ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ ಅವರು ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬೇವಿನಹಳ್ಳಿ(ಜೆ) ಗ್ರಾಮದವರು. ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯಲ್ಲಿ ಸಮಾಜಶಾಸ್ತ್ರದಲ್ಲಿ ಎಂ.ಎ ಪದವಿ ಪೂರ್ಣಗೊಳಿಸಿದ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ‘ವಿಮುಕ್ತ ಬುಡಕಟ್ಟುಗಳ ಸಾಮಾಜಿಕ ಅಧ್ಯಯನ ಮತ್ತು ಹೈದರಬಾದ ಕರ್ನಾಟಕದ ಅಲೆಮಾರಿಗಳ ಸಮಾಜೋ- ಆರ್ಥಿಕ ಸ್ಥಿತಿಗತಿಗಳ ಅಧ್ಯಯನ’ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಪಿಎಚ್.ಡಿ ಮತ್ತು ಪಿಡಿಎಫ್ ಪದವಿ ಪಡೆದಿದ್ದಾರೆ.ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಎನ್.ಎಸ್.ಎಸ್ ಸಂಯೋಜನಾಧಿಕಾರಿಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಓದು ಮತ್ತು ಸಂಶೋಧನೆಗಳ ಕೃಷಿಯನ್ನು ಸಾಹಿತ್ಯಿಕವಾಗಿಯೂ ದಾಖಲಿಸುತ್ತಿರುವ ಮಲ್ಲಿಕಾರ್ಜುನ ಬಿ. ಮಾನ್ಪಡೆಯವರು ಬುಡಕಟ್ಟು ಜಾತಿಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಕೊರಮ, ತಂತಿಬೇಲಿಯೊಳಗಿನ ಜಗತ್ತು, ಗಂಟಿಚೋರ, ಚಪ್ಪರಬಂದ, ಚೆನ್ನದಾಸರ ಸಮುದಾಯ, ಚೆಂಚು ಬುಡಕಟ್ಟು ಸಂಸ್ಕೃತಿ, ಸೂಕ್ಷ್ಮಜಾತಿಗಳು ಎಂಬ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.