ಅಂತರ್ಯಾನ ಕನ್ನಡದ ಪ್ರಸಿದ್ಧ ಲೇಖಕ ಜಿ.ಎನ್. ರಂಗನಾಥ ರಾವ್ ಅವರ ಬದುಕು-ಬರಹ-ಸಾಧನೆಗಳನ್ನು ಪರಾಮರ್ಶಿಸುವ ಒಂದು ವಿಶಿಷ್ಟ ಕೃತಿ, ಟಿ.ವಿ.ವೆಂಕಟಾಚಲ ಶಾಸ್ತ್ರಿ, ಜಿ.ಎಸ್.ಆಮೂರ, 'ಯು.ಆರ್.ಅನಂತ ಮೂರ್ತಿ, ಎಲ್.ಎಸ್.ಶೇಷಗಿರಿ ರಾವ್, ಸಿ.ಎನ್.ರಾಮಚಂದ್ರನ್ ಮುಂತಾದ ಹಿರಿಯರಿಂದ ಹಿಡಿದು, ಜಿ.ಎನ್.ಆರ್ ಅವರ ಗೆಳೆಯರು, ಸರೀಕರು, ಕಿರಿಯ ಸಮಕಾಲೀನರು ಆಸೆಯಿಂದ ಬರೆದ ಬರಹಗಳು ಈ ಸಂಪುಟದಲ್ಲಿ ಸಂಗ್ರಹಿತವಾಗಿವೆ. ರಂಗನಾಥರಾಯರಿಗೆ ವೃತ್ತಿ ಮತ್ತು ಪ್ರವೃತ್ತಿಗಳನ್ನು ಪ್ರತಿನಿಧಿಸುವಂತಹ ಎರಡು ಮುಖಗಳಿವೆ; ಅವು ಪರಸ್ಪರ ಪೂರಕವಾಗಿವೆ ಕೂಡ. ಪತ್ರಿಕೋದ್ಯಮದಲ್ಲಿ ಇರುವವರು ತಮ್ಮ ಸಾಹಿತ್ಯಕ ಬರವಣಿಗೆಯನ್ನು ನಡೆಸಲಾರರು ಎಂಬ ಅಪವ್ಯಾಖ್ಯೆಯನ್ನು ಜಿ.ಎನ್.ಆರ್. ಹುಸಿಮಾಡಿದ್ದಾರೆ. ನಮ್ಮ ಹಳೆಯ ಪೀಳಿಗೆಯ ಕಡೆಂಗೋಡ್ಲು, ಆನಂದಕಂದ, ವೀರಕೇಸರಿ, ಡಿವಿಜಿಯವರಂತೆ ವೃತ್ತಿಗೆ ಮತ್ತು ಪ್ರವೃತ್ತಿಗೆ ಸಂಬಂಧಿಸಿ ಸಮಾಸಮ ತೂಕದ ಮೌಲ್ಯಾನ್ವಿತ ಬರಹಗಳನ್ನು ಜಿ.ಎನ್.ಆರ್. ಮಾಡಿದ್ದಾರೆ. ಪ್ರಚಾರ, ಪ್ರಸಿದ್ಧಿ, ಪ್ರಶಸ್ತಿಗಳಿಗೆ ಹಾತೊರೆಯದ ಜಿಎನ್‌ಆರ್' ಎಂದೇ ಪರಿಚಿತರಾದವರು ಜಿ.ಎನ್.ರಂಗನಾಥ ರಾವ್, ಮೂವತ್ತಕ್ಕೂ ಅಧಿಕ ವರ್ಷಗಳವರೆಗೆ ಪ್ರಜಾವಾಣಿ, ಸುಧಾ, ಮಯೂರ ಪತ್ರಿಕೆಗಳಿಗೆ ದುಡಿದು ನಿವೃತ್ತರಾದ ನಂತರ ಅಧ್ಯಾಪಕರಾಗಿ ಜೊತೆಗೆ ಕಸ್ತೂರಿ ಮಾಸಪತ್ರಿಕೆಗೆ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಕೇವಲ ಪತ್ರಕರ್ತರಾಗಿ ದುಡಿಯದ ಅವರು ಸಾಹಿತ್ಯ ವಿದ್ಯಾರ್ಥಿಯಾದ ಪರಿಣಾಮ ತಾವೂ ಬರೆಯುತ್ತ, ಇತರರನ್ನು ಬೆಳೆಸಿದರು. ಅವರ ಒಲವಿನ ಸಾಹಿತ್ಯ, ರಂಗಭೂಮಿ, ಸಿನಿಮಾ ಕುರಿತು ಬರೆಯುವವರನ್ನು ಕಂಡರೆ ಅವರಿಗೆ ಪ್ರೀತಿ, ಹಾಗೆ ಬರೆಯುವವರಿಗೆ ಉತ್ತೇಜನ ನೀಡಿದರು. ಸದಾ ಶ್ರಮ ವಹಿಸಿ ದುಡಿಯುತ್ತಿದ್ದ ಅವರು, ತಮ್ಮಂತೆ ದುಡಿಯುವವರನ್ನು ಪ್ರೋತ್ಸಾಹಿಸಿದರು. ಇದರ ಪರಿಣಾಮ ನನ್ನಂಥ ನೂರಾರು ಪತ್ರಕರ್ತರನ್ನು ಬೆಳೆಸಿದ ಹೆಗ್ಗಳಿಕೆ ಅವರದು. ಎಂಬತ್ತೊಂದರ ಹರೆಯದಲ್ಲೂ ಓದುವ, ಬರೆಯುವ ಉತ್ಸಾಹಿ ಅವರು. ಇಂಥ ಜಿಎನ್‌ಆರ್ ಅವರ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕುರಿತ ಪರಾಮರ್ಶನ ಗ್ರಂಥವನ್ನು ಹೆಸರಾಂತ ಸಾಹಿತಿ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ ಸಂಪಾದಿಸಿಕೊಟ್ಟಿದ್ದಾರೆ ಎಂದು ಗಣೇಶ ಅಮೀನಗಡ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.