'ಚಿನ್ಮಯಿ' ಲೇಖಕ ಕೇಶವ ಕುಡ್ಲ ಅವರ ನೀಳ್ಗತೆ. ತುಳುನಾಡಿನ ಬಾಯ್ದೆರೆ ಸಾಹಿತ್ಯವಾದ ಪಾಡ್ದನದ ಬಗ್ಗೆ ಒಂದಷ್ಟು ತಿಳಿದುಕೊಳ್ಳಬೇಕು ಎಂದು ಪಾಡ್ದನ ಎಂಬುದು ಸುಲಭಕ್ಕೆ ಎಲ್ಲರ ಅಂಕೆಗೆ ಸಿಕ್ಕುವ ವಸ್ತುವಲ್ಲ. ಕೇವಲ ತುಳುಭಾಷೆ ಅಷ್ಟೆ ಅಲ್ಲದೆ ಜನಪದ ತುಳುವಿನ ಮಹಾಜ್ಞಾನವೂ ಇರಬೇಕಾಗುತ್ತದೆ. ನನಗೆ ಅದು ಗಗನಕುಸುಮ ಎನ್ನಿಸಿದರೂ, ಅದರ ಆಳಕ್ಕಿಳಿಯಲಾಗದಿದ್ದರೂ ಮೇಲ್ಪದರವನ್ನದರೂ ಸ್ಪರ್ಷಿಸುವ ಎನ್ನಿಸಿ ಮೊದಲಿಗೆ ಸಿರಿ ಪಾಡ್ದನದ ಬಗ್ಗೆ ಒಂದಷ್ಟು ಓದು ನಡೆಸಿದೆ. ತುಳು ಸಂಶೋಧಕರ ಜೊತೆ ಮಾತನಾಡಿದೆ.. ಆದರೆ ವಿಷಯವನ್ನು ಸರಿಯಾಗಿ ಸ್ವೀಕರಿಸಿದ್ದೇನೋ ಇಲ್ಲವೋ ಗೊತ್ತಿಲ್ಲ. ನಂತರ ಸಿರಿಯ ಮಹಾಕಥಾನಕ ಸಂಭವಿಸಿದ ಊರುಗಳನ್ನು ನೋಡುವ ಉಮೇದಿನಿಂದ ಕಥೆಯ ಪ್ರಕಾರ ಸಿರಿ ನಡೆದಾಡಿದ ಮತ್ತು ಆಕೆಯ ಜೀವನದ ಮಹತ್ವದ ಸಂಗತಿಗಳು ಸಂಭವಿಸಿದ ನಂದಳಿಕೆ, ಕವತ್ತಾರು, ಕಾಂತಾವರ, ಬೋಳ ಇತ್ಯಾದಿ ಹಲವಾರು ಜಾಗಗಳನ್ನು ನೋಡಿ ಬಂದೆ ಮತ್ತು ಅದ್ಭುತವಾದ ನಂದಳಿಕೆಯ ಸಿರಿಯ ಮಹಾಜಾತ್ರೆಯ ಎಲ್ಲವನ್ನೂ ರಾತ್ರೆಯಿಡೀ ನೋಡಿ ನೇರ ಅನುಭವ ಪಡೆದೆ. ಇವುಗಳ ಹಿನ್ನೆಲೆಯಲ್ಲಿ ಒಂದು ಕಥೆ ಬರೆಯಲು ಹೊರಟಾಗ ಅದು ನೀಳ್ಗತೆಯಾಯಿತು. ವಸ್ತು ನೀಳ್ಗತೆಯ ವ್ಯಾಪ್ತಿಗೆ ಕಡಿಮೆಯಾಯಿತೇನೋ ಎನ್ನಿಸಿದರೂ ಮೂಲ ಕಥೆಯ ಜೊತೆಗೆ ಇಲ್ಲಿನ ಜನಜೀವನದ ಕೆಲವು ಅಂಶಗಳನ್ನು ಸೇರಿಸಬೇಕೆಂಬ ಬಯಕೆಯ ಕಾರಣದಿಂದ ನೀಳ್ಗತೆಯಾಗಿದೆ.
©2024 Book Brahma Private Limited.