, ಸುದ್ದಿಮನೆಯಲ್ಲಿ ದೀಪ ಆರಿದ್ದೇ ಇಲ್ಲ. ಅದು ಮಲಗಿದ್ದನ್ನು ಕಂಡವರಿಲ್ಲ. ಪ್ರತಿ ಸುದ್ದಿಮನೆಯೂ ನಿತ್ಯ ಪ್ರಸೂತಿಗೃಹವಿದ್ದಂತೆ. ದಿನವೂ ಸುದ್ದಿಯ ಗರ್ಭ ತಳೆದು, ಅದೇ ದಿನ ಹೆರಲೇಬೇಕಾದ ಅನಿವಾರ್ಯತೆ. ಇಲ್ಲೇ ಕುಳಿತು ಇಡೀ ವಿಶ್ವದ ಸುದ್ದಿಯನ್ನೆಲ್ಲ ತನ್ನ ಒಳಮನೆಯೊಳಗೆ ಸುರುವಿಕೊಳ್ಳುವ ಸಾಮರ್ಥ್ಯವಿರುವುದು ಸುದ್ದಿಮನೆಗೊಂದೇ. ಇಬ್ಬರು ಪತ್ರಕರ್ತರು ಎಂದೂ ಪರಸ್ಪರರ ಪ್ರಪಂಚದಲ್ಲೊಂದು ಸುತ್ತಾಟ! ಅಭಿಪ್ರಾಯವನ್ನು ಒಪ್ಪದಿದ್ದರೂ, ಅವರಿಬ್ಬರೂ ಸೇರಿ ಮೂರನೆಯವನನ್ನು ತಿರಸ್ಕರಿಸಿದರೂ, ಒಂದು ತಂಡವಾಗಿ ಒಟ್ಟಾಗಿ ಕೆಲಸ ಮಾಡಲು ಸಾಧ್ಯವಾಗುವುದಾದರೆ ಅದು ಸುದ್ದಿಮನೆಯಲ್ಲಿ ಮಾತ್ರ. ಈ ಕೃತಿ ಇಂಥ ಅದ್ಭುತ, ಅನೂಹ್ಯ ಪ್ರಪಂಚದಲೊಂದು ಸುತ್ತಾಟವಾಗಿದೆ ಎಂದು ಲೇಖಕರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.