ಪ್ರತಿಯೊಬ್ಬರೂ ತಮ್ಮ ಮೂಲ ಹಳ್ಳಿಯೊಂದಿಗೆ ಭಾವನಾತ್ಮಕವಾಗಿ ಸ್ಪಂದಿಸುತ್ತಾರೆ. ಅಲ್ಲಿ ಕಳೆದ ಬಾಲ್ಯ, ಊರಿನ ಪರಿಸರ ಎಲ್ಲವೂ ಭಾವದ ಗೂಡಿನೊಳಗೆ ಬೆಚ್ಚನೆಯ ಹಾಗೂ ಹಿತವಾದ ಸ್ಪರ್ಶ ನೀಡುತ್ತವೆ. ಊರುಗಳು ಮನುಷ್ಯನ ಸೃಷ್ಟಿ ಎಂದರೂ ಪ್ರಜ್ಞಾಪೂರ್ವಕವಾಗಿಯೇ ಆ ಪ್ರದೇಶದ ಬಗ್ಗೆ ವ್ಯಕ್ತಿಯು ಅಭಿಮಾನ ಬೆಳೆಸಿಕೊಳ್ಳುತ್ತಾನೆ. ಒಂದೇ ಕಾಲಕ್ಕೆ ಎಲ್ಲ ಊರುಗಳು ಹುಟ್ಟಿಲ್ಲ. ಪ್ರತಿ ಊರಿನ ಹುಟ್ಟು ಹಿಂದೆ ಇತಿಹಾಸವೇ ಆಡಗಿರುತ್ತದೆ. ಕಾಡು ಊರಾಗುವ, ಊರು ಪಟ್ಟಣವಾಗುವ, ಪಟ್ಟಣ ನಗರವಾಗುವ ಪರಿ ಕುತೂಹಲಕಾರಿ ಸಂಗತಿ ಮಾತ್ರವಲ್ಲ; ಇತಿಹಾಸದ ಕೊಂಡಿಯೊಂದಿಗೆ ಬೆಸೆದಿರುತ್ತದೆ. ಕೃಷಿ, ಮಾರುಕಟ್ಟೆ, ಕೈಗಾರಿಕೆ, ಸಾರಿಗೆ ಹೀಗೆ ಸೌಲಭ್ಯಗಳು ಊರು ಪ್ರವೇಶಿಸುತ್ತಲೇ ಬದಲಾವಣೆಯ ಗಾಳಿ ಬೀಸುತ್ತದೆ. ಊರು ಎಂದೂ ಹಿಮ್ಮುಖವಾಗಿ ಚಲಿಸಿ ಈ ಮೊದಲಿನ ಸ್ಥಿತಿ ತಲುಪುವುದು ಅಸಾಧ್ದ. ಆದ್ದರಿಂದ, ಊರಿನ ಜನಜೀವನ, ಸೌಲಭ್ಯಗಳು, ಆಚಾರ-ವಿಚಾರಗಳು, ನಂಬಿಕೆ ಎಲ್ಲವನ್ನೂ ಅಧ್ಯಯನಕ್ಕೆ ಒಳಪಡಿಸಿ, ದಾಖಲಿಸಬೇಕಾಗುವುದು. ಬದಲಾವಣೆಯ ಗಾಳಿಗೆ ಊರು ತತ್ತರಿಸಿದ್ದರೂ ಸಾಂಸ್ಕೃತಿಕವಾಗಿ ಕೆಲ ಅಂಶಗಳನ್ನು ಕಾಪಾಡಿಕೊಂಡು ಬರುವ ವಿದ್ಯಮಾನವೂ ಅತ್ಯಂತ ಸೋಜಿಗವೇ ಆಗಿರುತ್ತದೆ. ಈ ನಿಟ್ಟಿನಲ್ಲಿ ಆದ ಪ್ರಯತ್ನವೇ ’ಊರೆಂಬುದು ಊರಾಗುತ್ತಿದ್ದ ಪರಿ’ ಕೃತಿ.
ಊರೆಂಬುದು ಊರಗುತ್ತಿದ್ದ ಪರಿ ಕೃತಿಯ ವಿಮರ್ಶೆ
ಲೇಖಕರು ತಮ್ಮ ಬಾಲ್ಯದ ಮೂಲಕ ತಮ್ಮ ಹಳ್ಳಿಯ ಪರಿಸರವನ್ನು ಕಟ್ಟಿಕೊಡುತ್ತಾ ಹೋಗಿದ್ದಾರೆ. ನಮ್ಮ ತಾತ, ಮುತ್ತಾತಂದಿರು ಬದುಕಿದ್ದು ಹೇಗೆ, ಊರ ಹಬ್ಬಗಳು, ದೇವರುಗಳು, ಊರಿನ ವ್ಯಕ್ತಿತ್ವಗಳ ಮೂಲಕ ಕಳೆದು ಹೋಗುತ್ತಿರುವ ಅಪ್ಪಟ ಹಳ್ಳಿ ಬದುಕನ್ನು ಕಟ್ಟಿಕೊಡುತ್ತಾ ಹೋಗುತ್ತದೆ ಈ ಪುಸ್ತಕ ಊರನ್ನು ಕಟ್ಟಿದ ಅನೇಕ ಜನಸಾಮಾನ್ಯರ ಬದುಕಿನ ಕಥನವನ್ನು ಈ ಪುಸ್ತಕದಲ್ಲಿ ಹಿಡಿದಿಡಲಾಗಿದೆ.
(ಕೃಪೆ; ಹೊಸಪುಸ್ತಕ)
©2024 Book Brahma Private Limited.