ವಿವಿಧ ಪತ್ರಿಕೆಗಳಲ್ಲಿ ಬರೆದ ಅಂಕಣಗಳನ್ನು ಒಗ್ಗೂಡಿಸಿ ರಚಿತವಾದ ಕೃತಿ ಲೇಖಕಿ ಗಿರಿಜಾ ಎಸ್. ದೇಶಪಾಂಡೆ ಅವರ ‘ಸಂಸ್ಕೃತಿ’. ವಿಶ್ವದ ಅತ್ಯುನ್ನದ ಪರಂಪರೆ, ಸಂಸ್ಕೃತಿ ಸಾಮಾಜಿಕ ಜೀವನ ವಿಧಾನ, ಧರ್ಮ ಮೊದಲಾದವುಗಳ ತುಲನಾತ್ಮಕ ಅಧ್ಯಯನ ನಡೆಸಿದರೆ ಭಾರತೀಯ ಸಂಸ್ಕೃತಿ , ಪರಂಪರೆ, ಪರಧರ್ಮ ಸಹಿಷ್ಣುತೆ, ಮಾನವೀಯತೆಗಳು ಎತ್ತರದ ಸ್ಥಾನಗಳಲ್ಲಿ ನಿಲ್ಲುತ್ತವೆ. ಈ ದೇಶದ ಧಾರ್ಮಿಕ ಆಚರಣೆಗಳು ಕೇವಲ ಮೇಲ್ನೋಟದ ಆಚರಣೆಗಳಾಗದೇ ಮಾನವ ಸಮುದಾಯವನ್ನು ಒಗ್ಗೂಡಿಸುವ ಸಾಧನೆಗಳಾಗಿವೆ. ಭಾರತಕ್ಕೆ ತನ್ನದೇ ಆದ ವಿಶಿಷ್ಟ ಪರಂಪರೆಯಿದೆ. ಅನೇಕ ಉನ್ನತ ಧರ್ಮಗಳ ಉಗಮವಾಗಿರುವುದೂ ಈ ದೇಶದಲ್ಲಿಯೇ . ಇಲ್ಲಿ ಜನ್ಮ ತಾಳಿ ವಿದೇಶಗಳಲ್ಲಿಯೂ ಪ್ರಚಲಿತಗೊಂಡ ಬೌದ್ಧ ಧರ್ಮ ಬುದ್ಧನ ತತ್ವಗಳನ್ನು ಇಡೀ ವಿಶ್ವಕ್ಕೆ ಸಾರುತ್ತಿದೆ. ಚೀನಾ, ಶ್ರೀಲಂಕಾ, ಜಪಾನ್, ಟಿಬೆಟ್, ಥೈಲ್ಯಾಂಡ್, ಇಂಡೋನೇಷ್ಯ ಮೊದಲಾದ ಕಡೆಗಳಲ್ಲಿ ಬುದ್ಧ ಹೆಚ್ಚು ಜನಪ್ರಿಯನಾಗಿದ್ದಾನೆ. ನಲ್ವತ್ತಕ್ಕೂ ಹೆಚ್ಚು ಲೇಖನಗಳನ್ನು ಒಳಗೊಂಡಿರುವ ಈ ಕೃತಿಯು ಹಬ್ಬ ಹರಿದಿನಗಳ ಲೇಖನಗಳು, ಮಹಿಳಾ ದಿನಚರಣೆಯ ಮಹತ್ವ, ಗಣರಾಜ್ಯೋತ್ಸವ ದಿನ, ತ್ರಿವರ್ಣ ಧ್ವಜ, ಮಠ ಮಾನ್ಯಗಳ ಧಾರ್ಮಿಕ ಕಾರ್ಯಾಚರಣೆ ಅವು ಮಾಡುತ್ತಿರುವ ಸಾಮಾಜಿಕ ಸಾಂಸ್ಕೃತಿಕ ಕರ್ಯಕ್ರಮಗಳ ಕುರಿತೂ ವಿವಿಧ ಮಾಹಿತಿಗಳಿವೆ. ಮೇಲ್ನೋಟಕ್ಕೆ ಈ ಲೇಖನಗಳು ಸಾಂದರ್ಭಿಕವೆನಿಸಿದರೂ ಅವು ಅದಕ್ಕಿಂತ ಆಳವಾದ ಉದ್ದೇಶವನ್ನು ಹೊಂದಿವೆ ಎನ್ನುವುದನ್ನು ಈ ಲೇಖನಗಳನ್ನೂ ಆಳವಾಗಿ ಓದಿದಾಗ ಅರಿವಾಗುತ್ತದೆ.
©2024 Book Brahma Private Limited.