ಲೇಖಕ ರಾಧಾಕೃಷ್ಣ ಕಲ್ಚಾರ್ ಅವರ ಕೃತಿ ಪರಕಾಯ ಪ್ರವೇಶ ಭಾಗ - 2. ನಮ್ಮ ಪ್ರಾಚೀನ ಮಹಾಕಾವ್ಯಗಳು, ಪುರಾಣಕಥೆಗಳಲ್ಲಿ ಕಾಣಬರುವ ಪಾತ್ರಗಳು ಪ್ರತಿಯೊಂದೂ ವಿಶಿಷ್ಟವಾದವು. ಅವುಗಳಲ್ಲಿಯೂ ನಾಯಕ-ನಾಯಿಕೆಯರು, ಪ್ರಧಾನ ಪೋಷಕಪಾತ್ರಗಳು ಎಷ್ಟು ಮಹತ್ತ್ವದವೊ ಅಲ್ಲೊ ಇಲ್ಲೊ ಒಮ್ಮೆ ಮಾತ್ರ ಸುಳಿದು ಸಾಗುವ ಸಣ್ಣ ಪುಟ್ಟ ಪಾತ್ರಗಳೂ ಅಷ್ಟೇ ಮಹತ್ತ್ವದವು. ಅವು ಇಲ್ಲದೆ ಕಥಾನಕ ಮುಂದೆ ಸಾಗುವುದಿಲ್ಲ. ಸಾಮಾನ್ಯವಾಗಿ ನಮ್ಮ ಓದು-ಬರವಣಿಗೆಗಳಲ್ಲಿ ಪ್ರಧಾನಪಾತ್ರಗಳ ಕಡೆಗೆ ಹೆಚ್ಚು ಗಮನ ಕೊಡುತ್ತೇವೆ; ಸಣ್ಣ ಪುಟ್ಟ ಪಾತ್ರಗಳಿಗೆ ಅಷ್ಟಾಗಿ ಮಹತ್ತ್ವ ಕೊಡುವುದಿಲ್ಲ. ಅವು ಅಜ್ಞಾತವಾಗಿಯೇ ಉಳಿಯುತ್ತವೆ. ಅಂಥ ಅಜ್ಞಾತಪಾತ್ರಗಳ ಮೂಲಕ ಮುಖ್ಯ ಕಥಾನಕವನ್ನೂ ಕಥೆಯ ಸಂದರ್ಭವನ್ನೂ ನೋಡುವ ಪ್ರಯತ್ನ ಇಲ್ಲಿನದು. ಹೆಚ್ಚು ಪರಿಚಿತವಲ್ಲದ ಪಾತ್ರವೊಂದರ ಪರಿಚಯದ ಜತೆಗೆ, ಮುಖ್ಯ ಕಥೆಗಳನ್ನು ಅವುಗಳ ಇನ್ನೊಂದು ಮಗ್ಗುಲಿನಿಂದ ನೋಡುವುದಕ್ಕೆ ಇಲ್ಲಿ ಸಾಧ್ಯವಾಗಿದೆ; ಒಂದೊಂದು ಪಾತ್ರವೂ ತನ್ನ ಕಥೆಯನ್ನು ತಾನೇ ಹೇಳಿಕೊಳ್ಳುವ, ಮುಖ್ಯ ಕಥೆಗೆ ಸ್ಪಂದಿಸುವ ಇಲ್ಲಿನ ಕಥನತಂತ್ರವೂ ವಿಶಿಷ್ಟವಾಗಿದೆ. ಲೇಖಕರು ಒಂದೊಂದು ಪಾತ್ರದ ಅಂತರಂಗವನ್ನೂ ಪ್ರವೇಶಿಸಿ, ಅಲ್ಲಿಯ ತುಮುಲಗಳಿಗೆ ತೊಳಲಾಟಗಳಿಗೆ ಅಕ್ಷರರೂಪ ನೀಡಿರುವುದು ಅನನ್ಯವಾಗಿದೆ; ಯಥಾರ್ಥದಲ್ಲಿಯೂ ಇದು 'ಪರಕಾಯ ಪ್ರವೇಶ'ವೇ ಆಗಿದೆ. ಇಲ್ಲಿಯ ಪ್ರತಿಯೊಂದು ಕಥೆಯೂ ಓದುಗರಲ್ಲಿ 'ಸ್ವಯಂ-ಅವಲೋಕನ' ಪ್ರಕ್ರಿಯೆಗೆ ಚಾಲನೆ ನೀಡಿದರೆ ಆಶ್ಚರ್ಯವಿಲ್ಲ!
©2024 Book Brahma Private Limited.