‘ಮಾನವ ಹಕ್ಕುಗಳು’ ರೇವಯ್ಯ ಒಡೆಯರ್ ಅವರ ಅಧ್ಯಯನ ಕೃತಿ ಇದು. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಮೂಲತಃ ಪ್ರಾಣಿಯಾದ ಮನುಷ್ಯ `ಮಾನವೀಯತೆ‘ಯನ್ನು ರೂಢಿಸಿಕೊಂಡಿದ್ದರಿಂದ ಪ್ರಾಣಿಗಳಿಗಿಂತ ಭಿನ್ನನಾಗಿ ಮಾನವನೆಂದು ಕರೆಸಿಕೊಂಡ. ಪ್ರತಿಯೊಬ್ಬರ ಆಳದಲ್ಲಿರುವ ಸಹಜ ಕ್ರೌರ್ಯ, ಹಿಂಸಾತ್ಮಕ ಸ್ವಭಾವವನ್ನು ಮೀರುತ್ತಲೇ ವ್ಯಕ್ತಿತ್ವವನ್ನು ಕಟ್ಟಿಕೊಂಡ. ಹಿಂಸೆ ತ್ಯಜಿಸಿ ಸದ್ವ್ಯಕ್ತಿಯಾಗುವುದೇ ಸಮಾಜದ ಪುರೋಗಾಮಿ ಚಿಂತನೆ. ಮನುಷ್ಯನ ಆಳದಲ್ಲಿರುವ ಪ್ರಾಣಿ ಸಹಜ ಹಿಂಸಾ ಮನೋವಿಕಾರ ಕೆಲವೊಮ್ಮೆ ರಕ್ಕಸ ಕುಣಿತ ಮಾಡಿಬಿಡುತ್ತದೆ. ದೇಶಗಳ ಮಧ್ಯದ ಯುದ್ಧದಲ್ಲಿ,ಪೊಲೀಸ್ ದೌರ್ಜನ್ಯದಲ್ಲಿ, ಜಾತಿ ವೈಷಮ್ಯದಲ್ಲಿ, ಕೋಮು ಗಲಭೆಯಲ್ಲಿ ಮನುಷ್ಯ ಮತ್ತೆ ಕಾಡು ಮೃಗಗಳನ್ನೂ ಮೀರಿಸುವ ಹಿಂಸಾಪ್ರವೃತ್ತಿ ಪ್ರದರ್ಶಿಸಿಬಿಡುತ್ತಾನೆ. ಹೀಗೆ ಕೌರ್ಯ ವಿಜೃಂಭಿಸಿದಾಗೆಲ್ಲಾ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿರುತ್ತದೆ. ಸಹವರ್ತಿಗಳ ಹಕ್ಕುಗಳನ್ನು ನಿರಾಕರಿಸುತ್ತಲೇ ತಮ್ಮ ಮೇಲಧಿಕಾರವನ್ನು ಮನುಷ್ಯ ಸ್ಥಾಪಿಸುತ್ತಾನೆ. ಇತಿಹಾಸದುದ್ದಕ್ಕೂ ಇಂತಹ ಸಂಗತಿಗಳು ಸಾಕಷ್ಟು ನಡೆದಿವೆ. ಡಾ. ರೇವಯ್ಯ ಒಡೆಯರ್ ರಚಿಸಿದ `ಮಾನವ ಹಕ್ಕುಗಳು – ಮಾನವತೆಯ ಶಾಸನರೂಪ‘ ಎಂಬ ಪುಸ್ತಕ ಮಾನವೀಯ ನೆಲೆಯ ಹುಡುಕಾಟ. ವಿವಿಧ ಆಯಾಮಗಳಿಂದ ಮಾನವ ಹಕ್ಕುಗಳನ್ನು ಶೋಧಿಸುವ ಒಡೆಯರ್, ಅದಕ್ಕೊಂದು ಸೈದ್ಧಾಂತಿಕ ನೆಲೆಗಟ್ಟು ರೂಪಿಸಿಕೊಡುತ್ತಾರೆ. ಶಾಸನಾತ್ಮಕ ವಿವರಗಳಿಗೆ ಸೀಮಿತವಾಗದೇ ವಾಸ್ತವ ವಿವರಗಳನ್ನು ಮುಖಾಮುಖಿಯಾಗಿಸುತ್ತಾ, ಮಾನವ ಹಕ್ಕುಗಳ ಉಲ್ಲಂಘನೆ ಬಗೆಗಳನ್ನು ಕಣ್ಮುಂದೆ ಕಟ್ಟಿಕೊಡುತ್ತಾರೆ.
©2025 Book Brahma Private Limited.