ಲೇಖಕ ಅಮರೇಶ ನುಗಡೋಣಿ ಅವರು ಬರೆದ ನೀಳ್ಗತೆಗಳ ಕೃತಿ ʼಬೆಳಕೂ ಅದೆ ಕತ್ತಲೆಯೂ ಅದೇʼ. ಪುಸ್ತಕದ ಬಗ್ಗೆ ಸ್ವತಃ ಲೇಖಕರೇ ಹೇಳುವಂತೆ, “ಬಾಲ್ಯದ ಅನುಭವಗಳು, ಪ್ರಾದೇಶಿಕತೆಯ ಅರಿವು, ಊರುಕೇರಿ, ಜನರ ಬದುಕು, ನೂರಾರು ಘಟನೆಗಳು ಎಲ್ಲ ನೆನಪಿನಲ್ಲಿದ್ದರೆ ಮಾತ್ರ ಕತೆಯನ್ನು ಸುಲಭವಾಗಿ ಬರೆಯಬಹುದು ಅಂತೇನಿಲ್ಲ. ಬದುಕನ್ನು ನೋಡುವುದಕ್ಕೆ, ಗ್ರಹಿಸುವುದಕ್ಕೆ ದೃಷ್ಟಿಕೋನ ಬೇಕು. ಕತೆ ರಚಿಸಲು ಅನುಭವಗಳನ್ನು ಕಲೆಯಾಗಿ ರೂಪಿಸಲು ಕತೆಗಾರನಿಗೆ ತಾತ್ವಿಕತೆ ಬೇಕಾಗುತ್ತದೆ. ಅನುಭವಗಳಿಗೆ ಆಕಾರ ನೀಡಲು ಕತೆಗಾರನಿಗೆ ದೃಷ್ಟಿಕೋನ ಅಥವಾ ತಾತ್ವಿಕತೆ ಬೇಕು ಎಂದಾದರೆ, ಕತೆಗಾರ ಅದನ್ನು ಗಳಿಸುವುದು ಎಲ್ಲಿಂದ ? ಕತೆಗಾರನಿಗೊಂದು ಮನೆತನ, ಜಾತಿ, ಲಿಂಗ, ಪರಿಸರ, ಸಂಸ್ಕೃತಿ ದತ್ತವಾಗಿರುತ್ತದೆ. ಅವುಗಳ ಜೊತೆ ಒಡನಾಡುತ್ತಲೇ ಬೆಳೆದಿರುತ್ತಾರೆ. ಬಾಲ್ಯದಲ್ಲಿ ಕೆಲವರಿಗೆ ದೊಡ್ಡ ಬದುಕಿನೊಂದಿಗೆ ಜೀವಿಸುವ ಅವಕಾಶ ಒದಗಿರುತ್ತದೆ. ಕೆಲವರಿಗೆ ಸೀಮಿತ ಕುಟುಂಬದ ಚೌಕಟ್ಟಿನಲ್ಲಿ ಮಾತ್ರ ಜೀವಿಸುವ ಅವಕಾಶ ಒದಗಿರುತ್ತದೆ. ಹುಟ್ಟಿದ ಪರಿಸರದಿಂದಲೇ ಒಂದು ತಿಳುವಳಿಕೆಯನ್ನು ಪಡೆಯುತ್ತಿರುತ್ತಾನೆ; ಪಡೆಯುತ್ತಿರುತ್ತಾಳೆ. ಮನೆ-ಊರು ಪರಿಸರದ ಆಚರಣೆಗಳು, ಸಂಸ್ಕಾರಗಳು, ಒಡನಾಡಿಗಳ ಪ್ರಭಾವ, ಕೇಳುವ, ನೋಡುವ ಪುಣ್ಯಕತೆ- ಪುರಾಣಗಳು, ಊರಾಡುವ ಕಲಾವಿದರ ಪದರ್ಶನಗಳ ಮೂಲಕ ಕೇಳುವ ಹಾಡು, ನೋಡುವ ಅಭಿನಯ ಇವುಗಳೆಲ್ಲವೂ ಸಂಸ್ಕೃತಿಯ ಸಾರವಾಗಿ ಕತೆಗಾರ-ಕತೆಗಾರ್ತಿಯರಲ್ಲಿ ಒಂದು ದೃಷ್ಟಿಕೋನ ರೂಪ ತಳೆದಿರುತ್ತದೆ. ತಾತ್ವಿಕತೆ ಮೂಡಿರುತ್ತದೆ, ಅದರ ನೆರವು ಲೋಕದೃಷ್ಟಿಯಾಗಿ ಪರಿವರ್ತನೆಯಾಗುತ್ತದೆ. ಇದು ದತ್ತವಾದದ್ದು ಎನ್ನಬಹುದು”.
©2024 Book Brahma Private Limited.