‘ಪುರಂದರ ಮಹಾಸಂಪುಟ’ ಅರಳುಮಲ್ಲಿಗೆ ಪಾರ್ಥಸಾರತಿ ಅವರ ಕೃತಿ. ಶತಮಾನಗಳ ಕಾಲ ತಮ್ಮ ಅಪೂರ್ವ ಗೀತಸಂಗೀತದ ಮೂಲಕ ಕರ್ನಾಟಕದ ಉದ್ದಗಲಕ್ಕೂ ಗಾಳಿಗಂಧವಾಗಿ ಹರಡಿಕೊಂಡವರು ಪುರಂದರದಾಸರು, ಕನ್ನಡ ದಾಸಸಾಹಿತ್ಯಗಂಗೆ ಪುರಂದರದಾಸರಿಂದ ಭಕ್ತಿಭಾಗೀರಥಿ ಯೆನಿಸಿತು. ಪುರಂದರದಾಸರು ಕರ್ನಾಟಕ ಸಂಗೀತ ಪಿತಾಮಹರು, ದಾಸರು, ತಂಬೂರಿ ಮೀಟಿದರು, ಭವಾಬ್ದಿ ದಾಟಿದರು. ಗೆಜ್ಜೆಯ ಕಟ್ಟಿದರು. ಲಜ್ಜೆಯ ಅಟ್ಟಿದರು. ಅರಿಷಡ್ವರ್ಗಗಳನ್ನು ಕಟ್ಟಿದರು. ವೈಕುಂಠದ ಬಾಗಿಲು ತಟ್ಟಿದರು. ಗಾಯನ ಪಾಡಿದರು. ಹರಿಮೂರ್ತಿ ನೋಡಿದರು, ಪುರಂದರದಾಸರ ತಲೆಯಲ್ಲಿ ಸುಳಿದದ್ದು ಸುಳಾದಿಯಾಯಿತು. ಉಂಡು ಉಟ್ಟು ಉಸಿರಾಡಿದ್ದು ಉಗಾಭೋಗವಾಯಿತು. ಅವರ ಹಾಡುಗಳು ಗಂಧರ್ವಗಾನಕ್ಕೆ ಹೇಳಿ ಮಾಡಿಸಿದಂತಿವೆ. ಭಕ್ತಿಭಾಗೀರಥಿಯನ್ನು ತಮ್ಮ ಹಾಡುಗಳ ಮೂಲಕ ಅವರು ಜನಸಾಮಾನ್ಯರ ಮನೆಬಾಗಿಲಿಗೆ ಹರಿಸಿದರು. ಆ ಮೂಲಕ ಜನರ ಅನುಭವದಿಗಂತಗಳನ್ನು ವಿಸ್ತರಿಸಿದರು. ತಮ್ಮ ಒಂದೊಂದು ಹಾಡನ್ನೂ ಮಂತ್ರಸಿದ್ದಿಯ ಮಹಾನ್ ಗೀತಸಂಗೀತವನ್ನಾಗಿ ಮಾಡಿ ಶತಶತಮಾನಗಳವರೆಗೆ ಅವನ್ನು ಅಮೃತವಾಹಿನಿಯಂತೆ ಅವರು ಹರಿಯಬಿಟ್ಟರು. ಹರಿದಾಸಸಾಹಿತ್ಯ ನಂದಾದೀಪದ ಸಮುಚ್ಚಲನೆಗೆ ದೀಕ್ಷಾಬದ್ದರಾಗಿ ಐದು ದಶಕಗಳಿಂದ ತಮ್ಮನ್ನು ತೊಡಗಿಸಿಕೊಂಡವರು ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ಅರವತ್ತೆಂಟಕ್ಕೂ ಹೆಚ್ಚು ಗ್ರಂಥಗಳನ್ನು ದಾಸಸಾಹಿತ್ಯದ ದಾರಿದೀಪಗಳಾಗಿ ನೀಡಿರುವ ಅರಳುಮಲ್ಲಿಗೆಯವರ ಹರಿದಾಸಸೇವೆ ಬೆಲೆ ಕಟ್ಟಲಾಗದ ಕೊಡುಗೆ. ಪಾರ್ಥಸಾರಥಿವಿಠಲದಾಸ ಅಂಕಿತದಲ್ಲಿ ರಚಿಸಿರುವ ಅವರ ಸಹಸ್ರಾರು ಕೀರ್ತನೆಗಳು ಆಧುನಿಕ ದಾಸಸಾಹಿತ್ಯ ವಾಹಿನಿಗೆ ಮಹತ್ವದ ಸೇರ್ಪಡೆಯೆಂದೇ ಪರಿಗಣಿತವಾಗಿದೆ.
©2025 Book Brahma Private Limited.