ಸಾಹಿತಿ ಎಸ್. ಎಲ್. ಭೈರಪ್ಪ ಅವರ ಕಥಾಸಂಕಲನ ‘ಗತಜನ್ಮ, ಮತ್ತೆರಡು ಕತೆಗಳು’. ಈ ಪುಸ್ತಕವು ಗತಜನ್ಮ, ಸತ್ತಿಲ್ಲ, ಸಂಬಂಧ ಎನ್ನುವ ಮೂರು ಕಥೆಗಳನ್ನು ಒಳಗೊಂಡಿದೆ. ಮೂರೂ ಕಥೆಗಳು ಹೃದಯ ಸ್ಪರ್ಶಿಯಾಗಿ ಓದುಗರ ಮನ ಮುಟ್ಟುತ್ತವೆ.
ಗತಜನ್ಮ...ಬಾಲ್ಯ ವಿವಾಹ ಪದ್ಧತಿ ಇದ್ದ ಕಾಲದ ಕಥೆಯಿದು. ಇದು ಭೈರಪ್ಪನವರು ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದಾಗ ಬರೆದದ್ದು. ಅಷ್ಟು ಚಿಕ್ಕ ವಯಸ್ಸಿನಲ್ಲಿ ಬರೆದ ಕಥೆಯೆಂದರೆ ಲೇಖಕರ ಪ್ರಬುದ್ಧತೆಗೆ ಅಚ್ಚರಿ ಮೂಡುತ್ತದೆ.
ಇದನ್ನು ಓದಿದವರಿಗೆ. ಗೌರಿ ಎಂಬ ಹನ್ನೆರಡು ವರ್ಷದ ಮುದ್ದು ಹುಡುಗಿ ಮೈ ನೆರೆದಾಗ ಅವಳ ಕುಟುಂಬದಲ್ಲಿ ಯಾವ ಸಂತೋಷವೂ ಇರಲಿಲ್ಲ ಕಾರಣ ಆ ಕಾಲದಲ್ಲಿ ಯಾವುದೇ ಹುಡುಗಿ ಮದುವೆಗೂ ಮುನ್ನವೇ ಮೈನೆರೆದರೆ ಅವಳನ್ನು ಕಾಡಿಗೆ ಬಿಟ್ಟು ಬರುವ ಕ್ರೂರ ಪದ್ಧತಿ ಆಚರಣೆಯಲ್ಲಿತ್ತು. ಗೌರಿಯ ವಿಷಯದಲ್ಲೂ ಹೀಗೇ ಆಯಿತು. ಅವಳ ತಂದೆ ಅವಳನ್ನು ಮಾವನ ಮನೆಗೆ ಹೋಗೋಣವೆಂದು ಕರೆದುಕೊಂಡು ಹೋಗಿ ರಾತ್ರೋರಾತ್ರಿ ಕಾಡಿನಲ್ಲಿ ಬಿಟ್ಟು ಬರುತ್ತಾರೆ. ನಂತರ ಅವಳು ಚೋಲ ಎನ್ನುವ ಬಂಜಾರ ತರುಣನ ಕೈಗೆ ಸಿಕ್ಕಿ ಅವನ ಹೆಂಡತಿಯಾಗಿ ಲೂಚಿ ಎಂದು ನಾಮಾಂಕಿತಳಾಗುತ್ತಾಳೆ. ಮೇಲ್ಜಾತಿಯಲ್ಲಿ ಹುಟ್ಟಿದ ಗೌರಿ ಗಂಡನ ಜಾತಿ ಮತ್ತು ಅಲ್ಲಿನ ಪದ್ಧತಿ, ಸಂಪ್ರದಾಯಗಳನ್ನು ಕಷ್ಟವಾದರೂ ಒಪ್ಪಿ ಅಪ್ಪಿಕೊಳ್ಳುತ್ತಾಳೆ. ಮುಂದೆ ಮೂರು ಮಕ್ಕಳ ತಾಯಿಯಾಗುತ್ತಾಳೆ. ಒಮ್ಮೊಮ್ಮೆ ಬಾಲ್ಯದ ನೆನಪುಗಳು ಮರುಕಳಿಸಿ ಅಪ್ಪನ ಮೇಲೆ ಎಲ್ಲಿಲ್ಲದ ರೋಷ ಉಕ್ಕಿ ಬಂದು ಅಸ್ವಸ್ಥಳಾಗುವ ಲೂಚಿ ಮನಶ್ಯಾಂತಿಗಾಗಿ ಸುರೆಯ ಮೊರೆ ಹೋಗುವುದು ಮೂಮೂಲಾಗುತ್ತದೆ. ಎಂಥದೋ ಕೆಟ್ಟ ಕಾಯಿಲೆ ಇಡೀ ತಾಂಡಾವನ್ನೇ ಆವರಿಸಿದಾಗ ಲೂಚಿ ತಿಂಗಳುಗಟ್ಟಲೆ ಪ್ರಜ್ಞಾಹೀನಳಾಗುತ್ತಾಳೆ. ಒಂದು ದಿನ ಇದ್ದಕ್ಕಿದ್ದಂತೆ ಪ್ರಜ್ಞೆ ಬಂದಾಗ ಅವಳ ಕಣ್ಣುಗಳು ಗಂಡ ಚೋಲನನ್ನು ಅರಸುತ್ತವೆ... ಆದರೆ ಅವನು ಕೂಡ ಕಾಯಿಲೆಯಿಂದ ಉಸಿರು ಚೆಲ್ಲಿದ ವಿಷಯ ಕೇಳಿ ಕಂಗಾಲಾಗುತ್ತಾಳೆ. ತನಗೂ ಕೊನೆಗಾಲ ಬಂದಿದೆ, ತವರಿನ ನೆಲದಲ್ಲಿಯೆ ಮಣ್ಣಾಗಬೇಕೆಂದು ಬಯಸುತ್ತಾಳೆ. ಅವಳ ಕೊನೆಯ ಆಸೆ ಈಡೇರಿತೆ... ಕಥೆಯನ್ನು ಓದಿಯೇ ತಿಳಿಯಬೇಕಿದೆ.
ಎರಡನೇ ಕಥೆ ಸತ್ತಿಲ....ಈ ಕಥೆಯಲ್ಲಿ ಪುಟ್ಟ ಬಾಲಕನ ತಂದೆ ಕೆಲಸಕ್ಕೆಂದು ಪರವೂರಿಗೆ ಹೋಗಿ ಅಲ್ಲೇ ಕಾಯಿಲೆಯಿಂದ ಸತ್ತು ಹೋಗಿರುತ್ತಾರೆ. ಆದರೆ ಆ ಹುಡುಗನ ತಾಯಿ ಮಗ ಇನ್ನೂ ಚಿಕ್ಕವನು ತಂದೆ ಸತ್ತ ವಿಷಯ ತಿಳಿದರೆ ನೊಂದುಕೊಳ್ಳುವನೆಂದು ಹೆದರಿ ಅಪ್ಪ ದೇವರ ಬಳಿ ಹೋಗಿದ್ದಾರೆ ಅಂತಲೇ ನಂಬಿಸಿರುತ್ತಾಳೆ. ಮುಗ್ಧ ಬಾಲಕನಿಗೆ ಸದಾ ಅಪ್ನದೇ ಯೋಚನೆ... ಯಾವಾಗಲೂ 'ಅಪ್ಪ ಬರುವುದು ಯಾಕೆ ತಡವಾಗುತ್ತಿದೆ, ಪತ್ರ ಬರೆದು ಕೇಳಮ್ಮ' ಅಂತ ಅಮ್ಮನನ್ನು ಪೀಡಿಸುತ್ತಾನೆ. ಅಲ್ಲಿ ಪೋಸ್ಟಾಫೀಸು ಇಲ್ಲ ಮಗು ಅಂತ ಅಮ್ಮ ಸಬೂಬು ಹೇಳುತ್ತಾಳೆ. ತಕ್ಷಣ ಹುಡುಗ 'ಪೋಸ್ಟಾಫೀಸು ಇಲ್ಲದ ಊರನ್ನು ದೇವರು ಊರು ಅಂತಾರ, ಅದಕ್ಕಿಂತ ನಮ್ಮೂರೇ ಚಂದ... ಅಪ್ಪನಿಗೆ ಇಲ್ಲಿಗೆ ಬರಲು ಹೇಳು' ಅಂತಾನೆ. ಇದನ್ನು ಓದುವಾಗ ಕಣ್ಣು ತುಂಬಿ ಬರುತ್ತವೆ. ಮಗು ಹೀಗೆ ದಿನಾ ಅಪ್ಪನ ಬಗ್ಗೆ ಕೇಳುವುದು,ಅಮ್ಮ ಏನೇನೋ ಹೇಳಿ ಸಮಾಧಾನ ಹೇಳುವುದು ನಡೆಯುತ್ತಿರುತ್ತದೆ. ಒಂದು ದಿನ ಹುಡುಗನಿಗೆ ಅನುಮಾನ ಬಂದು ದೇವರ ಹತ್ರ ಅಂದ್ರೆ ಸತ್ತು ಹೋಗಿದ್ದಾರೆ ಅಂತ ಅಲ್ವೇನಮ್ಮಾ ಅಂದಾಗ ಅಮ್ಮ ಬೇರೆ ದಾರಿಯಿಲ್ಲದೆ 'ಹೌದು ಮಗು ಅಪ್ಪ ಸತ್ತು ಹೋಗಿದ್ದಾರೆ,ಇಷ್ಟು ದಿನ ನಾನು ಸುಳ್ಳು ಹೇಳಿದ್ದೆ' ಎನ್ನುತ್ತಾಳೆ. ಮಗು ದುಃಖದಿಂದ 'ಹಾಗನ್ನಬೇಡಮ್ಮ ಅಪ್ಪ ಸತ್ತಿಲ್ಲ, ದೇವರ ಊರಿಗೆ ಹೋಗಿದ್ದಾರೆ ಅಲ್ವೇನಮ್ಮಾ' ಅನ್ನುತ್ತದೆ. 'ಹೂಂ' ಅಂದ ಅಮ್ಮನ ಕಣ್ಣಲ್ಲಿ ನೀರು...ಜೊತೆಗೆ ನನ್ನ ಕಣ್ಣೂ ತೇವವಾಗಿ ಮನಸ್ಸು ಭಾರವಾಗಿತ್ತು.
ಮೂರನೇ ಕಥೆ ಸಂಬಂಧ....ಮಕ್ಕಳಿಲ್ಲದ ಹೆಣ್ಣಿನ ಸುತ್ತ ಹೆಣೆದ ಕಥೆ ಇದು. ಹಣ, ಆಸ್ತಿ ಇದ್ದರೂ ಅದನ್ನು ಅನುಭವಿಸಲು ಮಕ್ಕಳಿಲ್ಲದ ಕೊರಗು ಆಕೆಯದು. ಗಂಡನಿಗೆ ತನ್ನ ಅಣ್ಣನ ಮಗನನ್ನು ದತ್ತು ತೆಗೆದುಕೊಳ್ಳುವಾಸೆ. ಗಂಡನ ಅಣ್ಣನ ಮಕ್ಕಳ ಮೇಲೆ ಪ್ರೀತಿ, ಮಮಕಾರ ಇದ್ದರೂ ಇದು ಅವಳಿಗೆ ಸಮ್ಮತವಿಲ್ಲ. ಆಕೆಯ ತಂಗಿಗೊ ಬಡತನವಿದ್ದರೂ ಮೂರು ಮಕ್ಕಳ ಭಾಗ್ಯ... ಇನ್ನು ಮಕ್ಕಳಾಗದಂತೆ ಆಪರೇಷನ್ ಮಾಡಿಸಿಕೊಳ್ಳಬೇಕೆಂಬ ತಂಗಿಯನ್ನು ತಡೆದು ನಾಲ್ಕನೆಯ ಮಗುವಾಗಲಿ ನಾನೇ ದತ್ತು ತೆಗೆದುಕೊಳ್ಳುವೆ ಅಂತ ಒಪ್ಪಿಸುತ್ತಾಳೆ. ಇದಕ್ಕೊಪ್ಪದ ಗಂಡನನ್ನೂ ಹೇಗೋ ಒಪ್ಪಿಸುತ್ತಾಳೆ. ತಂಗಿಗೆ ಹುಟ್ಟುವ ಮಗು ಗಂಡೇ ಆಗಿರಲಿ, ತಮ್ಮ ಆಸ್ತಿಗೆ ವಾರಸುದಾರನಾಗಲಿ ಅಂತ ದೇವರಿಗೆ ಹರಕೆ ಕಟ್ಟಿಕೊಳ್ಳುತ್ತಾಳೆ. ಅವಳ ಆಸೆಯಂತೆ ತಂಗಿ ಗಂಡು ಮಗುವನ್ನೆ ಹಡೆಯುತ್ತಾಳೆ.ಮುಂದೆ ಕಥೆಯಲ್ಲಿ ಮಹತ್ತರ ತಿರುವು ಬರುತ್ತದೆ.... ತಂಗಿ ಅಕ್ಕನಿಗೆ ತನ್ನ ಮಗುವನ್ನು ದತ್ತು ಕೊಟ್ಟಳೇ? ,ಹಣ ಮತ್ತು ಆಸ್ತಿ ಮಗುವಿಗೆ ಸಿಗುತ್ತದೆಯೇ? ಕಥೆ ಓದಿದರೆ ಕುತೂಹಲಕ್ಕೆ ಉತ್ತರ ಸಿಗುತ್ತದೆ.
©2024 Book Brahma Private Limited.