ಬೆಂಗಳೂರಿನಲ್ಲಿ ನೆಲೆಸಿರುವ ಡಾ. ದೀಪಾ ಫಡ್ಕೆ ಅವರು ಮೂಲತಃ ದಕ್ಷಿಣಕನ್ನಡದ ಬೆಳ್ತಂಗಡಿಯವರು. ಉಜಿರೆಯಲ್ಲಿ ಪದವಿ ಪಡೆದು, ಕನ್ನಡ ಎಂ.ಎ. ಪದವಿಯನ್ನು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ. 'ಪುರಂದರ ಕನಕರ ಕೀರ್ತನೆ ಗಳಲ್ಲಿ ಅಭಿವ್ಯಕ್ತಿ : ಮನೋವೈಜ್ಞಾನಿಕ ಅಧ್ಯಯನ' ಎನ್ನುವ ವಿಷಯದಲ್ಲಿ ಅಧ್ಯಯನ ನಡೆಸಿರುವ ದೀಪಾ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿ ದೊರೆತಿದೆ. ದೀಪಾ ಫಡ್ಡೆಯವರು, ಸಂಸ್ಕೃತಿ ಕುರಿತ ಬರಹಗಳ ಗುಚ್ಛವಾದ 'ಋತ', ’ಹರಪನಹಳ್ಳಿ ಭೀಮವ್ವ', 'ಡಾ. ಪ್ರದೀಪಕುಮಾರ್ ಹೆಬ್ರಿ-ಮಹಾಕಾವ್ಯಗಳ ಕವಿ' ಹಾಗೂ ’ಲೋಕಸಂವಾದಿ' (ಮೊಗಸಾಲೆಯವರ ಬದುಕು ಬರಹಗಳ ಕುರಿತು), ನಾಡಿಗೆ ನಮಸ್ಕಾರ ಮಾಲೆಗಾಗಿ ಈ ಕೃತಿಯಲ್ಲದೆ ಸುಬ್ರಾಯ ಚೊಕ್ಕಾಡಿಯವರ ಕುರಿತು ಹಾಗೂ ಶಿಕ್ಷಣ ತಜ್ಞ ಡಾ. ಚಂದ್ರಶೇಖರ ದಾಮ್ಲ ಅವರ ಕುರಿತು ಕೃತಿಗಳನ್ನು ಬರೆದಿದ್ದಾರೆ. ಅವರು ಕರ್ನಾಟಕ ಸಂಗೀತ ಹಾಗೂ ಹಿಂದೂಸ್ತಾನಿ ಸಂಗೀತದಲ್ಲೂ ಪರಿಶ್ರಮವಿರುವವರು. ಅವರು ನಾಡಿನ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ವಿಜಯವಾಣಿ, ಉದಯವಾಣಿ, ವಿಜಯಕರ್ನಾಟಕ, ಹೊಸದಿಗಂತ, ಅಸರ್, ಕೊಳಲು, ತಿಲ್ಲಾನಗಳಿಗೆ ಅನೇಕ ಲೇಖನಗಳನ್ನು ಬರೆದಿದ್ದಾರೆ. ಚಂದನ ಹಾಗೂ ಉದಯ ವಾಹಿನಿಗಳಲ್ಲಿ ನಿರೂಪಕಿ ಯಾಗಿದ್ದ ದೀಪಾ ಅವರ ಸಣ್ಣ ಕಥೆಗಳು ಮಯೂರ ಹಾಗೂ ಉದಯವಾಣಿಯಲ್ಲಿ ಪ್ರಕಟವಾಗಿವೆ. ಲೇಖಕಿ, ಕತೆಗಾರ್ತಿಯಾಗಿ ಗಮನ ಸೆಳೆದಿರುವ ದೀಪಾ ಫಡ್ಕೆ ಅವರು ದಿನಪತ್ರಿಕೆಗಳಲ್ಲಿ ಕತೆ-ಲೇಖನ ಪ್ರಕಟಿಸಿದ್ದಾರೆ. ಅನುಪಮಾ ನಿರಂಜನ ಕಥಾ ಸ್ಪರ್ಧೆಯ ಬಹುಮಾನ ಅವರಿಗೆ ದೊರೆತಿದೆ.