ಲೇಖಕ ಪ್ರೊ.ಲಕ್ಷ್ಮಣ್ ತೆಲಗಾವಿ ಅವರ ಕೃತಿ ʻಜಾನಪದದಲ್ಲಿ ಮಳೆ ಮತ್ತು ಬರ-ಒಂದು ನೋಟʼ. ಪುಸ್ತಕದಲ್ಲಿ ಸಾಹಿತ್ಯಿಕ, ಜಾನಪದೀಯ, ಆರ್ಥಿಕ ಹಾಗೂ ಸಾಮಾಜಿಕ ದೃಷ್ಟಿಕೋನಗಳಿಂದ ಮಳೆ, ಕೃಷಿ ಮತ್ತು ಬರಗಾಲ ಕುರಿತ ವಿಸ್ತೃತ ಒಳನೋಟಗಳಿವೆ. ಹದಿನೈದು ಅಧ್ಯಾಯಗಳ ಜೊತೆಗೆ ಒಂಬತ್ತು ಅನುಬಂಧಗಳನ್ನು ಹೊಂದಿರುವ ಈ ಕೃತಿ ಗ್ರಾಂಥಿಕ ಹಾಗೂ ಮೌಖಿಕ ಆಧಾರಗಳೆರಡನ್ನೂ ಸೊಗಸಾಗಿ ಬಳಸಿಕೊಂಡು ರಚಿತವಾಗಿದೆ ಹಾಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಆಚಾರ್ಯ ಕೃತಿಯಾಗಿ ರೂಪುಗೊಂಡಿದೆ. ಮಳೆ ಸಂಬಂಧಿ ಸಂಪ್ರದಾಯಗಳು, ಆಚರಣೆಗಳು, ಮಳೆಶಕುನಗಳು, ಪರ್ಜನ್ಯಸಂಬಂಧಿ ಶಿಷ್ಟವಿಧಿಗಳು, ಆ ಪರಿಕಲ್ಪನೆ ಬೆಳೆದುಬಂದ ಬಗೆ, ಮಳೆ ಕರೆಯುವ ಶಕ್ತಿ ಇದ್ದವರೆಂದು ಹೇಳಲಾಗುವ ಕೆಲವು ಪವಾಡಪುರುಷರು ಮಾಡಿದ ಪವಾಡಗಳ ದಾಖಲೆಗಳು, ಮಳೆಗಾಗಿ ನಡೆಸಿದ ಮೋಡಬಿತ್ತನೆಯಂಥಾ ವೈಜ್ಞಾನಿಕ ಕಾರ್ಯಕ್ರಮಗಳು ಹೀಗೆ ಈ ವಿಷಯಕ್ಕೆ ಸಂಬಂಧಿಸಿದ ಸಾಹಿತ್ಯಿಕ ದಾಖಲೆಗಳನ್ನೂ ಜೋಡಿಸಿದ್ದಾರೆ. ಪ್ರೊ.ತೆಲಗಾವಿಯವರು ಜೀವಮಾನ ಪೂರ್ತಿ ತಲಸ್ಪರ್ಶಿ ಸಂಶೋಧನೆಯನ್ನೆ ನಡೆಸುತ್ತಾ ಬಂದಿದ್ದಾರೆ. ಅವರ ಬರಹಗಳಲ್ಲಾಗಲಿ ಜೀವನಶೈಲಿಯಲ್ಲಾಗಲಿ ಯಾವುದೇ ಅಬ್ಬರವಿಲ್ಲ. ತಮ್ಮ ತವರು ಜಿಲ್ಲೆಯಾದ ಚಿತ್ರದುರ್ಗದ ಇತಿಹಾಸ, ಅಲ್ಲಿನ ನಾಯಕ ಮನೆತನಗಳ ಬಗ್ಗೆ ಪ್ರಕಟಿಸಿರುವ ಶೋಧಗಳು ನಿರ್ಲಕ್ಷಿಸಲಾರದಂಥವು. ಈ ಕೃತಿಯಲ್ಲಿಯೂ ಚಿತ್ರದುರ್ಗದ ಬರ ಕುರಿತಾದ ಒಂದು ಅಧ್ಯಾಯವೇ ಇದೆ. ಇತರ ಅಧ್ಯಾಯಗಳಲ್ಲೂ ಚಿತ್ರದುರ್ಗ ಜಿಲ್ಲೆಯ ವಿವಿಧೆಡೆಗಳಲ್ಲಿ ಮಳೆಗೆ ಸಂಬಂಧಿಸಿದಂತೆ ಮಾಡುವ ಆಚರಣೆಗಳ ವಿವರಗಳಿವೆ.
©2024 Book Brahma Private Limited.