‘ಕಾವಿಕಲೆ’ ಕೃತಿಯು ಕೃಷ್ಣಾನಂದ ಕಾಮತ್ ಅವರ ಕಲೆಯ ಕುರಿತ ಸಂಸ್ಕೃತಿಯ ವಿಚಾರದ ಬರವಣಿಗೆಯಾಗಿದೆ. ಈ ಕೃತಿಯು 11 ಅಧ್ಯಾಯಗಳನ್ನು ಒಳಗೊಂಡಿದೆ. ಕರಾವಳಿಯ ದೇವಾಲಯಗಳು, ಚಿತ್ರ ಶೈಲಿ, ಜಾಮಿತಿ ಚಿತ್ರಗಳು, ಸಮಕಾಲಿನ ವ್ಯಕ್ತಿಗಳು, ಗ್ರಾಮೀಣ ಶೈಲಿ, ಪಶು-ಪಕ್ಷಿಗಳು, ಹೆಂಗಳೆಯರು, ಹೂ ಬಳ್ಳಿಗಳು, ದ್ವಾರಪಾಲಕರು, ಆದಿ ಬೆಳವಣಿಗೆ, ವಿನಾಶದ ಹಾದಿಯಲ್ಲಿ ಇವೆಲ್ಲವನ್ನೂ ಒಳಗೊಂಡಿದೆ.
ಕೃತಿಯ ಬೆನ್ನುಡಿಯಲ್ಲಿ ಕೆಲವೊಂದು ವಿಚಾರಗಳು ಹೀಗೆ ಪ್ರಸ್ತಾಪಿತವಾಗಿದೆ : ಕಲೆಯ ದೃಷ್ಟಿಯಿಂದ ಪರಿಗಣಿಸಬಹುದಾದ ಆದರೆ ಹೆಚ್ಚು ಪ್ರಚಾರ ದೊರೆಯದೆ ಅವಜ್ಞೆಗೆ ಒಳಗಾದ ಕಲಾ ಪ್ರಕಾರಗಳನ್ನು ಗುರುತಿಸಿ ,ಬೆಳಕಿಗೆ ತರುವುದು ಪ್ರಸ್ತುತ ಅಕಾಡೆಮಿಯ ಯೋಜನೆಗಳಲ್ಲಿ ಮುಖ್ಯವಾದುದು. ಅಂತೆಯೇ, ಕರ್ನಾಟಕದ ಉತ್ತರ ಕರಾವಳಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದೊರೆಯುವ ಕಾವಿಕಲೆಯ ಚಿತ್ರಗಳ ಬಗ್ಗೆ ಇದೇ ಪ್ರಥಮ ಬಾರಿಗೆ ಪುಸ್ತಕ ರೂಪದಲ್ಲಿ ಪರಿಚಯಿಸುತ್ತಿದ್ದೇವೆ. ಒಂದು ಕಾಲಕ್ಕೆ ಉತ್ತರ ಕನ್ನಡ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ, ಮನೆ-ಮನೆಗಳಲ್ಲಿ ಗುಡಿಗೋಪುರಗಳಲ್ಲಿ ಕಡ್ಡಾಯವೆಂಬಂತೆ ಇರುತ್ತಿದ್ದ ‘ಕಾವಿಕಲೆ’ ಇಂದು ಕಣ್ಮರೆಯಾಗುತ್ತಿವೆ, ವಿರಳವಾಗುತ್ತಿವೆ. ಇಂದಿನ ಆಧುನಿಕ ಕಟ್ಟಡಗಳಲ್ಲಿ ಈ ಬಗೆಯ ಚಿತ್ರಣಗಳಿಗೆ ಅವಕಾಶವೂ ಇಲ್ಲ. ಕಾಲನ ಆಘಾತಕ್ಕೆ ಸಿಕ್ಕಿ ಹಳೆಯದೆಲ್ಲವೂ ನಾಶವಾಗುತ್ತಿವೆ. ಅಳಿದುಳಿದಿರುವುದನ್ನಾದರೂ ಉಳಿಸಿ, ದಾಖಲಿಸಬೇಕಾಗಿದೆ. ಇಪ್ಪತ್ತು ವರ್ಷಗಳ ಹಿಂದಿನ ಸಂಗತಿ ನಾನು ಮೈಸೂರು ವಿಶ್ವವಿದ್ಯಾಲಯದ ಜಾನಪದ ವಸ್ತುಸಂಗ್ರಹಾಲಯದ ಕ್ಷೇತ್ರಕಾರ್ಯದಲ್ಲಿ ಉರಿಮಂಜಿನ ಅಂದರೆ ಕಾವಿಬಣ್ಣದ ಚಿತ್ರಗಳನ್ನು ನೋಡಿದ್ದೆ. ಕರ್ನಾಟಕದ ಯಾವ ಭಾಗದಲ್ಲೂ ಕಾಣದ ಈ ಕಲೆ ನನ್ನನ್ನು ಚಕಿತಗೊಳಿಸಿತು. ಅಲ್ಲಿ ಪ್ರಕಟಣೆಗಾಗಿ ಇರಿಸಿದ ಈ ಬಗೆಯ ಚಿತ್ರಗಳನ್ನು ಕೊಂಡಿದ್ದೆ ಎಂದು ವಿಶ್ಲೇಷಿಸಿದ್ದಾರೆ.
©2024 Book Brahma Private Limited.