ಕಥೆಗಾರ ಚಿದಾನಂದ ಸಾಲಿ ಅವರ ಕಥಾ ಸಂಕಲನ ‘ಹೊಗೆಯ ಹೊಳೆಯಿದು ತಿಳಿಯದು’. ಈ ಸಂಕಲನದಲ್ಲಿ ಗಿರೀಶ್ ಕಾಸರವಳ್ಳಿ ಅವರ ಮುನ್ನುಡಿಯ ಮಾತುಗಳಿವೆ. ಅವರು ಹೇಳುವಂತೆ, ‘ಈ ಕಥೆಗಳ ವಿಶಿಷ್ಟತೆ ಅವುಗಳ ಪ್ರಾದೇಶಿಕತೆಯಷ್ಟೇ ಅಲ್ಲದೆ ಅವು ಕೊಡಮಾಡುವ ಒಳನೋಟವೂ ಆಗಿದೆ. ಸಮುದಾಯದ ಮತ್ತು ವ್ಯಕ್ತಿಗಳ ಸಂಘರ್ಷ ವನ್ನು ಚಿತ್ರಿಸುತ್ತಲೇ, ಅಲ್ಲಿ ಸುಳಿಯುವ ಒಳತುಡಿತಗಳಿಗೂ ಇವು ಮಿಡಿಯುವುದರಿಂದ ಕಾಲದೇಶಾತೀತವಾಗಿ ನಿಲ್ಲುತ್ತವೆ. ಸಾಂದ್ರ ವಿವರಗಳ ಚಿತ್ರಕ ಶೈಲಿ ಮತ್ತು ರಾಯಚೂರಿನ ಪ್ರಾದೇಶಿಕ ಭಾಷೆಯ ಸೊಗಡುಗಳಿಂದಾಗಿ ಒಂದು ದಿಕ್ಕಿನಿಂದ ದೈನಂದಿಕದಲ್ಲೇ ಕಾಲೂರಿದಂತೆ ಕಂಡರೂ ಮತ್ತೊಂದು ದಿಕ್ಕಿನಿಂದ ಅವೇ ದೈನಂದಿಕಗಳು ಬೇರೊಂದು ಲೋಕ ಗ್ರಹಿಕೆಯನ್ನು ಹೊಮ್ಮಿಸುತ್ತಿರುವುದು ಕಾಣಿಸುತ್ತದೆ’ ಎಂದಿದ್ದಾರೆ.
`ಜಡ್ಡು' ಕಥೆಯಲ್ಲಿ ವೈದ್ಯಕೀಯ ಜಗತ್ತು ಮತ್ತು ನಂಬಿಕೆಯ ಜಗತ್ತುಗಳ ಪರಿಚಿತ ಕಥಾಹಂದರವೇ ತನ್ನ ಜೋಡಣಾಕ್ರಮದಿಂದ ಹೊಸ ಬೆಳಕನ್ನು ಸೂಸುತ್ತಿದೆ. 'ವೈಜ್ಞಾನಿಕವಾದ ವೈದ್ಯಪದ್ಧತಿ, ಸಾಂಪ್ರ ದಾಯಿಕವಾದ 'ಅವೈಜ್ಞಾನಿಕ ವೈದ್ಯಪದ್ಧತಿ ಮತ್ತು ದೈವಭೀರುಗಳ ನಂಬಿಕೆಯ ಚಿಕಿತ್ಸಕ ಗುಣ- ಇವು ಗಳನ್ನು ಒಂದರ ವಿರುದ್ಧ ಇನ್ನೊಂದು ಎಂದು ಜೋಡಿಸದ, ಸಮಾನಾಂತರವಾಗಿ ಜೋಡಿಸಿರುವ ಬಗೆಯಿಂದಾಗಿ, ಇಲ್ಲಿಯ ನಿರೂಪಣಾ ಕ್ರಮವು ಅತ್ತ ಬೈನರಿಗಳನ್ನೂ ಸೃಷ್ಟಿಸದೆ, ಇತ್ತ ಡೈಡ್ಯಾಕ್ಟಿಕ್ಕೂ ಆಗದೆ ಕಥೆಗೊಂದು ಮುಕ್ತತೆಯ ಗುಣವನ್ನು ನೀಡಿದೆ. ಅಲ್ಲದೆ ಕಥೆಗಾರ ಈ ಸಂಘರ್ಷಗಳಿಗೆ ನಿರ್ದಿಷ್ಟ ಉಪಸಂಹಾರ ನೀಡದೆ ಇರುವುದರಿಂದ ಹೆಚ್ಚಿನ ಮಂಥನಕ್ಕೂ ಆಸ್ಪದವಾಗಿದೆ. ‘ಓದಿನ ಅಹಂಕಾರ’ದ ನಿರೂಪಕ ಕೆಲವೊಮ್ಮೆ ಸಿನಿಕಲ್ ಆಗುತ್ತಾ, ಮತ್ತೆ ಕೆಲವೊಮ್ಮೆ ತನ್ನ ಬಗ್ಗೆಯೇ ಸಂಶಯಪಡುತ್ತಾ, ವರದಿ ಮಾಡುತ್ತಿರುವುದರಿಂದ ಕಥೆಯು ಹಲವು ಮಗ್ಗಲುಗಳಿಂದ ವ್ಯಾಖ್ಯಾನಕ್ಕೆ ತೆರೆದುಕೊಳ್ಳುತ್ತದೆ ಎಂಬುದಾಗಿಯೂ ಮುನ್ನುಡಿಯಲ್ಲಿ ಗಿರೀಶ್ ಕಾಸರವಳ್ಳಿ ಅವರು ಬರೆದುಕೊಂಡಿದ್ದಾರೆ.
ರಹಮತ್ ತರೀಕೆರೆ ಅವರ ಬೆನ್ನುಡಿಯ ಮಾತುಗಳು ಕೃತಿಯಲ್ಲಿದ್ದು. ಪರಿವಿಡಿಯಲ್ಲಿ ಯಾನ, ನೆರಳು, ಹೊಗೆ, ಹುಗ್ಗಿ, ಜಡ್ಡು ಎಂಬ ಕಥೆಗಳಿವೆ.
©2024 Book Brahma Private Limited.