‘ಅರ್ಚನ’ ತಿಮ್ಮಪ್ಪದಾಸರ ಪೂಜಾವಿಧಾನ ಕೀರ್ತನೆಗಳು ಈ ಕೃತಿಯನ್ನು ಲೇಖಕ ಎಂ.ವಿ. ಸೀತಾರಾಮಯ್ಯ ಅವರು ಸಂಪಾದಿಸಿದ್ದಾರೆ. 1971ರಲ್ಲಿ ಪ್ರಥಮ ಮುದ್ರಣಕಂಡಿದ್ದ ಈ ಕೃತಿ 2022ಕ್ಕೆ ಮರುಮುದ್ರಣಗೊಂಡಿದೆ. ಮೊದಲ ಮುದ್ರಣಕ್ಕೆ ಡಿ.ವಿ.ಜಿ ಅವರು ಬರೆದಿದ್ದ ಮುನ್ನುಡಿಯೇ ಹೊಸ ಪ್ರಕಟಣೆಯಲ್ಲಿಯೂ ಇದೆ. ಕೃತಿಯ ಕುರಿತು ಬರೆಯುತ್ತಾ ಪರಾತ್ಪರ ವಸ್ತುವನ್ನು ಸಾಕ್ಷಾತ್ತಾಗಿ ಕಂಡು ಅನುಭವಿಸಿದವರೊಬ್ಬರ ಮಾತು ಈ ಗ್ರಂಥದಲ್ಲಿಯ ಸಂಗತಿ. ತಿಮ್ಮಪ್ಪದಾಸರು ನಮಗೆ ಸಮೀಪದವರು-100-120 ವರ್ಷಗಳ ಹಿಂದಿನವರು. ಚಿಕ್ಕನಾಯಕನಹಳ್ಳಿ, ಶ್ರೀರಂಗಪಟ್ಟಣಗಳಲ್ಲಿದ್ದವರು. ಅವರಾಡಿದ ಮಾತು ನಮ್ಮ ಬಳಕೆಯ ಮಾತು. ಅವರ ಭಾಷೆ ನಮಗೆ ಸುಲಭವಾಗಿದೆ. ಆದರೆ ಅವರು ಹೇಳುವ ವಿಷಯ ಗಹನವಾದದ್ದು, ಸಾಮಾನ್ಯವಾದುದಲ್ಲ. ಅದು ನಮ್ಮ ಮನಸ್ಸಿನ ಆಳಕ್ಕೆ ಅಪೂರ್ವವಾದದ್ದು, ಅದು ನಾವು ಇನ್ನೂ ಪ್ರಯತ್ನಿಸಿ ಅನುಭವಕ್ಕೆ ತಂದುಕೊಳ್ಳಬೇಕಾದದ್ದು. ಅದು ರಹಸ್ಯಾನುಭವ, ಅದು ಭಗವದನುಭವ. ಭಕ್ತಿ ಎಂಬುದು ಸಾಮಾನ್ಯವಾಗಿ ಎಲ್ಲರೂ ಎಲ್ಲೆಲ್ಲಿಯೂ ಬಾಯಿಂದ ಬಳಸುವ ಮಾತು. ಅದರ ಅರ್ಥಸಾವರವನ್ನು ಬಲ್ಲವರು ರಹಸ್ಯಾನುಭವಿಗಳು. ಭಕ್ತಿಯು ಪ್ರೀತಿಯ ಒಂದಾನೊಂದು ರೂಪ. ಪ್ರೀತಿಯು ರಹಸ್ಯ ವಸ್ತು. ಲೋಕದಲ್ಲಿ ಪರಸ್ಪರ ಪ್ರಿಯರಾದ ಇಬ್ಬರು ಮನುಷ್ಯ ವ್ಯಕ್ತಿಗಳ ಅಂತರಂಗದ ಅನುಭವಗಳನ್ನು ಮೂರನೆಯವನೊಬ್ಬನು ಊಹೆಯಿಂದ ಕಂಡುಕೊಳ್ಳುವುದು ಎಷ್ಟು ಮಾತ್ರ ಸಾಧ್ಯವಾದೀತು. ಅವರ ಬಹಿರಂಗ ಚೇಷ್ಟಿತಗಳನ್ನು ಅಷ್ಟಿಷ್ಟು ಕಾಣಬಹುದು. ಕಂಡದ್ದಕ್ಕಿಂತ ಕೊಂಚ ಕಡಿಮೆಯಾಗಿಯಾದರೂ ಮಾತುಗಳಿಂದ ವರ್ಣಿಸಬಹುದು. ಆದರೆ ಆ ದಂಪತಿಗಳು ತಮ್ಮ ತಮ್ಮ ಹೃದಯಗಳಲ್ಲಿ ಪಟ್ಟದ್ದನ್ನು ಮೂರನೆಯವನು ಹಾಗೆ ಪಡಲಾದೀತೋ, ಹಾಗೇ ಅಷ್ಟಿಷ್ಟಾದರೂ ಆಯಿತೆನ್ನಬೇಕಾದರೆ ಆ ಮೂರನೆಯವನಿಗೆ ಬಹುಕಾಲದ ಆಳವಾದ ಲೋಕಾನುಭವವಾಗಿರಬೇಕು ಎಂದಿದ್ದಾರೆ ಡಿ.ವಿ.ಜಿ. ಹಾಗೇ ಕೃತಿಯ ಕುರಿತು ತಿಳಿಸುತ್ತಾ ತಿಮ್ಮಪ್ಪದಾಸರ ಸಾಹಿತ್ಯಶೈಲಿ ಲಲಿತವಾಗಿದೆ. ಅವರ ಭಾವಗಳು ಸಾಮಾನ್ಯ ವಿದ್ಯಾಸಂಸ್ಕಾರವುಳ್ಳವರಿಗೂ ಸುಲಭಗ್ರಾಹ್ಯಗಳಾಗಿವೆ. ನಮ್ಮ ನಾಡಿನ ಎಲ್ಲಾ ಜನ ವರ್ಗಗಳವರೂ ಈ ಕೀರ್ತನ ಗ್ರಂಥದಿಂದ ಪ್ರಯೋಜನ ಪಡೆದುಕೊಳ್ಳಬಹುದು ಎಂದಿದ್ದಾರೆ.
©2024 Book Brahma Private Limited.