ಕರ್ನಾಟಕ ಸಬಾಲ್ಟ್ರನ್ ಓದು ಮಾಲಿಕೆಯಲ್ಲಿ ಪ್ರಕಟವಾದ ಕೃತಿ ‘ತಾತ್ವಿಕತೆ’. ಮೇಟಿ ಮಲ್ಲಿಕಾರ್ಜುನ ಈ ಕೃತಿಯನ್ನು ಸಂಪಾದಿಸಿದ್ದಾರೆ. ಏಕಮುಖಿ ಚಲನೆಯಿಂದ ಚರಿತ್ರೆಯೆಂಬುದು ಕೇವಲ ಚಾರಿತ್ರಿಕ ವಿವರಗಳನ್ನು ಮಂಡಿಸುವ ಬಗೆಯಾಗಿದೆ. ಈ ಚಾರಿತ್ರಿಕ ವಿನ್ಯಾಸಗಳನ್ನು ಮರು ವಿನ್ಯಾಸಗೊಳಿಸುವ ಮೂಲಕ ಚರಿತ್ರೆ ಎಂಬುದು ಸಾಂಸ್ಕೃತಿಕ ಅಸ್ಮಿತೆ, ನೆನಪಿನ ರಾಜಕಾರಣ, ಜಾತಿ ಬಗೆಗಿನ ನಂಬಿಕೆಗಳು, ಲಿಂಗ ರಾಜಕಾರಣದ ವಿನ್ಯಾಸಗಳು, ಸಮೂಹಗಳ ಶ್ರಮ ಸಂಸ್ಕೃತಿಯ ವಿಭಜನೆಯ ನಡುವಣ ಅಸಮಾನತೆಗಳನ್ನು ಗುರುತಿಸುವ ನಿಲುವುಗಳು ಎಂಬಿತ್ಯಾದಿ ಕುರಿತು ಚಿಂತಿಸುವ ಹೊಣೆಗಾರಿಕೆ ಆಗಬೇಕಿದೆ. ಇಂತಹ ಹೊಣೆಗಾರಿಕೆಯನ್ನು ನಿಭಾಯಿಸುವ ಬಗೆಯಾಗಿ ಈ ಕರ್ನಾಟಕ ಸಬಾಲ್ಟನ್ ಓದು ಮಾಲಿಕೆ ಹೊರಹೊಮ್ಮಿದೆ.
ಈಗಾಗಲೇ ಬಂದಿರುವ ಸಂಸ್ಕೃತಿ ಕುರಿತ ಓದುಗಳು ಹಲವು ಮಿತಿಗಳನ್ನು ಹೊಂದಿರುತ್ತವೆ. ಅಂದರೆ, ದಲಿತ ಓದು, ಉಪಸಂಸ್ಕೃತಿ, ಪ್ರತಿಸಂಸ್ಕೃತಿ, ಬುಡಕಟ್ಟು ಓದು ಮುಂತಾದವು ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯತೆಯ ನಿಲುವುಗಳನ್ನು ಪ್ರಕಟಿಸುವಲ್ಲಿ ಏಕಮುಖಿ ನಿಲುವನ್ನು ತಾಳಿರುತ್ತವೆ. ಇದೇನು ಆರೋಪವಲ್ಲ ಬದಲಾಗಿ, ಆಯಾ ಕಾಲದ ಓದಿನ ಮಿತಿಗಳನ್ನು ಗುರುತಿಸಲು ಈ ಮಾತನ್ನು ಹೇಳಲಾಗಿದೆ. ಈ ಮಿತಿಗಳನ್ನು ಮೀರುವ ಜರೂರಿದೆ ಎಂಬುದನ್ನಂತು ಮನಗಾಣಬೇಕಿದೆ. ಬಂಡಾಯ ಹಾಗೂ ಪ್ರತಿರೋಧದ ನೆಲೆಗಳನ್ನು ಗುರುತಿಸುವ ಬಗೆಗಳು ಇನ್ನಷ್ಟು ತೀವ್ರವಾಗಿ ಬೆಳೆಯಬೇಕಾದ ಅಗತ್ಯವಿದೆ. ಈ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ ಈ ಕರ್ನಾಟಕ ಸಬಾಲ್ಟ್ರನ್ ಓದು ಹೇಗೆ ಒತ್ತಾಸೆಯಾಗಬಲ್ಲದು ಎನ್ನುವುದು ಗಮನಾರ್ಹ.
ಲೋಕದೃಷ್ಟಿಗಳನ್ನು ಅರಿಯುವ ಹಾಗೂ ಅವುಗಳನ್ನು ಬಣ್ಣಿಸುವ ಮಾದರಿಗಳನ್ನು ಮರು ರೂಪಿಸಿಕೊಳ್ಳುವುದರಿಂದ ಈ ಓದಿನ ದಾರಿಗಳು ನಿಚ್ಚಳವಾಗುತ್ತವೆ. ಅಂದರೆ, ಈಗಾಗಲೇ ಕೈಗೊಂಡಿರುವ ಸಂಸ್ಕೃತಿ ಓದುಗಳಲ್ಲಿ ಈ ನಮ್ಮ ಓದಿಗೆ ಬೇಕಾದ ಮಾದರಿಗಳು ಸಿಗುತ್ತವೆಯಾ? ಎಂಬುದನ್ನು ಮರು ಪರಿಶೀಲಿಸುವ ಜರೂರಿದೆ. ಒಟ್ಟಿನಲ್ಲಿ, ಸಬಾಲ್ಟನ್ ಇಲ್ಲವೇ ಸಬಾಲ್ಟನಿಟಿ ಎಂಬುದನ್ನು ಸಾಂಸ್ಕತಿಕ ಗ್ರಹಿಕೆಯನ್ನಾಗಿ ಬಳಸಿಕೊಂಡು ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಚರಿತ್ರೆಗಳನ್ನು ಕಟ್ಟುವುದು ಅತ್ಯಂತ ಮಹತ್ವದ ನಡೆಯಾಗಿದೆ. ಏಕೆಂದರೆ, ಚರಿತ್ರೆ ಕೇವಲ ಐತಿಹಾಸಿಕ ವಿವರಗಳ ಮೊತ್ತವಲ್ಲ, ಬದಲಾಗಿ, ಸಮೂಹಗಳ ಸಾಂಸ್ಕೃತಿಕ ಅಸ್ಮಿತೆ ಹಾಗೂ ರಾಜಕೀಯ ಪ್ರತಿನಿಧೀಕರಣದ ಪ್ರಕ್ರಿಯೆ ಆಗಿರುತ್ತದೆ. ಹಾಗಾಗಿ, ಸಬಾಲ್ಟನ್ ಅನ್ನುವುದು ಕೇವಲ ಇತಿಹಾಸದ ಕಥನ ಹಾಗೂ ನಿರೂಪಣೆಗಳನ್ನು ಒಡೆದು/ಮುರಿದು ಕಟ್ಟುವುದಷ್ಟೆ ಅಲ್ಲ ಸಾಂಸ್ಕೃತಿಕ ಸಂಕಥನಗಳನ್ನು ರೂಪಿಸುವುದು, ವಿಶ್ಲೇಷಿಸುವುದು ಹಾಗೂ ಅವುಗಳ ತಾತ್ವಿಕ ಚೌಕಟ್ಟುಗಳನ್ನು ನಿರಚನಗೊಳಿಸುವುದು ಆಗಿರುತ್ತದೆ. ಅಂಥಹ ತಾತ್ವಿಕತೆಯ ದರ್ಶನವೇ ಈ ಕೃತಿ.
©2024 Book Brahma Private Limited.