‘ಮೂರು ನೀಳ್ಗತೆ’ ಉದಯ್ ಜಾದೂಗಾರ್, ಗಾಯತ್ರಿ ರಾಜ್ ಹಾಗೂ ಉಷಾ ನರಸಿಂಹನ್ ಅವರ ನೀಳ್ಗತೆಗಳ ಸಂಕಲನ. ಈ ನೀಳ್ಗತೆಗಳ ಮೂಲ ಆಕರ ಮಾನವಾಂತರಂಗದ ಪ್ರೇಮ, ಮೋಹ, ವಾತ್ಸಲ್ಯಗಳ ಶೋಧನೆಯಾಗಿದೆ. ಉದಯ್ ಜಾದೂಗಾರರ ದಗಲ್ಬಾಜಿ ಕತೆ ಬಾಲ್ಯ ಕಾಲದ ಗೆಳೆತನದ ಜಾಡು ಹಿಡಿದು ಹೊರಡುವ ಕಥಾನಾಯಕ, ತನ್ನ ಬದುಕಿನ ಬವಣೆಗಳನ್ನು ಬದಿಗೆ ಸರಿಸಿ, ಮೇಲೇರಲು ನಿಚ್ಚಣಿಕೆಯಾದ ನಿಸ್ಪೃಹ ಮಿತ್ರನಿಗೆ ಹಂಬಲಿಸಿ ಕಷ್ಟಗಳಿಗೆ ಶಾಶ್ವತ ಪರಿಹಾರ ಒದಗಿಸಿ ಕೃತಜ್ಞತೆ ಸಲ್ಲಿಸಲು ಹಂಬಲಿಸುವ ಈ ಕತೆ ಸಿನಿಮೀಯ ತಿರುವುಗಳಿಂದ ಕೂಡಿದೆ. ಗಾಯತ್ರಿ ರಾಜ್ಅವರ ಸೆಕೆಂಡ್ ಚಾನ್ಸ್ ಕತೆ ಹೆಣ್ಣಿನ ಮೂಲಸೆಲೆ ಸಹನೆ ಪ್ರೀತಿಗಳತ್ತ ಕೇಂದ್ರಿತವಾಗಿದೆ. ದಾಂಪತ್ಯದ ಹಕ್ಕಾದ ಕಾಮಕ್ಕೆ ಎರವಾದರೂ ಪ್ರೀತಿಯಾದರೂ ಸಿಗಲೆಂದು ಹಂಬಲಿಸಿ, ಪುರುಷಾಹಂಕಾರದ ಕ್ರೌರ್ಯಕ್ಕೆ ಈಡಾಗಿ, ತಾನು ಬದುಕಲ್ಲಿ ಕಳಕೊಂಡ ಪ್ರೀತಿಮೂಲವನ್ನು ಹುಡುಕುತ್ತಾ ಪರಿತಪಿಸುವ ಸಹಜಸುಂದರ ಕತೆ, ಹಾಗೇ ಉಷಾ ನರಸಿಂಹನ್ ರವರ ಪ್ರೇಮ ಪರಿಣಯ ಹೆಣ್ಣು ಗಂಡಿನ ನಡುವಿನ ಪ್ರೇಮ ಕಾಮಗಳು ಬೌದ್ಧಿಕ ಘರ್ಷಣೆಗಳಿಂದ ವೈಚಾರಿಕ ಮೇಲಾಟಗಳಿಂದ ನಲುಗುವ ಚಿತ್ರಗಳಿಂದ ಕೂಡಿದೆ. ತಾತ್ವಿಕ ನೆಲೆಯಲ್ಲಿ ಕಟ್ಟಿದ ಬದುಕು ಕಡೆಗೂ ಭಾವನಾತ್ಮಕ ಕೇಂದ್ರಕ್ಕೆ ಮರಳುವುದು ಎಳೆಎಳೆಯಾಗಿ ನಿರೂಪಿಸಲ್ಪಟ್ಟಿದೆ.
©2024 Book Brahma Private Limited.