ಹಸುರು ಹೊನ್ನು

Author : ಬಿ.ಜಿ.ಎಲ್. ಸ್ವಾಮಿ

Pages 412

₹ 295.00




Year of Publication: 2011
Published by: ವಸಂತ ಪ್ರಕಾಶನ
Address: ಜಯನಗರ, ಮೈಸೂರು-570014

Synopsys

’ಹಸುರು ಹೊನ್ನು’ ಕೃತಿಯ ಮೂಲಕ ಲೇಖಕರು ತಮ್ಮ ಬದುಕಿನೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಒಡನಾಡಿಗಳಾಗಿ ಬೆಳೆದು ಬಂದಿರುವ ಗಿಡಮರಗಳ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಇದೊಂದು ಪ್ರವಾಸ ಕಥನ. ಸಸ್ಯಶಾಸ್ತ್ರ ಪ್ರಾಧ್ಯಾಪಕರಾದ ಸ್ವಾಮಿಯವರು ತಮ್ಮಲ್ಲಿ ವ್ಯಾಸಂಗ ಮಾಡುತ್ತಿದ್ದ ಸಸ್ಯಶಾಸ್ತ್ರ ವಿದ್ಯಾರ್ಥಿಗಳ ಶಿಕ್ಷಣದ ಅಗತ್ಯಗಳಲ್ಲೊಂದನ್ನು ಪೂರೈಸುವುದಕ್ಕಾಗಿ ಅವರನ್ನು ಕರೆದುಕೊಂಡು ದೂರದೂರದ ಅರಣ್ಯಗಳಿಗೆ ಹೋಗಿಬಂದುದರ ಕಥೆ ಇದು. ದೂರ ಪ್ರವಾಸಕ್ಕಾಗಿ ಮಾಡಿಕೊಳ್ಳುವ ಸಿದ್ಧತೆಗಳು, ಪ್ರಯಾಣದ ಕಷ್ಟಸುಖಗಳು, ಮಾರ್ಗಮಧ್ಯ, ಅನಿರೀಕ್ಷಿತವಾಗಿ ಜರುಗುವ ಆಕಸ್ಮಿಕ ಘಟನೆಗಳು, ದಾರಿಯುದ್ದಕ್ಕೂ ಕಂಡು ಆನಂದಿಸಿದ ಪ್ರಕೃತಿಯ ಸೊಬಗು, ಸಂಗಡಿಗರಾದ ವಿದ್ಯಾರ್ಥಿಗಳ ಹಾಗೂ ದಾರಿಯಲ್ಲಿ ಸಂಧಿಸಿದ ಆಗಂತುಕರ ಓರೆಕೋರೆಗಳು - ಇದೆಲ್ಲವನ್ನೂ ರಸವತ್ತಾಗಿ ಮತ್ತು ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಮನುಷ್ಯ ಸ್ವಭಾವದ ನಿಕಟ ಪರಿಚಯವೂ ಮಾನವ ಸಹಜ ದೌರ್ಬಲ್ಯಗಳ ಬಗ್ಗೆ ಸಹಾನುಭೂತಿಯೂ ಅವರ ಬರವಣಿಗೆಯಲ್ಲಿ ಸ್ಪಷ್ಟವಾಗಿದೆ.

ಇದರ 400 ಪುಟಗಳಲ್ಲಿ ನೂರಾರು ಸಸ್ಯಗಳು ನಮಗೆ ಪರಿಚಿತವಾಗುತ್ತವೆ. ಚಿರಪರಿಚಿತವೆಂದು ನಾವು ಭಾವಿಸಿರುವ ಹಲಸಿನ ಮರ, ಅರಳಿ ಮರ, ಮೆಣಸಿನಕಾಯಿ ಗಿಡಗಳು ಇದುವರೆಗೂ ನಮಗೆ ಅಪರಿಚಿತವಾಗಿದ್ದುವೆಂಬುದು ನಮ್ಮ ಅರಿವಿಗೆ ಬರುತ್ತದೆ. ಸಸ್ಯಗಳ ವರ್ಗಿಕರಣ, ಅದರಲ್ಲಿ ನಿರ್ದಿಷ್ಟ ಸಸ್ಯದ ಸ್ಥಾನ, ಅದನ್ನು ಗುರುತಿಸಲು ನೆರವಾಗುವ ಅದರ ಬಾಹ್ಯ ಲಕ್ಷಣಗಳು, ಅದರ ಜೀವನ ಕ್ರಮ, ಅದು ಮನೆ ಮಾಡಿಕೊಂಡಿರುವ ಭೂಪ್ರದೇಶ, ತಿಂಡಿ ತೀರ್ಥಗಳಲ್ಲಿ ವೈದ್ಯದಲ್ಲಿ ಮತ್ತು ದೇಶದ ಆರ್ಥಿಕ ಜೀವನದಲ್ಲಿ ಅವರ ಪಾತ್ರ ಎಲ್ಲವನ್ನೂ ಸರಳವಾದ ಭಾಷೆಯಲ್ಲಿ ವಿವರಿಸಿದ್ದಾರೆ. ವಿಷಯ ಮನದಟ್ಟಾಗಲು ಅಗತ್ಯವೆನಿಸುವ ಚಿತ್ರಗಳನ್ನು ಲೇಖಕರೇ ಒದಗಿಸಿದ್ದಾರೆ.

About the Author

ಬಿ.ಜಿ.ಎಲ್. ಸ್ವಾಮಿ
(05 February 1916 - 02 November 1980)

ಬಿ. ಜಿ. ಎಲ್. ಸ್ವಾಮಿ ಅಂತರ್‌ರಾಷ್ಟ್ರೀಯ ಮಟ್ಟದ ಸಸ್ಯವಿಜ್ಞಾನಿ, ಹಿರಿಯ ವಿದ್ವಾಂಸ, ಸಾಹಿತಿ, ಚಿಂತನಶೀಲ ಬರಹಗಾರ ಡಾ. ಬಿ.ಜಿ.ಎಲ್‌. ಸ್ವಾಮಿ.  `ಶ್ರೇಷ್ಠ ವಿಜ್ಞಾನಿ' ಎಂದು ಹೆಸರಾಗಿದ್ದ ಖ್ಯಾತ ಸಂಶೋಧಕ ಸ್ವಾಮಿ ಅವರ ಪೂರ್ಣ ಹೆಸರು ’ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣಸ್ವಾಮಿ’. ಕನ್ನಡದ ಹಿರಿಯ ಸಾಹಿತಿ ಡಿವಿಜಿಯವರ ಪುತ್ರ. 1916ರ ಫೆಬ್ರುವರಿ ಐದರಂದು ಜನಿಸಿದ ಅವರು ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡರು. ತಂದೆಯ ಗುಂಡಪ್ಪ ಹಾಗೂ ಅವರ ಗ್ರಂಥ ಭಂಡಾರದಿಂದ ಪ್ರತಿಭಾನ್ವಿತರಾದ ವ್ಯಕ್ತಿ. ಪ್ರಾಥಮಿಕದಿಂದ ಪದವಿಯವರೆಗೆ ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ ಅವರು ಸೆಂಟ್ರಲ್ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ವಿದ್ಯಾರ್ಥಿ ಆಗಿರುವಾಗ ಕರ್ನಾಟಕ ಸಂಘದ ಕಾರೈದರ್ಶಿ ...

READ MORE

Conversation

Awards & Recognitions

Reviews

ಹಸುರು ಹೊನ್ನು

ಡಾ. ಸ್ವಾಮಿಯವರು ತಮ್ಮ ಪುಸ್ತಕಕ್ಕೆ ಕೊಟ್ಟಿರುವ ಹೆಸರು ಅವರ ಆಂತರ್ಯಕ್ಕೆ ಕನ್ನಡಿ ಹಿಡಿದಂತಿದೆ. ನಿಸರ್ಗದತ್ತವಾದ ಸಸ್ಯಸಂಪತ್ತು ಅವರ ಭಾಗಕ್ಕೆ 'ಹೊನ್ನು'. ಗಿಡಮರಗಳ ಬಗೆಗೆ ಅವರಿಗಿರುವ ಈ ಪ್ರೇಮವನ್ನು ಪುಸ್ತಕದ ಒಂದೊಂದು ಪುಟದಲ್ಲಿ ಕಾಣಬಹುದು. "ಕಾಲಾನುಕಾಲದಿಂದ ನಮ್ಮ ಬದುಕಿನೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಒಡನಾಡಿಗಳಾಗಿ ಬೆಳೆದು ಬಂದಿರುವ ಗಿಡಮರಗಳ ಪರಿಚಯ ಮಾಡಿಕೊಡುವುದು' ಪುಸ್ತಕದ ಉದ್ದೇಶ. ಅದನ್ನು ಈಡೇರಿಸಲು ಅವರು ಅನುಸರಿಸಿರುವ ಮಾರ್ಗ ಮಾತ್ರ ಅನನ್ಯವಾದುದು.

ಮೇಲುನೋಟಕ್ಕೆ ಇದೊಂದು ಪ್ರವಾಸ ಕಥನ. ಮೇಲುನೋಟಕ್ಕೆ ಎಂದೆನೇ ? ತಪ್ಪು, ಇದು ನಿಜವಾಗಿ ಪ್ರವಾಸ ಕಥನವೇ : ಸಸ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ. ಸ್ವಾಮಿಯವರು ತಮ್ಮಲ್ಲಿ ವ್ಯಾಸಂಗ ಮಾಡುತ್ತಿದ್ದ ಸಸ್ಯಶಾಸ್ತ್ರ ವಿದ್ಯಾರ್ಥಿಗಳ ಶಿಕ್ಷಣದ ಅಗತ್ಯಗಳಲ್ಲೊಂದನ್ನು ಪೂರೈಸುವುದಕ್ಕಾಗಿ ಅವರನ್ನು ಕರೆದುಕೊಂಡು ದೂರದೂರದ ಅರಣ್ಯಗಳಿಗೆ ಹೋಗಿಬಂದುದರ ಕಥೆ ಇದು. ದೂರ ಪ್ರವಾಸಕ್ಕಾಗಿ ಮಾಡಿಕೊಳ್ಳುವ ಸಿದ್ಧತೆಗಳು, ಪ್ರಯಾಣದ ಕಷ್ಟಸುಖಗಳು, ಮಾರ್ಗಮಧ್ಯ, ಅನಿರೀಕ್ಷಿತವಾಗಿ ಜರುಗುವ ಆಕಸ್ಮಿಕ ಘಟನೆಗಳು, ದಾರಿಯುದ್ದಕ್ಕೂ ಕಂಡು ಆನಂದಿಸಿದ ಪ್ರಕೃತಿಯ ಸೊಬಗು, ಸಂಗಡಿಗರಾದ ವಿದ್ಯಾರ್ಥಿಗಳ ಹಾಗೂ ದಾರಿಯಲ್ಲಿ ಸಂಧಿಸಿದ ಆಗಂತುಕರ ಓರೆಕೋರೆಗಳು - ಇದೆಲ್ಲವನ್ನೂ ಅತ್ಯಂತ ರಸವತ್ತಾಗಿ ಮತ್ತು ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಮನುಷ್ಯ ಸ್ವಭಾವದ ನಿಕಟ ಪರಿಚಯವೂ ಮಾನವ ಸಹಜ ದೌರ್ಬಲ್ಯಗಳ ಬಗ್ಗೆ ಸಹಾನುಭೂತಿಯೂ ಅವರ ಬರವಣಿಗೆಯಲ್ಲಿ ಸುಸ್ಪಷ್ಟವಾಗಿದೆ.

ಆದರೆ, ಪ್ರವಾಸವನ್ನು ಕೈಗೊಂಡ ಉದ್ದೇಶ ಸಸ್ಯ ಸಂಗ್ರಹಣವಷ್ಟೆ. ನಮಗೆ ಗಿಡಮರಗಳ ಪರಿಚಯ ಮಾಡಿಕೊಡಲು ಆ ಸಂದರ್ಭಗಳು ಅವರ ನೆರವಿಗೆ ಬರುತ್ತವೆ. ಹೀಗಾಗಿ ಇದು ಸುಂದರ ಪ್ರವಾಸ ಕಥನವೂ ಹೌದು, ಅಮೂಲ್ಯ ಜನಪ್ರಿಯ ವಿಜ್ಞಾನವೂ ಹೌದು.

ಇದರ 400 ಪುಟಗಳಲ್ಲಿ ನೂರಾರು ಸಸ್ಯಗಳು ನಮಗೆ ಪರಿಚಿತವಾಗುತ್ತವೆ. ಚಿರಪರಿಚಿತವೆಂದು ನಾವು ಭಾವಿಸಿರುವ ಹಲಸಿನ ಮರ, ಅರಳಿ ಮರ, ಮೆಣಸಿನಕಾಯಿ ಗಿಡಗಳು ಇದುವರೆಗೂ ನಮಗೆ ಅಪರಿಚಿತವಾಗಿದ್ದುವೆಂಬುದು ನಮ್ಮ ಅರಿವಿಗೆ ಬರುತ್ತದೆ. ಸಸ್ಯಗಳ ವರ್ಗಿಕರಣ, ಅದರಲ್ಲಿ ನಿರ್ದಿಷ್ಟ ಸಸ್ಯದ ಸ್ಥಾನ, ಅದನ್ನು ಗುರುತಿಸಲು ನೆರವಾಗುವ ಅದರ ಬಾಹ್ಯ ಲಕ್ಷಣಗಳು, ಅದರ ಜೀವನ ಕ್ರಮ, ಅದು ಮನೆ ಮಾಡಿಕೊಂಡಿರುವ ಭೂಪ್ರದೇಶ, ತಿಂಡಿ ತೀರ್ಥಗಳಲ್ಲಿ ವೈದ್ಯದಲ್ಲಿ ಮತ್ತು ದೇಶದ ಆರ್ಥಿಕ ಜೀವನದಲ್ಲಿ ಅವರ ಪಾತ್ರ ಎಲ್ಲವನ್ನೂ ಸರಳವಾದ ಭಾಷೆಯಲ್ಲಿ ವಿವರಿಸಿದ್ದಾರೆ. ವಿಷಯ ಮನದಟ್ಟಾಗಲು ಅಗತ್ಯವೆನಿಸುವ ಚಿತ್ರಗಳನ್ನು ಲೇಖಕರೇ ಒದಗಿಸಿದ್ದಾರೆ.

ನುರಿತ ಯಾವ ಸಸ್ಯವಿಜ್ಞಾನಿಯೇ ಆಗಲಿ, ಮನಸ್ಸು ಮಾಡಿದರೆ ಈ ತಿಳಿವಳಿಕೆಯನ್ನು ನಮಗೆ ನೀಡಬಲ್ಲ- ಮನಸ್ಸು ಮಾಡಿದರೆ. ಆದರೆ ಡಾ. ಸ್ವಾಮಿಯವರು ಮಾತ್ರ ನೀಡಬಲ್ಲ ಮಾಹಿತಿ ಬೇರೆ ಇದೆ. ಅದರಿಂದಲೂ ನಾವು ವಂಚಿತರಾಗಿಲ್ಲ. ಪ್ರಾಚೀನ ಕಾಲದಿಂದ ಹಿಡಿದು ಇತ್ತೀಚಿನವರೆಗಿನ ಸಂಸ್ಕೃತ, ಕನ್ನಡ ಮತ್ತು ತಮಿಳು ಸಾಹಿತ್ಯಗಳಲ್ಲಿ ಆ ಸಸ್ಯದ ಉಲ್ಲೇಖ ಎಲ್ಲೆಲ್ಲಿ ಬರುತ್ತದೆ, ಪೌರಾಣಿಕ ಕಥೆಗಳಲ್ಲಿ, ಪರಂಪರಾನುಗತವಾಗಿ ಬಂದಿರುವ ನಮ್ಮ ಜನಜೀವನದಲ್ಲಿ ಅದರ ಪಾತ್ರವೇನು ಎಂಬೆಲ್ಲ ವಿಷಯಗಳನ್ನೂ ಸುಲಲಿತವಾಗಿ ಹೇಳಿಕೊಳ್ಳುತ್ತ ಸಾಗುತ್ತದೆ, ಅವರ ಕಥನ. ಮೇಲಾಗಿ ಪೌರಾಣಿಕ ಕಥೆಗಳಿಂದ ಮತ್ತು ಕಾಲ್ಪನಿಕ ಕಥೆಗಳಿಂದ ಡಾ. ಸ್ವಾಮಿಯವರ ಐತಿಹಾಸಿಕ ಪ್ರಜ್ಞೆಗೆ ಕುಂದುಂಟಾಗಿಲ್ಲ. ಸಾಹಿತ್ಯಕೃತಿಗಳಲ್ಲಿ ಬರುವ ಉಲ್ಲೇಖಗಳ ಆಧಾರದ ಮೇಲೆ ಆ ಸಸ್ಯದ ಇತಿಹಾಸವೂ ಅವರ ಲೇಖನಿಯಿಂದ ಮೂಡುತ್ತದೆ. ಆ ಸಸ್ಯದ ಮೂಲ ತವರು ಯಾವುದು, ಎಂದು ಮತ್ತು ಯಾವ ಸಂದರ್ಭದಲ್ಲಿ ಅದು ನಮ್ಮ ನಾಡಿಗೆ ವಲಸೆ ಬಂದಿತು, ಇಂದು ಅದರ ನೆಲೆ ಯಾವುದು, ಈ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಾರೆ. ಪುಸ್ತಕ ಮುಗಿಸುವ ವೇಳೆಗೆ ರಸಾನುಭವದೊಂದಿಗೆ ನಮ್ಮ ಅರಿವೂ ಶ್ರೀಮಂತವಾಗಿರುತ್ತದೆ.  ಡಾ. ಸ್ವಾಮಿಯವರ ಬರವಣಿಗೆಯ ಇನ್ನೊಂದು ಮುಖವಿದೆ: ಅದರ ಹಾಸ್ಯ ಪ್ರವೃತ್ತಿ, ಹಾಸ್ಯಪ್ರಧಾನವಾದ ಅವರ ಕೃತಿಗಳಲ್ಲಿ ಹೇಗೋ ಹಾಗೆ ಇಲ್ಲಿಯೂ ಆ ಹಾಸ್ಯ ಪ್ರವೃತ್ತಿಯ ದೌರ್ಬಲ್ಯ ಎದ್ದುಕಾಣುತ್ತದೆ: ಸ್ವಲ್ಪ ಅತಿ ಎನಿಸುವ ಉತ್ಪ್ರೇಕ್ಷೆ, ನವುರುತನದ ಆಭಾವ. ಅವರ ವ್ಯಂಗ್ಯ ಚಿತ್ರಗಳಲ್ಲಿಯೂ ಈ ಲಕ್ಷಣ ಸ್ಪಷ್ಟ. ಈ ಪುಸ್ತಕದ ಮಟ್ಟಿಗೆ ಹೇಳಬಹುದಾದರೆ ಅವರ ಬರವಣಿಗೆ ನವುರಾದ ಹಾಸ್ಯವನ್ನು ಮೈಗೂಡಿಸಿಕೊಂಡಿದ್ದಿದ್ದರೆ ಆಗ ಬಹುದಾಗಿದ್ದ ಲಾಭ ಈಗ ಇಲ್ಲವಾಗಿದೆಯೇ ವಿನಾ ಈ ನ್ಯೂನತೆಯಿಂದ

ಪುಸ್ತಕದ ಬೆಲೆಗೆ ನಷ್ಟವೇನೂ ಆಗಿಲ್ಲ ಎಂದರೆ ಅದು ಉಪಚಾರದ ಮಾತೇನೂ ಅಲ್ಲ.

-ಜೆ ಆರ್ ಲಕ್ಷ್ಮಣರಾವ್

ಹಸುರು-ಹೊನ್ನು (ಸಸ್ಯ ಪರಿಚಯ) 

ಮೊದಲನೆ ಆವೃತ್ತಿ 1976 

ಕಾವ್ಯಾಲಯ ಜಯನಗರ ಮೈಸೂರು 570014

ಡೆಮ್ಮಿ ಅಷ್ಟ 418 ಪುಟಗಳು  ಬೆಲೆ ರೂ. 36-00 45-00 

ಕೃಪೆ: ಗ್ರಂಥಲೋಕ, ಜನೆವರಿ 1981

 

Related Books