‘ಜೀವಜಗತ್ತಿನ ಕೌತುಕಗಳು- ವಿನೋದ ವಿಸ್ಮಯ’ ನವಕರ್ನಾಟಕ ಪ್ರಕಾಶನದ ಜೀವಜಗತ್ತಿನ ಕೌತುಕಗಳು ಸರಣಿಯಲ್ಲಿ ಪ್ರಕಟವಾದ ಕೃತಿ. ಈ ಕೃತಿಯನ್ನು ಪ್ರಾಣಿಶಾಸ್ತ್ರಜ್ಞೆ, ಲೇಖಕಿ ಲೀಲಾ ಎನ್.ಎಸ್ ಅವರು ರಚಿಸಿದ್ದಾರೆ. ಜೀವಜಗತ್ತಿನ ಕುರಿತಾಗಿಯೇ ಹಲವು ಕೃತಿಗಳನ್ನು ರಚಿಸಿರುವ ಲೀಲಾ ಅವರು ಪ್ರಾಣಿ ಪ್ರಪಂಚದಲ್ಲಿ ವಿನೋದಕ್ಕಾಗಿ ನಡೆಯುವ ವಿಸ್ಮಯಕಾರಿ ಚಲನೆಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ.
(ಹೊಸತು, ನವೆಂಬರ್ 2014, ಪುಸ್ತಕದ ಪರಿಚಯ)
ನಮ್ಮದು ಜೀವಂತ ಭೂಮಿ. ಇಲ್ಲಿನ ಜೀವವೈವಿಧ್ಯ ಅಸಂಖ್ಯ ಲೋಕದಲ್ಲಿನ ವಿಸ್ಮಯಗಳೂ ಅಪಾರ. ಈ ಭೂಮಿಯ ಮೇಲೆ, ನೆಲದೊಳಗಡೆ, ಆಕಾಶಗಾಮಿಗಳಾಗಿ ಮರಗಳನ್ನಾಶ್ರಯಿಸಿ, ಗಾಳಿಯೊಂದಿಗೆ ತೇಲುವ- ಹೀಗೆ ಜೀವಕೋಟಿಗಳು ನಮ್ಮಂತೆಯೇ ಬದುಕಲು ಇಚ್ಛಿಸುತ್ತವೆ. ಕೆಲವು ದೈತ್ಯಜೀವಿಗಳು, ಇನ್ನು ಕೆಲವು ಸೂಕ್ಷ್ಮದರ್ಶಕಗಳಲ್ಲಿ ಮಾತ್ರ ಕಾಣುವಷ್ಟು ಅಣು ಆಕಾರದವು. ಜೀವಜಾಲ ಪೂರ್ಣಗೊಳ್ಳಲು ಇವುಗಳ ಅಸ್ತಿತ್ವ ಬೇಕೇ ಬೇಕು. ಪರಿಸರ ಸಮತೋಲನ ಸಾಧಿಸಲು ಎಲ್ಲ ಜೀವಿಗಳ ಅವಶ್ಯಕತೆ ಇದೆ. ಮನುಷ್ಯನಿಗೆ ಕೆಲವು ಉಪಕಾರಿ. ಆತನೂ ಸಹ ಇವುಗಳನ್ನು ಪಳಗಿಸಿ ತನ್ನ ಸ್ವಾರ್ಥಕ್ಕೆ ಉಪಯೋಗಿಸಿಕೊಂಡಿದ್ದಾನೆ. ಕೆಲವನ್ನು ಮನರಂಜನೆಗೆ ಬಳಸಿಕೊಂಡಿದ್ದಾನೆ. ಈ ಕೃತಿಯಲ್ಲಿ ಇಂತಹ ಹಲವು ಪ್ರಾಣಿ-ಪಕ್ಷಿಗಳ ಪರಿಚಯ, ಅವು ತೋರುವ ವೈವಿಧ್ಯಮಯ ಗುಣವಿಶೇಷಗಳು, ಅವುಗಳ ಆಟೋಟಗಳು ವರ್ಣಿಸಲ್ಪಟ್ಟಿವೆ. ಮೈನವಿರೇಳಿಸುವ ಗೂಳಿ ಕಾಳಗದಂಥ ಅಪಾಯಕಾರಿ ಆಟಗಳೂ ಬೆರಗು ಹುಟ್ಟಿಸುತ್ತವೆ. ಸಾಹಸ ಮತ್ತು ಹೋರಾಟ ಜೀವಿಗಳ ಅವಿಭಾಜ್ಯ ಅಂಗ. ಆದರೆ ಮನುಷ್ಯ ತಾನೊಬ್ಬನೇ ಬದುಕಬೇಕೆಂಬ ಸ್ವಾರ್ಥಭಾವನೆಯಿಂದ ಉಳಿದ ಜೀವಜಂತುಗಳ ವಿನಾಶಕ್ಕೆ ಕಾರಣನಾಗಿರುವುದು ಅಕ್ಷಮ್ಯವೆಂಬ ವಿಚಾರವೂ ಇಲ್ಲಿ ಪ್ರಸ್ತಾಪಿತವಾಗಿದೆ. ನಾವು ಪಾಣಿಗಳಿಂದ ಹಲವು ಪಾಠಗಳನ್ನು ಕಲಿಯಬೇಕಾದ ಅಗತ್ಯವಿಂದು ಹೆಚ್ಚಾಗಿದೆ. ಜಗತ್ತಿನ ವಿನೋದ-ವಿಸ್ಮಯಗಳನ್ನಿಲ್ಲಿ ತೆರೆದಿಡಲಾಗಿದೆ.
©2024 Book Brahma Private Limited.