‘ಮುಂದಣ ಹೆಜ್ಜೆ’ ಕೃತಿಯು ದೀಪಾ ಫಡ್ಕೆ ಅವರ ಕತಾ ಸಂಕಲನವಾಗಿದೆ. ಕೃತಿಯು 11 ಕಥೆಗಳನ್ನು ಒಳಗೊಂಡಿದೆ. ಸಂವಾದಿ, ಉಳಿಕೆ, ಅತಿ ಚರಾಮಿ, ಗಂಧವಿಲ್ಲದ ಹೂವು, ಚಂದು ಎಂಬ ಗಾಂಧಿ, ಅಟ್ಟಾ ಮುಟ್ಟಾ ತನ್ನಾ ದೇವಿ, ಹತ್ತನೇ ಕ್ರಾಸ್ ರಮಣ ನಗರ, ಕಾರ್ತಿಕದ ಬೆಳಕು, ಮುಕ್ತಿಯೆನ್ನ ಮನೆಗೆ ನಡೆದು ಬಂದಿತ್ತು, ಒಂದು ಹೆಜ್ಜೆ ಅಷ್ಟೇ ವಿಪ್ರಲಂಬ ಸಂಕಲನಗೊಂಡಿವೆ.
ಕೃತಿಗೆ ಮುನ್ನಡಿ ಬರೆದಿರುವ ಸುಬ್ರಾಯ ಚೊಕ್ಕಾಡಿ ಅವರು, 'ಮುಂದಣ ಹೆಜ್ಜೆ' ಎನ್ನುವ ಈ ಸಂಕಲನದಲ್ಲಿ ಒಟ್ಟು ಹನ್ನೊಂದು ಕತೆಗಳಿವೆ. ಗ್ರಾಮೀಣ ಪರಿಸರದ ಹಿನ್ನೆಲೆಯುಳ್ಳ ಮುಕ್ತಿಯೆನ್ನ ಮನೆಗೆ ನಡೆದು ಬಂದಿತ್ತು. ಗಂಧವಿಲ್ಲದ ಹೂವು, “ಚಂದು ಎ೦ಬ ಗಾಂಧಿಯಂತಹ ಎರಡು ಮೂರು ಕಥೆಗಳನ್ನು ಬಿಟ್ಟರೆ ಉಳಿದ ಬಹುತೇಕ ಕಥೆಗಳೂ ನಗರ ಪರಿಸರದ ಹಿನ್ನೆಲೆಯುಳ್ಳವು. ಮದುವೆ ಎನ್ನುವ ಸಾಮಾಜಿಕ ವ್ಯವಸ್ಥೆಯಲ್ಲಿ ರೂಪುಗೊಂಡ ದಾಂಪತ್ಯದಲ್ಲಿ ನಿಧಾನಕ್ಕೆ ಕಾಣಿಸಿಕೊಳ್ಳುವ ಏಕತಾನತೆ, ಅದರಿಂದಾಗಿ ಉಂಟಾಗುವ ಬಿರುಕು ಹಾಗೂ ಅದನ್ನು ಮೀರುವ ಹಂಬಲದಲ್ಲಿ ಉಂಟಾಗುವ ತಳಮಳ ಕೂಡುಕುಟುಂಬದಲ್ಲಿ ಬದುಕುವ ಹೆಣ್ಣು ಎದುರಿಸುವ ಸಮಸ್ಯೆಗಳು ಮೊದಲಾದವನ್ನು ಆಧುನಿಕ ಕಾಲದಲ್ಲಿ ನಿಂತು ಗುರುತಿಸುವ, ಆಗ ದಕ್ಕುವ ಅನುಭವವನ್ನು ಶೋಧಿಸುವ ಯತ್ನವನ್ನು ಈ ಕಥೆಗಳು ಮಾಡುತ್ತವೆ. ಅಂದರೆ, ಈ ಕಥೆಗಳು ಬಹುತೇಕವಾಗಿ ಸ್ತ್ರೀಲೋಕದ ಒಳಮನಸ್ಸಿನ ಆಸೆ ಆಕಾಂಕ್ಷೆಗಳಿಗೆ, ತಲ್ಲಣಗಳಿಗೆ ಅಕ್ಷರ ರೂಪವನ್ನು ಕೊಡುವ ಪ್ರಯತ್ನ ಮಾಡುತ್ತವೆ. ಜತೆಗೆ ಈ ಏಕತಾನತೆಯನ್ನು ಮೀರುವ ಹಂಬಲ ಹಾಗೂ ಆಗಿನ ಸಂದಿಗ್ಧ ಸ್ಥಿತಿ ಮತ್ತು ಆಗ ಉಂಟಾಗುವ ಮಾನಸಿಕ ತಳಮಳವನ್ನೂ ಗುರುತಿಸಲು ಈ ಕಥೆಗಳು ಯತ್ನಿಸುತ್ತವೆ. ಅದು ಹಳ್ಳಿಯದಾಗಿರಲಿ, ನಗರದ್ದಾಗಿರಲೀ, ಸ್ತ್ರೀ ಎದುರಿಸುವ ಸಮಸ್ಯೆಯ ರೂಪಗಳು ಬೇರೆಯಾಗಿದ್ದರೂ ಮೂಲ ಒಂದೇ ಎಂಬುದನ್ನೂ ಈ ಕಥೆಗಳು ಸೂಚಿಸುವಂತಿವೆ.
“ಸಂವಾದಿ"ಯ ಸಂಜನಾ, "ಉಳಿಕೆ" ಕೇತಕಿ, "ಆತಿ ಚರಾಮಿ"ಯ ಸತ್ಯಭಾಮಾ "ಗಂಧವಿಲ್ಲದ ಹೂವು" ಕಥೆಯ ಚಂದ್ರಭಾಗಾ, "ಅಟ್ಟಾ ಮುಟ್ಟಾ...'ದ ಮಾನಸಾ, "ಹತ್ತನೇ ಕ್ರಾಸ್....'ನ ನಂದಿನಿ. "ವಿಪ್ರಲಂಬ"ದ ಪಲ್ಲವಿ,, "ಕಾರ್ತಿಕದ ಬೆಳಕು" ಕಥೆಯ ಗಿರಿಜೆ...ಮೊದಲಾದವರು ದಾಂಪತ್ಯದಲ್ಲಿನ ಎಲ್ಲ ಸೌಲಭ್ಯಗಳ ನಡುವೆಯೂ ,ಕೆಲವೊಮ್ಮೆ ಅಲ್ಲಿನ ಸೂಕ್ಷ್ಮ ಕ್ರೌರ್ಯದ ಕಾರಣದಿಂದಲೂ ಅನುಭವಿಸಿದ ತಳಮಳ ಹಾಗೂ ಅದನ್ನು ಮೀರುವ ಪ್ರಯತ್ನ ಒಂದೇ ರೀತಿಯದ್ದಾದರೂ ಆ ಮೀರುವಿಕೆಯ ಸ್ವರೂಪ ಹಾಗೂ ಅವರ ಮುಂದಣ ಹೆಜ್ಜೆಯು ಬೇರೆ ಬೇರೆಯಾಗಿದೆ. ಉಳಿಕೆ ಕಥೆಯ ಸಂದೀಪನು ಮದುವೆ ಎನ್ನುವ ವ್ಯವಸ್ಥೆಯನ್ನು ಇಷ್ಟಪಡದ, ಆಧುನಿಕ ಮನೋಭಾವದ I want to be forgotten ಎಂದು ಬಯಸುವ ಸಂದೀಪನ ಜತೆಯ ದಾಂಪತ್ಯದಲ್ಲಿ, ಹಕ್ಕಿಗಳ ಬದುಕಿನ ರೀತಿಯಿಂದ ಕೇತಕಿ ಪಡೆದ ಹೊಸ ಅನುಭವವನ್ನು, ಅರ್ಥವನ್ನು ದಾಖಲಿಸಿದರೆ, "ಸಂವಾದಿ" ಕಥೆಯ ಸಂಜನಾ ದಾಂಪತ್ಯದಾಚೆಗೆ ಗೆಳೆಯ ಮನೋಹರ ಹೇಳಿದ, "ಲೈಟಾಗಿ ಫರ್ಟ್ ಮಾಡೋದು ಹಲ್ಲಿ" ಎನ್ನುವ ನಿಲುವಿನ ಕಡೆಗೆ ಆಕರ್ಷಿತಳಾಗುತ್ತಾಳೆ.."ಅತಿ ಚರಾಮಿ'ಯ ಸತ್ಯಭಾಮಾ, ಬದುಕಿನಲ್ಲಿ ರೋಸಿ ಹೋಗಿ, ತನ್ನ ಮುಂದಣ ಹೆಜ್ಜೆಯಾಗಿ ಧೈರ್ಯವಾಗಿ ಗಂಡನನ್ನು ಬಿಟ್ಟು ಮಗನೊಂದಿಗೆ ತೆರಳಿದರೆ, "ಹತ್ತನೇ ಕ್ರಾಸ್..ಕಥೆಯ ನಂದಿನಿ, ರಂಜೆ ಮರ ಮತ್ತೆ ಚಿಗುರುವ ರೂಪಕದ ಮೂಲಕ ತನ್ನ ಅದೆತನದ ಬದುಕು ಮತ್ತೆ ಚಿಗುರುವುದನ್ನು ಕಾಣುತ್ತಾಳೆ. “ವಿಪ್ರಲಂಬದ" ಪಲ್ಲವಿ ಮುಂದಣ ಹೆಜ್ಜೆಯಿಡಲು ನಿರ್ಧರಿಸಿದರೆ, "ಒಂದು ಹೆಜ್ಜೆ ಮುಂದೆ ಕಥೆಯ ಸಂಧ್ಯಾ ತನ್ನ ಪತಿಯ ಮಾತನ್ನು ಮೀರಿ ತನ್ನ ತಾಯಿಯ ಆಪರೇಶನ್‌ಗೆ ಹಣ ಕಳಿಸುತ್ತಾಳೆ. "ಕಾರ್ತಿಕದ ಬೆಳಕು" ಕಥೆಯ ಇಂದುಮತಿ ತನ್ನ ಬಾಲ್ಯ ಸ್ನೇಹಿತೆ ಗಿರಿಜೆಯ ದುರಂತ ಬದುಕನ್ನು, ಅದನ್ನು ಗಿರಿಜೆ ಸ್ವೀಕರಿಸಿ ಹೊಸ ಅರಿವನ್ನು ಪಡೆದ ಬಗೆಯನ್ನು ಕಂಡು ಅಚ್ಚರಿ ಪಡುತ್ತಾಳೆ. ಹೀಗೆ ಇಲ್ಲಿನ ಕಥೆಗಳ ನಾಯಿಕೆಯರು ತಮ್ಮದೇ ರೀತಿಯಲ್ಲಿ ತಮ್ಮ ಬದುಕಿನ ಏಕತಾನತೆಯನ್ನು ಒಡೆದು ಹೊಸ ಲವಲವಿಕೆಯನ್ನು ತಮ್ಮದೇ ರೀತಿಯಲ್ಲಿ ಪಡೆದುಕೊಳ್ಳುತ್ತಾರೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.